ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರಿಗೆ ಸರ್ಕಾರ ರಕ್ಷಣೆ ನೀಡಲಿ

ಹೊಸಪೇಟೆಯ ವಕೀಲ ವೆಂಕಟೇಶ ಹತ್ಯೆ ಖಂಡಿಸಿ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ
Last Updated 2 ಮಾರ್ಚ್ 2021, 3:57 IST
ಅಕ್ಷರ ಗಾತ್ರ

ಯಲಬುರ್ಗಾ: ಹೊಸಪೇಟೆ ನ್ಯಾಯಾಲಯದ ಆವರಣದಲ್ಲಿ ವಕೀಲ ವೆಂಕಟೇಶ ಅವರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಇಲ್ಲಿನ ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಸಭೆ ಸೇರಿ ವಕೀಲರು,‘ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಆನಂದ ಉಳ್ಳಾಗಡ್ಡಿ ಮಾತನಾಡಿ,‘ಇತ್ತೀಚೆಗೆ ವಕೀಲರ ಮೇಲೆ ಹಲ್ಲೆ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಆದರೂ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಹೊಸಪೇಟೆಯ ಕೋರ್ಟ್‌ ಆವರಣದಲ್ಲಿಯೇ ಹಾಡುಹಗಲೆ ವಕೀಲರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆಯು ರಾಜ್ಯದಾದ್ಯಂತ ವಕೀಲರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಭಯದ ನೆರಳಲ್ಲಿಯೇ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ಯೆ ಮಾಡಿದ ವ್ಯಕ್ತಿಯನ್ನು ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಸಂತ್ರಸ್ಥ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ರಕ್ಷಣೆ ನೀಡಬೇಕು’ ಎಂದರು.

ಸಾರ್ವಜನಿಕರ ಹಿತ ಕಾಪಾಡುವುದು ಹಾಗೂ ಕಕ್ಷಿದಾರರ ಹಿತಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುವ ವಕೀಲರ ರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಕಾಯ್ದೆ ಜಾರಿಗೆ ತರುವ ಮೂಲಕ ಕಾನೂನು ಪರಿಪಾಲಕರಿಗೆ ಭದ್ರತೆ
ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಕೀಲರ ಹಿತರಕ್ಷಣೆ ಹಾಗೂ
ಭದ್ರತಾ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಹಿರಿಯ ವಕೀಲ ಬಿ.ಎಂ.ಶಿರೂರ, ರಾಜಶೇಖರ ನಿಂಗೋಜಿ, ಮಲ್ಲನಗೌಡ ಪಾಟೀಲ, ಅಕ್ಕಮಹಾದೇವಿ ಪಾಟೀಲ, ಜಿ.ಕೆ. ಲಾಲಗೊಂಡರ, ಸಿ.ಎಸ್.ಬನಪ್ಪಗೌಡ್ರ, ಎಂ.ಎ.ಪಾಟೀಲ, ಎಸ್.ಆರ್.ಬಡಿಗೇರ, ವೀರನಗೌಡ, ಎಂ.ಎಸ್. ಸಾವಳಗಿಮಠ, ಆರ್.ಜಿ. ಕುಷ್ಟಗಿಶೆಟ್ರ, ಈರಣ್ಣ ಕೋಳೂರ ಹಾಗೂ ದೇವಪ್ಪ
ಇದ್ದರು.

ಉಪತಹಶೀಲ್ದಾರ್ ನಾಗಪ್ಪ ಸಜ್ಜನ್ ಅವರು ವಕೀಲರಿಂದ ಮನವಿ ಸ್ವೀಕರಿಸಿದರು

ಮಾನವ ಸರಪಳಿ

ಕುಷ್ಟಗಿ: ‘ವಕೀಲರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು’ ಎಂದು ವಕೀಲರು ಒತ್ತಾಯಿಸಿದ್ದಾರೆ.

ಈಚೆಗೆ ಹೊಸಪೇಟೆಯಲ್ಲಿನ ನ್ಯಾಯಾಲಯದ ಆವರಣದಲ್ಲಿ ನಡೆದ ವಕೀಲ ವೆಂಕಟೇಶ ತಾರಳ್ಳಿ ಅವರ ಹತ್ಯೆ ಖಂಡಿಸಿ ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಮತ್ತು ವಕೀಲರು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ
ಸಲ್ಲಿಸಿದರು.

‘ವಕೀಲ ವೆಂಕಟೇಶ ಅವರ ಹತ್ಯೆಗೆ ಸಂಬಂಧಿಸಿದ ದುಷ್ಕರ್ಮಿಗಳ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ವಕೀಲರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದು ಕಳವಳದ ಸಂಗತಿಯಾಗಿದೆ. ವಕೀಲರು ಮತ್ತು ಅವರ ಕುಟುಂಬದವರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಈ ವಿಷಯವನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ತಹಶೀಲ್ದಾರ್ ಎಂ.ಸಿದ್ದೇಶ ಮನವಿ ಸ್ವೀಕರಿಸಿದರು.

ಅದಕ್ಕೂ ಮೊದಲು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಬಸವೇಶ್ವರ ವೃತ್ತದಲ್ಲಿ ವಕೀಲರು ಮಾನವ ಸರಪಳಿ ನಿರ್ಮಿಸಿ ಗಮನಸೆಳೆದರು.

ಈ ಸಂದರ್ಭದಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಹೊಳಿಯಪ್ಪ ಕುರಿ, ಉಪಾಧ್ಯಕ್ಷ ಶ್ರೀನಿವಾಸ ಈಳಗೇರ ಸೇರಿದಂತೆ ಅನೇಕ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT