ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸಿಬ್ಬಂದಿಗೆ ಸಲಕರಣೆ ನೀಡಿ: ಅಧಿಕಾರಿಗಳ ಸಭೆಯಲ್ಲಿ ಲಕ್ಷ್ಮಣ ಸವದಿ ಸೂಚನೆ

Last Updated 8 ಏಪ್ರಿಲ್ 2020, 10:48 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಅಗತ್ಯ ಕಿಟ್‌, ಸಲಕರಣೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ತೆಗೆದುಕೊಂಡ ಕ್ರಮಗಳ ಕುರಿತ ಪರಿಶೀಲನಾ ಸಭೆಯಲ್ಲಿಅವರು ಮಾತನಾಡಿದರು.

ದೇಶದಾದ್ಯಂತ ವೈದ್ಯರು, ನರ್ಸ್, ಇತರೆ ಆರೋಗ್ಯ ಸಹಾಯಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿದಿನ ತಮ್ಮ ಪ್ರಾಣದ ಹಂಗು ತೊರೆದು ಸೋಂಕಿತರ ಪತ್ತೆ ಹಾಗೂ ಚಿಕಿತ್ಸೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ರಕ್ಷಣೆಗಾಗಿ ಅಗತ್ಯವಿರುವ ವೈಯಕ್ತಿಕ ರಕ್ಷಣಾ ಸಲಕರಣೆ, ಎನ್-95 ಮಾಸ್ಕ್‌ಗಳನ್ನು ಜಿಲ್ಲೆಯ ಅಗತ್ಯಕ್ಕೆ ತಕ್ಕಂತೆ ಒದಗಿಸಿ ಎಂದು ಸೂಚನೆ ನೀಡಿದರು.

ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್)ಯಲ್ಲಿ ಮಂಜೂರಾಗಿರುವ ವೈದ್ಯರ ಹುದ್ದೆಯನ್ನು ಭರ್ತಿ ಮಾಡಿ. ಉಳಿದಂತೆ ಆರೋಗ್ಯ ಸಹಾಯಕರು ಹಾಗೂ ಸಿಬ್ಬಂದಿಯನ್ನು ಅಗತ್ಯಕ್ಕನುಸಾರವಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಿ. ಮುಂಜಾಗ್ರತಾ ಕ್ರಮವಾಗಿ ಕೋವಿಡ್-19 ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಪುರಸಭೆಗಳ ವ್ಯಾಪ್ತಿಯಲ್ಲಿ ಪುರಸಭೆ ವಾಹನ ಬಳಸಿಕೊಂಡು ಪಟ್ಟಣದ ಮನೆ ಮನೆಗೆ ಪಡಿತರವನ್ನು ವಿತರಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಜಿ.ಪಂ ಅಧ್ಯಕ್ಷ ಎಚ್.ವಿಶ್ವನಾಥರೆಡ್ಡಿ, ಸಂಸದ ಕರಡಿ ಸಂಗಣ್ಣ, ಶಾಸಕರಾದ ರಾಘವೇಂದ್ರ ಕೆ. ಹಿಟ್ನಾಳ, ಅಮರೇಗೌಡ ಬಯ್ಯಾಪುರ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಬಸವರಾಜ ದಢೇಸೂಗೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಎಸ್.ಪಾಟೀಲ, ಎಸ್ಪಿ ಸಂಗೀತಾ, ಜಿ.ಪಂ ಸಿಇಒ ರಘುನಂದನ್ ಮೂರ್ತಿ,ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಲಿಂಗರಾಜ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT