ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಲ್ಲಂಗಡಿ ಬೀಜ ವಿತರಣೆ

ಜಮೀನಿನಲ್ಲಿ ರೈತ ಸಂಘ ಪ್ರತಿಭಟನೆ: ಕ್ರಮಕ್ಕೆ ಆಗ್ರಹ
Last Updated 18 ಜನವರಿ 2023, 4:49 IST
ಅಕ್ಷರ ಗಾತ್ರ

ಹೋಳೂರು (ಕೋಲಾರ): ‘ಕಳಪೆ ಕಲ್ಲಂಗಡಿ ಬಿತ್ತನೆ ಬೀಜ ವಿತರಣೆ ಮಾಡಿರುವ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ನಷ್ಟವಾಗಿರುವ ರೈತನ ಪ್ರತಿ ಎಕರೆಗೆ ₹ 3 ಲಕ್ಷ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ರೈತ ಸಂಘದ ಪ್ರತಿನಿಧಿಗಳು ಹಾಗೂ ರೈತರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಹೋಬಳಿಯ ಕಮ್ಮಸಂದ್ರ ಗ್ರಾಮದ ರೈತ ವೆಂಕಟರಾಮೇಗೌಡ ಅವರ ಕಲ್ಲಂಗಡಿ ತೋಟದಲ್ಲಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ‘ಮೂರು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆಯಲು ₹ 4 ಲಕ್ಷ ಸಾಲ ಮಾಡಿದ್ದರು. ಕಳಪೆ ಬಿತ್ತನೆ ಬೀಜದಿಂದ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗಿದೆ. ಹಾಕಿದ ಬಂಡವಾಳವೂ ಕೈಗೆ ಸಿಗದೆ ರೈತನ ಶ್ರಮ ವ್ಯರ್ಥವಾಗಿದೆ’ ಎಂದರು.

‘ಶೇ 40 ಕಮಿಷನ್ ಆರೋಪ ಮಾಡಿದ್ದಕ್ಕೆ ಗುತ್ತಿಗೆದಾರರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುವ ಜಿಲ್ಲಾ ಉಸ್ತುವಾರಿ ಹಾಗೂ ತೋಟಗಾರಿಕೆ ಸಚಿವರು ಈ ಬಗ್ಗೆ ಏಕೆ ದನಿ ಎತ್ತುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನಷ್ಟ ಭರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ರೈತ ವೆಂಕಟರಾಮೇಗೌಡ ಮಾತನಾಡಿ, ‘ಕಂಪನಿಯ ಅಧಿಕಾರಿಗಳು ಗ್ರಾಮಕ್ಕೆ ಬಂದು ಉತ್ತಮ ಗುಣಮಟ್ಟದ ತಳಿಯ ಕಲ್ಲಂಗಡಿ ನಾಟಿ ಮಾಡು, ಉತ್ತಮ ಇಳುವರಿ ಬರುತ್ತದೆ ಎಂದು 15 ಪೊಟ್ಟಣ ಬಿತ್ತನೆ ಬೀಜ ನೀಡಿದ್ದರು. ಆ ನಂತರ ತಿಪ್ಪೆ ಗೊಬ್ಬರ ಸೇರಿದಂತೆ ಭೂಮಿಯಲ್ಲಿ ಫಲವತ್ತತೆ ಮಾಡಿ ಪೇಪರ್ ಅಳವಡಿಸಿ ಬೆಳೆದೆ. ಕೆ.ಜಿಗೆ ₹ 10 ರಂತೆ ವರ್ತಕರಿಗೆ ನೀಡಿದೆ’ ಎಂದರು.

‘ವರ್ತಕರು ಬಂದು ಕಲ್ಲಂಗಡಿ ಹಣ್ಣು ಕೊಯ್ದು ಪರಿಶೀಲಿಸಿದಾಗ ಒಳಗಡೆ ಬಿಳಿ ಬಣ್ಣದಿಂದ ಕೂಡಿದೆ. ಇಂಥ ಕಲ್ಲಂಗಡಿ ಮಾರಾಟವಾಗುವುದಿಲ್ಲವೆಂದು ತಿರಸ್ಕರಿಸಿದರು. ಸಾಲ ಮಾಡಿ ಹಾಕಿದ ಬಂಡವಾಳ ಕೈಗೆ ಬರದೆ ಈಗ ನಷ್ಟವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಸಂಬಂಧ ಕಂಪನಿಯವರನ್ನು ಸಂಪರ್ಕಿಸಿದರೆ ಕಳೆದ ವರ್ಷವೇ ಈ ತಳಿಯನ್ನು ನಿಷೇಧಿಸಲಾಗಿದೆ. ಮೋಸ ಮಾಡಿದ್ದು, ದಾಖಲೆಗಳಿದ್ದರೆ ಕಾನೂನು ಹೋರಾಟ ನಡೆಸಿ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ವಿಜ್ಞಾನಿಗಳನ್ನು ಕಳುಹಿಸಿ ಪರಿಶೀಲಿಸುವುದಾಗಿ ಹೇಳಿದ್ದಾರೆ. ನಕಲಿ ಕಂಪನಿಗಳಿಗೆ ಅಧಿಕಾರಿಗಳೇ ಬೆಂಗಾವಲಾಗಿ ನಿಂತಿದ್ದಾರೆ’ ಎಂದು ಆರೋಪಿಸಿದರು.

ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಗುರು, ವೇಣು, ನವೀನ್, ಯಾರಂಘಟ್ಟ ಗಿರೀಶ್, ರೈತ ಮಹಿಳೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT