ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ವಕೀಲರು ಕಾನೂನು ಕೈಗೆ ತೆಗೆದುಕೊಳ್ಳಬಾರದು'

Last Updated 4 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಕೊಪ್ಪಳ:ದೇಶಕ್ಕಾಗಿ ಅನೇಕ ವಕೀಲರು ತಮ್ಮ ತನು-ಮನ-ಪ್ರಾಣ ಅರ್ಪಿಸಿದ್ದಾರೆ. ಅಂಬೇಡ್ಕರ್ ಸಂವಿಧಾನ ಬರೆಯುವ ಮೂಲಕ ವಕೀಲರ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಆದರೆ ಕಾನೂನು ರಕ್ಷಕರಾದ ನಾವು ಪೊಲೀಸರೊಂದಿಗೆ ಗಲಾಟೆ ಮಾಡಿಕೊಂಡು ಕಾನೂನು ಕೈಗೆ ತೆಗೆದುಕೊಂಡಿದ್ದು ಎಷ್ಟು ಸರಿ ಎಂಬುವುದನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ್ ಎಸ್. ಅಭಿಪ್ರಾಯಪಟ್ಟರು.

ನರಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು,ದೇಶವನ್ನು ಕಟ್ಟಿದ ನೆಹರು, ಗಾಂಧಿ, ಸರ್ದಾರ ಪಟೇಲ್ ಎಲ್ಲರೂ ವಕೀಲರೇ ಆಗಿದ್ದರು.ಬ್ರಿಟಿಷರನ್ನು ದೇಶದಿಂದ ಓಡಿಸಿದ್ದು ವಕೀಲರೇ,ಬೇರೆ ಯಾರಾದರೂ ದೇಶ ಕಟ್ಟಿದ್ದರೆ ಅನೇಕ ಭಾಗಗಳಾಗಿ ವಿಭಾಗವಾಗಿ ಒಡೆಯುತ್ತಿತ್ತು ಎಂದು ಹೇಳಿದರು.

'ದೇಶದಲ್ಲಿ ಬಡತನ, ಹಸಿವಿನಿಂದ ಅನೇಕರು ಸಾಯುತ್ತಿದ್ದಾರೆ. ಅವರ ಬಗ್ಗೆ ನಮ್ಮ ಚಿಂತನೆ ಏನು ? ಎಲ್ಲ ಪಕ್ಷಗಳಲ್ಲಿ ವಕೀಲರಿದ್ದೀರಿ. ಆದರೂ ನಾವು ನಮ್ಮನ್ನು ರಕ್ಷಿಸಿಕೊಂಡಿಲ್ಲ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಭ್ರಷ್ಟಾಚಾರದಲ್ಲಿ ಮುಳುಗಿ ದೇಶ ಶೋಚನೀಯ ಸ್ಥಿತಿಯಲ್ಲಿದೆ. ಇದೆಲ್ಲವನ್ನು ಸರಿ ಮಾಡುವ ಜವಾಬ್ದಾರಿ ವಕೀಲರ ಮೇಲಿದೆ' ಎಂದು ಮಾರ್ಮಿಕವಾಗಿ ನುಡಿದರು.

ಹುಬ್ಬಳ್ಳಿ ಹಿರಿಯ ವಕೀಲ ಎ.ಜಿ.ಅನ್ನದಾನಿಮಠ ಮಾತನಾಡಿ, ಬಹಳಷ್ಟು ವಕೀಲರ ಸಂಘಗಳು ದಿನಾಚರಣೆ ಆಚರಿಸಿಕೊಳ್ಳುವುದಿಲ್ಲ. ಆದರೆ, ಕೊಪ್ಪಳದಲ್ಲಿ ನಮ್ಮ ದಿನಾಚರಣೆ ಮಾಡಿದ್ದು ಖುಷಿ ತಂದಿದೆ. ನಮ್ಮ ಇತಿಹಾಸ, ವೃತ್ತಿ ಬಗ್ಗೆ ಅರಿಯಲು ಇಂಥ ವೇದಿಕೆಗಳು, ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.

ಎ.ವಿ. ಕಣವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಎಂ.ಭೂಸನೂರಮಠ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.

ನ್ಯಾಯಾಧೀಶರಾದ ಟಿ.ಶ್ರೀನಿವಾಸ, ಹರೀಶ ಆರ್.ಪಾಟೀಲ, ನಗರಠಾಣೆಪಿಐ ಮೌನೇಶ್ವರ ಪಾಟೀಲ, ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಚ್.ಮುರಡಿ, ಹಿರಿಯ ವಕೀಲರಾದ ಆಸೀಫ್ ಅಲಿ, ಸಂಧ್ಯಾ ಮಾದಿನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT