ಸಮಸ್ಯೆಗಳ ಸುಳಿಯಲ್ಲಿ ‘ಸಾಹಿತ್ಯ’ ಭವನ

7
ಸಾಹಿತ್ಯಭವನ ನಿರ್ವಹಣೆ ಜವಾಬ್ದಾರಿ ಯಾರಿಗೆ?

ಸಮಸ್ಯೆಗಳ ಸುಳಿಯಲ್ಲಿ ‘ಸಾಹಿತ್ಯ’ ಭವನ

Published:
Updated:
Deccan Herald

ಕೊಪ್ಪಳ: ನಗರದ ಹೃದಯ ಭಾಗದಲ್ಲಿರುವ ಸಾಹಿತ್ಯಭವನದ ಸುತ್ತಮುತ್ತ ಸಂಪೂರ್ಣ ಗಲೀಜು ಆವರಿಸಿದ್ದು, ಸ್ವಚ್ಛತೆ ಕಾರ್ಯ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಿಲ್ಲ.

ಸಾಹಿತ್ಯ ಭವನದ ಹಿಂಭಾಗದ ಪ್ರದೇಶದಲ್ಲಿ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಮಾಡುತ್ತಿದ್ದು, ಇದರಿಂದಾಗಿ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಭವನದ ಸುತ್ತ ಸಣ್ಣ ಪುಟ್ಟ ಗಿಡ ಬೆಳೆದಿದ್ದು, ಎಲ್ಲೆಂದರಲ್ಲಿ ಕಸ ಹಾಕಲಾಗಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿವೆ. ಸುತ್ತುಗೋಡೆ ಇಲ್ಲದಿರುವುದು ಅನೈರ್ಮಲ್ಯಕ್ಕೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ಬಹಳಷ್ಟು ಹಣ ವ್ಯಯಿಸಿ ಸಾಹಿತ್ಯಭವನವನ್ನು ನವೀಕರಿಸಲಾಗಿದೆ. ಅದರ ನಿರ್ವಹಣೆಯ ಕಡೆಗೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಹೀಗಾಗಿ ಎಷ್ಟು ಬಾರಿ ದುರಸ್ತಿ ಮಾಡಿದರೂ ಪ್ರಯೋಜನ ಇಲ್ಲದಂತಾಗಿದೆ. ಭವನದ ಮುಂದೆ ಪೈಪ್‌ ಒಡೆದು 15 ದಿನಕ್ಕೂ ಹೆಚ್ಚಾಗಿದೆ. ಆದರೆ ಈವರೆಗೂ ಅದನ್ನು ದುರಸ್ತಿ ಮಾಡಿಸುತ್ತಿಲ್ಲ.ಇದರಿಂದಾಗಿ ನೀರು ಪೋಲಾಗಿ ತಗ್ಗು ‍ಪ್ರದೇಶದಲ್ಲಿ ನೀರು ನಿಂತಿರುವುದರಿಂದ ಕೆಲವರು ಕಾಲುಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ.  ವಾಹನ ಸವಾರರ ಸಂಚಾರಕ್ಕೂ ತೊಂದರೆ ಉಂಟಾಗಿದೆ.

ಸಮಸ್ಯೆಗಳ ‘ಭವನ’: ಸಾಹಿತ್ಯ ಭವನವನ್ನು ಇತ್ತೀಚಿಗೆ ₹ 70 ಲಕ್ಷ ವೆಚ್ಚದಲ್ಲಿ ನವೀಕರಿಸಲಾಗಿದೆ. ಆದರೂ ಸಹಿತ ವೇದಿಕೆಗೆ ಬೇಕಾಗುವ ಆಸನ, ಡಯಾಸ್‌, ಸ್ಕ್ರೀನ್‌ಗಳನ್ನು ಖಾಸಗಿಯವರಿಂದ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಸಂಘಟಕ ರಾಜಾಬಕ್ಷಿ ಎಚ್‌.ವಿ.ಹೇಳಿದರು.

‘ಖಾಸಗಿ ವ್ಯಕ್ತಿಗಳ ಕಾರ್ಯಕ್ರಮಗಳಿಗೆ ₹ 12 ಸಾವಿರ ಹಾಗೂ ಸಂಘ–ಸಂಸ್ಥೆಗಳಾದರೆ ₹ 8 ಸಾವಿರ ಪಾವತಿಸಬೇಕು. ಆದರೆ ಇಲ್ಲಿ ಲೈಟಿಂಗ್‌ ಮತ್ತು ಧ್ವನಿವರ್ಧಕ, ಫ್ಯಾನ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಭವನಕ್ಕೆ ಅಗತ್ಯ ವಿದ್ಯುತ್‌ ಸರಬರಾಜು ಆಗುತ್ತಿಲ್ಲ. ಜನರೇಟರ್‌ ವ್ಯವಸ್ಥೆ, ಕುಡಿಯುವ ಹಾಗೂ ಶೌಚಾಲಯಗಳಿಗೂ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಅವರು ದೂರಿದರು.

ಸಾಹಿತ್ಯಭವನಕ್ಕೆ ಸುತ್ತುಗೋಡೆ ನಿರ್ಮಿಸಬೇಕು ಎಂದು ಹಲವಾರು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ. ಆದರೆ ಜಿಲ್ಲಾಡಳಿತ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಶಾಸಕರ ಗಮನಕ್ಕೂ ತಂದಿದ್ದೇವೆ. ಹೆಚ್ಚು ಶುಲ್ಕ ಇರುವುದರಿಂದ ಸರ್ಕಾರಿ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದೆ.
-‌ ರಾಜಶೇಖರ ಅಂಗಡಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !