ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ– ಲಂಬಾಣಿ ಸಮುದಾಯದಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

Last Updated 30 ಮಾರ್ಚ್ 2023, 11:19 IST
ಅಕ್ಷರ ಗಾತ್ರ

ಕನಕಗಿರಿ (ಕೊಪ್ಪಳ ಜಿಲ್ಲೆ): ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಅಡವಿಬಾವಿ ಚಿಕ್ಕತಾಂಡದ ಲಂಬಾಣಿ ಸಮುದಾಯದ ಜನ ವಿಧಾನಸಭಾ ಚುನಾವಣಾ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಗ್ರಾಮದಲ್ಲಿ ದೊಡ್ಡ ಬ್ಯಾನರ್‌ಗಳನ್ನು ಹಾಕಲಾಗಿದೆ. ಮೊದಲ ಬ್ಯಾನರ್‌ನಲ್ಲಿ ‘ಬಿಜೆಪಿಯ ಎಲ್ಲಾ ನಾಯಕರ ಹಾಗೂ ಮುಖಂಡರ ಪ್ರವೇಶವನ್ನು ಗ್ರಾಮಕ್ಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ಬರೆಯಲಾಗಿದೆ. ಬಳಿಕ ಮತ್ತೊಂದು ಪೋಸ್ಟರ್‌ ಹಾಕಲಾಗಿದ್ದು ‘ನಮ್ಮ ತಾಂಡಕ್ಕೆ ಎಲ್ಲಾ ಪಕ್ಷಗಳ ಮುಖಂಡರ ಪ್ರವೇಶ ನಿಷೇಧಿಸಲಾಗಿದೆ’ ಎಂದು ಬರೆಯಲಾಗಿದೆ. ಅಲ್ಲಿನ ಜನ ಗ್ರಾಮದ ಸೇವಾಲಾಲ್‌ ದೇವಾಲಯದ ಮುಂಭಾಗದಲ್ಲಿ ‘ಚುನಾವಣೆ ಬಹಿಷ್ಕರಿಸುತ್ತೇವೆ’ ಎಂದು ಬ್ಯಾನರ್‌ ಹಿಡಿದು ಪ್ರತಿಭಟನೆ ನಡೆಸಿದರು.

ತಾಂಡಾದ ಹೋರಾಟಗಾರ ಶಿವಪ್ಪ ಚವ್ಹಾಣ ಮಾತನಾಡಿ ‘ರಾಜ್ಯದ ವಿವಿಧ ತಾಂಡಗಳಲ್ಲಿ ವಾಸವಿರುವ ಬಂಜಾರ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿದ್ದಾರೆ. ಸದಾಶಿವ ಆಯೋಗದ ವರದಿ ಶಿಫಾರಸು ಕೇಂದ್ರ ಒಪ್ಪಿದರೆ ಲಂಬಾಣಿ ಸಮುದಾಯಕ್ಕೆ ಅನ್ಯಾಯವಾಗಲಿದೆ’ ಎಂದರು.

‘ಒಳ ಮೀಸಲಾತಿ ಮೂಲಕ ಬಿಜೆಪಿ ಸರ್ಕಾರ ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ಬಂಜಾರ ಸಮುದಾಯದ ಬಿಜೆಪಿ ಶಾಸಕರು ಹಾಗೂ ಸಚಿವರು
ಸರ್ಕಾರದ ಕ್ರಮವನ್ನು ಸಮರ್ಥನೆ ಮಾಡಿಕೊಂಡು ಸಮಾಜದ ಜನರಿಗೆ ದ್ರೋಹ ಎಸಗಿದ್ದಾರೆ. ಸಚಿವ ಪ್ರಭು ಚವ್ಹಾಣ, ಸಂಸದ ಉಮೇಶ ಜಾಧವ ಹಾಗೂ ಶಾಸಕ ಪಿ. ರಾಜೀವ ಅವರಿಗೆ ಸಮಾಜದ ಬಗ್ಗೆ ನಿಜವಾದ ಕಾಳಜಿಯಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಿತ್ತು’ ಎಂದರು.

ಬಂಜಾರ ಸಮುದಾಯದ ಪ್ರಮುಖರಾದ ಕೃಷ್ಣ ನಾಯ್ಕ, ನೀಲಪ್ಪ ಚವ್ಹಾಣ, ಅಮರೇಶ ಚವ್ಹಾಣ, ಸೋಮಪ್ಪ ಪವಾರ, ಶೀನಪ್ಪ ರಾಠೋಡ್, ಬಸವಂತ, ಮಹೇಶ ಪ್ರತಿಭಟನೆ ವೇಳೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT