ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ಸ್ಥಿತಿಯತ್ತ ಜನಜೀವನ: ವ್ಯಾಪಾರ ವಹಿವಾಟು ಜೋರು

ಕುಷ್ಟಗಿ: ಲಾಕ್‌ಡೌನ್‌ ಸಡಿಲಿಕೆ, ವ್ಯಾಪಾರ ವಹಿವಾಟು ಜೋರು
Last Updated 21 ಜೂನ್ 2021, 13:47 IST
ಅಕ್ಷರ ಗಾತ್ರ

ಕುಷ್ಟಗಿ: ಕೋವಿಡ್ ಲಾಕ್‌ಡೌನ್‌ ಸಡಿಲಿಕೆಯಿಂದ ಪಟ್ಟಣ ಸೇರಿ ಗ್ರಾಮಾಂತರ ಪ್ರದೇಶದಲ್ಲಿನ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿರುವುದು ಸೋಮವಾರ ಕಂಡುಬಂದಿತು.

ಪಟ್ಟಣದಲ್ಲಿನ ಎಲ್ಲ ಅಂಗಡಿ ಮುಂಗಟ್ಟುಗಳು, ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ವ್ಯಾಪಾರ ವಹಿವಾಟು ಆರಂಭಗೊಂಡಿತು. ಧೂಳು ಹಿಡಿದಿದ್ದ ಬಟ್ಟೆ ಅಂಗಡಿಗಳನ್ನು ಸ್ವಚ್ಛಗೊಳಿಸುವಲ್ಲಿ ಮಾಲೀಕರು ನಿರತರಾಗಿದ್ದರು. ಬೆಳಿಗ್ಗೆಯಿಂದಲೇ ರಸ್ತೆಗಳಲ್ಲಿ ಜನರು, ವಾಹನ ಸಂಚಾರ ಅಧಿಕವಾಗಿತ್ತು. ತರಕಾರಿ ಮಾರುಕಟ್ಟೆ ಜನರಿಂದ ಕಿಕ್ಕಿರಿದಿದ್ದು ಕಂಡುಬಂದಿತು. ಬ್ಯಾಂಕ್‌ಗಳಲ್ಲಿ ಗ್ರಾಹಕರ ನೂಕುನುಗ್ಗಲು ಇತ್ತು. ಅಂತರ ಕಾಪಾಡುವಂತೆ ಸಿಬ್ಬಂದಿ ಮನವಿ ಮಾಡುತ್ತಿದ್ದರು.

ಲಾಕ್‌ಡೌನ್‌ ಸಡಿಲಗೊಂಡಿದ್ದರೂ ಕೋವಿಡ್‌ ನಿಯಮಗಳನ್ನು ಪಾಲಿಸುವುದು ಅವಶ್ಯವಾಗಿದ್ದು, ಈ ವಿಷಯದಲ್ಲಿ ಜನರು ಸಹಕರಿಸಬೇಕು. ಅನಗತ್ಯವಾಗಿ ಗುಂಪುಗೂಡಬಾರದು ಎಂದು ಪೊಲೀಸರು ಧ್ವನಿವರ್ಧಕದ ಮೂಲಕ ಜನರಿಗೆ ಮಾಹಿತಿ ನೀಡಿದರು.

ಸಾರಿಗೆ: ಈ ಮಧ್ಯೆ ಸಾರಿಗೆ ಬಸ್‌ಗಳ ಸಂಚಾರ ಆರಂಭಿಸಲಾಗಿದ್ದು, ಪ್ರಯಾಣಿಕರು ಬಸ್‌ಗಳ ಮೂಲಕ ಸಂಚರಿಸಿದರು. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

‘ಸೋಮವಾರ ವಿವಿಧ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಿಗೆ ಹದಿನೈದು ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸಲಾಗಿದೆ. ಮೇಲಧಿಕಾರಿಗಳ ಸೂಚನೆ ಬಂದ ನಂತರ ಗ್ರಾಮಾಂತರ ಪ್ರದೇಶಕ್ಕೂ ಸಂಚಾರ ಆರಂಭಿಸಲಾಗುತ್ತದೆ. ಮುಂಜಾಗ್ರತೆಗಾಗಿ ಎಲ್ಲ ಬಸ್‌ಗಳನ್ನೂ ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಗೊಳಿಸಲಾಗಿದೆ’ ಎಂದು ನಿಲ್ದಾಣ ಅಧಿಕಾರಿ ಕಾಸೀಂಸಾಬ್ ಕಾಯಿಗಡ್ಡಿ ಹೇಳಿದರು.

ಪಟ್ಟಣದ ಬಸ್‌ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಕುಳಿತುಕೊಳ್ಳುವುದಕ್ಕೆ ಪರ್ಯಾಯ ವ್ಯವಸ್ಥೆ ಇರಲಿಲ್ಲ. ಅಲ್ಲದೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದಿರುವುದಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT