ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಂತೆ-3: ಹಿರಿಯ ಸಾಹಿತಿ ವಿಮಲಾ ಇನಾಮದಾರ್ ಚಾಲನೆ

ಎಲೆಮರೆ ಪ್ರತಿಭೆ ಬೆಳೆಸುವ ಜವಾಬ್ದಾರಿ:
Last Updated 7 ಮಾರ್ಚ್ 2022, 12:47 IST
ಅಕ್ಷರ ಗಾತ್ರ

ಕೊಪ್ಪಳ: ‘ಪ್ರತಿವಾರ ಸಾಹಿತ್ಯ ಸಂತೆ ಪ್ರಗತಿ ಕಾಣುತ್ತಿದೆ. ಕವಿ ಕಲಾವಿದರು ತಾವು ಪ್ರದರ್ಶನ ಮಾಡುವುದರ ಜೊತೆಗೆ ಇನ್ನೊಬ್ಬರ ಕಲೆ ನೋಡಿ ಆನಂದಿಸಬೇಕು’ ಎಂದು ರಂಗಕರ್ಮಿ ಲಕ್ಷ್ಮಣ ಪೀರಗಾರ ಅಭಿಪ್ರಾಯಪಟ್ಟರು.

ನಗರದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಕನ್ನಡ ಜಾನಪದ ಪರಿಷತ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರದ ಆಶ್ರಯದಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಾರದ ಸಾಹಿತ್ಯ ಸಂತೆ-3 ಮಾಲಿಕೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ವಾರ ಹಲವು ಪ್ರತಿಭಾವಂತರಿಗೆ ವೇದಿಕೆ ಕೊಡುವ ಮೂಲಕ ಸಾಹಿತ್ಯ, ಸಂಗೀತ ಮತ್ತು ಕಲಾ ಪ್ರದರ್ಶನ ಮತ್ತು ನೋಡಿ ಆನಂದಿಸುವ ಹೊಸ ಬಗೆಯ ಆಲೋಚನೆ. ಇದು ಜಿಲ್ಲೆಯಲ್ಲಿಯೇ ಮೊದಲ ಪ್ರಯೋಗ. ಸಂತೆ ಎನ್ನುವುದೇ ಬಹಳ ವಿಶೇಷ ಎಂದರು.

ಸಾಹಿತ್ಯ ಸಂತೆ-3 ಅನ್ನು ಸಸಿಗೆ ನೀರುಣಿಸಿ ಉದ್ಘಾಟಿಸಿದ ಹಿರಿಯ ಸಾಹಿತಿ ವಿಮಲಾ ಇನಾಮದಾರ್ ಕವಿತೆ ವಾಚನ ಮಾಡಿ, ಹೆಣ್ಣು ಭೋಗದ ವಸ್ತುವಲ್ಲ, ಅದು ಭುವಿಯ ಶಕ್ತಿ, ವಾರದ ಸಾಹಿತ್ಯ ಸಂತೆಯಲ್ಲಿ ಮಹಿಳಾ ಪ್ರಾತಿನಿಧ್ಯ ನಿಜಕ್ಕೂ ಅನುಕರಣೀಯ ಎಂದರು.

ಸಾಹಿತಿ ಅರುಣಾ ನರೇಂದ್ರ ಅವರು ಮಾತನಾಡಿ, ಕವಿಗೆ ಕಿವಿ ಸಿಕ್ಕಾಗ ಖುಷಿ, ಕಲೆಗೆ ವೇದಿಕೆ ಇದ್ದಾಗ ಸಂಭ್ರಮ. ಅಂತಹ ವೇದಿಕೆ ಒದಗಿಸುವ ಕಾರ್ಯವೇ ವಿಶೇಷ ಸಂಗತಿ. ಇಂತಹ ವೇದಿಕೆಗಳ ಉಪಯೋಗ ಪಡೆದುಕೊಳ್ಳಬೇಕು, ಕೃತಿ ಬಿಡುಗಡೆ ಮತ್ತು ಪರಿಚಯಕ್ಕೆ ಇಂತಹ ವೇದಿಕೆಗಳ ಉಪಯೋಗ ಪಡೆದುಕೊಳ್ಳಬೇಕು, ಕಡಿಮೆ ಖರ್ಚಿನಲ್ಲಿ ಸಾಹಿತ್ಯ ಪಸರಿಸುವ ಅವಕಾಶ ಇದಾಗಿದೆ ಎಂದರು.

ನಟ ರಾಜೇಶ್, ಗಾಯಕ ಬಪ್ಪಿ ಲಹರಿ, ಕೊಳಲು ವಾದಕ ಹನುಮಂತಪ್ಪ ಮುಧೋಳ ಮತ್ತು ಕವಿ ಚನ್ನವೀರ ಕಣವಿ ಅವರಿಗೆ ಗಾಯಕರಾದ ಅಲ್ಲಾಬಕ್ಷಿ ವಾಲೀಕಾರ, ವಿರೇಶ ಬಡಿಗೇರ್, ಪಾಶಾ, ಸಾಹಿತ್ಯ, ಅಕ್ಷರ ಅವರ ಕೆರೋಕೆ ಗೀತನಮನ ಗಮನ ಸೆಳೆಯಿತು.

ಡಾ.ಮಹಾಂತೇಶ ಮಲ್ಲನಗೌಡರ ಮಾತನಾಡಿದರು. ಪತ್ರಕರ್ತ ರುದ್ರಪ್ಪ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟಕ ಮಂಜುನಾಥ ಗೊಂಡಬಾಳ, ಸಂತೆಯಲ್ಲಿ ಚರ್ಚೆ, ಕವಿತೆ ವಾಚನ, ವಿವಿದ ಸಾಹಿತಿಗಳ ಪುಸ್ತಕ ಬಿಡುಗಡೆ, ಕೃತಿ ಪರಿಚಯ, ಪುಸ್ತಕ ಪ್ರದರ್ಶನ, ಸನ್ಮಾನ ಕಾರ್ಯಕ್ರಮ, ಅಗಲಿದ ಸಾಹಿತಿ, ಕವಿ, ಕಲಾವಿದರ ಸ್ಮರಣೆ, ಸಂಗೀತ ಕಾರ್ಯಕ್ರಮ, ಕಲಾಕೃತಿ ಪ್ರದರ್ಶನ ಮುಂತಾದವುಗಳನ್ನು ಒಳಗೊಂಡ ವಿಶಿಷ್ಟ ಕಾರ್ಯಕ್ರಮ ಆಗಿರಲಿದೆ, ಪ್ರತಿ ಭಾನುವಾರ ಸಂಜೆ 5 ರಿಂದ 7 ರವರೆಗೆ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಲಿದೆ ಎಂದರು.

ಸಾಹಿತಿಸಾವಿತ್ರಿ ಮುಜುಮದಾರ್, ಅಚ್ಚಮ್ಮ ಕಟ್ಟಿ, ತಿರುಪತಿ ಶಿವನಗುತ್ತಿ ಕವಿತೆ ವಾಚಿಸಿದರು. ವಿರೇಶ ಬಡಿಗೇರ್ ಪ್ರಾರ್ಥಿಸಿದರು,ಉಮೇಶ ಸುರ್ವೆ ಸ್ವಾಗತಿಸಿದರು, ಹನುಮಂತಪ್ಪ ಕುರಿ ನಿರೂಪಿಸಿದರು, ಶ್ರೀನಿವಾಸ ಬಡಿಗೇರ್ ವಂದಿಸಿದರು.

ಭಾಗವಹಿಸಿದವರಿಗೆ ಅಭಿನಂದನಾ ಪತ್ರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT