ಮೆಕ್ಕೆಜೋಳಕ್ಕೆ 'ಹುಸಿ ಸೈನಿಕ ಹುಳು' ಲಗ್ಗೆ

7
ಕುಷ್ಟಗಿ ತಾಲ್ಲೂಕಿನಲ್ಲಿ ಹೊಸ ಕೀಟ ಪತ್ತೆ

ಮೆಕ್ಕೆಜೋಳಕ್ಕೆ 'ಹುಸಿ ಸೈನಿಕ ಹುಳು' ಲಗ್ಗೆ

Published:
Updated:
Deccan Herald

ಕುಷ್ಟಗಿ: ಇದೇ ಮೊದಲ ಬಾರಿಗೆ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಸೇರಿದಂತೆ ಏಕದಳ ಬೆಳೆಯನ್ನು ತೀವ್ರವಾಗಿ ಬಾಧೆ 'ಹುಸಿ ಸೈನಿಕ ಹುಳು' ಎಂಬ ಹೊಸ ಕೀಟ ಕಾಣಿಸಿಕೊಂಡಿದ್ದು ರೈತರು ಸೇರಿದಂತೆ ಕೃಷಿ ಇಲಾಖೆ ಆತಂಕ ಪಡುವಂತಾಗಿದೆ.

ಈವರೆಗೂ ಸುಳಿ ಕೊರೆಯುವ ಸೈನಿಕ ಹುಳು ಇತ್ತಾದರೂ ಬಾಧೆ ಅಷ್ಟೊಂದು ತೀವ್ರವಾಗಿರುತ್ತಿರಲಿಲ್ಲ. ಆದರೆ, ಈಗ ಬೆಳಕಿಗೆ ಬಂದಿರುವ 'ಫಾಲ್ಸ್‌ ಆರ್ಮಿ ವರ್ಮ್' (ಸ್ಪೋಡಾಪ್ಟೆರಾ ಫ್ರುಗಿಫರ್ಡಾ ವೈಜ್ಞಾನಿಕ ಹೆಸರು) ಕೀಟ ಇಲಾಖೆಯ ನಿದ್ದೆಗೆಡಿಸಿದೆ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದಿದ್ದರೆ ಮೆಕ್ಕೆಜೋಳ ಸೇರಿದಂತೆ ಇತರೆ ಎಲ್ಲ ಏಕದಳ ಬೆಳೆಗಳು ಸಂಪೂರ್ಣ ಹಾಳಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಕಳಕಪ್ಪ ಬಸರಿಗಿಡದ ಎಂಬುವವರ ಜಮೀನಿನ ಮೆಕ್ಕೆಜೋಳದಲ್ಲಿಯೂ ಈ ಕೀಟ ಬಾಧೆ ಕಂಡು ಬಂದಿದ್ದು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಶನಿವಾರ ಕೃಷಿ ಇಲಾಖೆ ಸಿಬ್ಬಂದಿ ಮತ್ತು ರೈತರಿಗೆ ಮಾಹಿತಿ ನೀಡುವ ಪ್ರಾತ್ಯಕ್ಷಿಕೆ ನಡೆಯಿತು.

ದೇಶದದಲ್ಲೇ ಮೊದಲು: ‘ಆಫ್ರಿಕಾ ಖಂಡದಲ್ಲಿ ಸಹಜವಾಗಿರುವ ಈ ಕೀಟ ಕಳೆದ ವರ್ಷ ಈ ಬೆಳೆ ಅಮೆರಿಕ ದೇಶದಲ್ಲಿನ ಮೆಕ್ಕೆಜೋಳವನ್ನು ಬಹಳಷ್ಟು ಪ್ರಮಾಣದಲ್ಲಿ ಹಾಳು ಮಾಡಿದ್ದರಿಂದ ಅಪಾರ ಪ್ರಮಾಣದ ಆರ್ಥಿಕ ಹಾನಿ ಸಂಭವಿಸಿತ್ತು’ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ ತಿಳಿಸಿದರು.

‘ತಮಿಳುನಾಡು ಮತ್ತು ಆಂಧ್ರ ಪ್ರದೇಶ ಸೇರಿದಂತೆ ನಮ್ಮ ದೇಶದಲ್ಲೂ ಈ ವರ್ಷ ದಾಳಿ ಇಟ್ಟಿದ್ದನ್ನು ಶಿವಮೊಗ್ಗದಲ್ಲಿರುವ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ವರದಿ ನೀಡಿದ್ದರಿಂದ ಇಲಾಖೆ ನಿಯಂತ್ರಣ ವಿಷಯದಲ್ಲಿ ರೈತರನ್ನು ಜಾಗೃತಿಗೊಳಿಸಲು ಮುಂದಾಗಿದೆ’ ಎಂದರು.

‘35-40 ದಿನದ ಜೀವನ ಚಕ್ರದ ಈ ಪತಂಗ ಗಾಳಿಯ ಮೂಲಕ ಸಾವಿರ ಕಿ.ಮೀ.ವರೆಗೂ ಚಲಿಸುತ್ತದೆ. ಸುಮಾರು 1500 ಮೊಟ್ಟೆ ಇಡುತ್ತದೆ. ಮರಿ ಹುಳುಗಳು ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಸುಳಿ ತಿಂದು ಹಾಳು ಮಾಡುತ್ತವೆ. ತೆನೆ ಬಿಟ್ಟ ನಂತರ ಹುಳು ಭಾದೆ ಕಂಡುಬಂದರೂ ಹೆಚ್ಚಿನ ಹಾನಿ ಸಂಭವಿಸುವುದಿಲ್ಲ’ ಎಂದು ವಿವರಿಸಿದರು.

ತಾಲ್ಲೂಕಿನ ಕೆಲವೇ ಪ್ರದೇಶಗಳಲ್ಲಿ ಹೊಸ ಹುಳು ಇರುವುದು ಪತ್ತೆಯಾಗಿದ್ದು ಕೃಷಿ ಇಲಾಖೆ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿನ ರೈತರಿಗೆ ಸೂಕ್ತ ರೀತಿಯಲ್ಲಿ ತಿಳಿವಳಿಕೆ ನೀಡಬೇಕು. ಮತ್ತು ಸೂಕ್ತ ಕೀಟನಾಶಕ ಮತ್ತು ವಿಷ ಪಾಷಾಣವನ್ನು ವೈಜ್ಞಾನಿಕ ಮತ್ತು ಸುರಕ್ಷಿತರ ರೀತಿಯಲ್ಲಿ ಬಳಕೆಗೆ ಸಂಬಂಧಿಸಿದ ಮಾಹಿತಿ ನೀಡಲು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗುವಂತೆ ಹೇಳಿದರು.

ರೈತ ಕಳಕಪ್ಪ ಬಸರಿಗಿಡದ, ಕೃಷಿ ಅಧಿಕಾರಿಗಳಾದ ಪ್ರಕಾಶ ತಾರಿವಾಳ, ಬಾಲಪ್ಪ ಜಲಗೇರಿ, ತಾಂತ್ರಿಕ ವ್ಯವಸ್ಥಾಪಕ ಬಸವರಾಜ, ಸಹಾಯಕರಾದ ಶ್ರೀಧರ, ಸಂದೀಪ, ಶೇಖರಯ್ಯ ಹಿರೇಮಠ, ಅನುವುಗಾರರಾದ ಹಂಪಯ್ಯ, ಶರಣಯ್ಯ, ಶುಕಮುನಿ. ರೈತರಾದ ಸಿದ್ದನಗೌಡ ಹುಲಸಗೇರಿ, ಅಮರೇಶ ಹೊಸೂರು, ಹನುಮಗೌಡ ಕತ್ತಿ ಇದ್ದರು.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !