ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಿಗೆ ಬಣ್ಣ ಬಳಿದ ಕಲಾವಿದ

ಹನುಮನಾಳ: ಸಾಮಿಲ್‌ ಆವರಣದಲ್ಲಿ ಅರಳಿ ನಿಂತ ಪುಟ್ಟ ಉದ್ಯಾನ
Last Updated 30 ಸೆಪ್ಟೆಂಬರ್ 2020, 2:55 IST
ಅಕ್ಷರ ಗಾತ್ರ

ಹನುಮಸಾಗರ: ನೆರಳಿನ ಹಂದರ ಹೆಣೆದ ಮರಗಳು, ಅದರ ಅಡಿ ತಪೋ ಭಂಗಿಯಲ್ಲಿ ಕುಳಿತ ಶಿವ, ಚಿದಾನಂದ ಅವಧೂತರು, ಬಗಳಾಂಬಿಕಾದೇವಿ...

ಇದು ಸಮೀಪದ ಹನುಮನಾಳ ಗ್ರಾಮದ ಅಖಂಡೇಶ್ವರ ಸಾಮಿಲ್‌ ಆವರಣದ ಚಿತ್ರಣ.

ಕಲಾವಿದ ರವೀಂದ್ರ ಪತ್ತಾರ ಕೊರೊನಾ ಲಾಕ್‍ಡೌನ್ ಸಮಯವನ್ನು ಬಳಸಿಕೊಂಡು ಆವರಣವನ್ನು ಪುಟ್ಟ ಉದ್ಯಾನವನ್ನಾಗಿ ಪರಿವರ್ತಿಸಿದ್ದಾರೆ.

ಕಲಾಕೃತಿಗಳ ಸುತ್ತಲೂ ವಿವಿಧ ಹೂಬಳ್ಳಿ, ಹುಲ್ಲು ಬೆಳೆಸಿದ್ದಾರೆ. ಅಲ್ಲಲ್ಲಿ ಜುಳು–ಜುಳು ಸದ್ದು ಮಾಡುತ್ತ ಹರಿಯುವ ನೀರು, ಚಿಟ್ಟೆಗಳ ಹಾರಾಟ, ಹಕ್ಕಿಗಳ ಚಿಲಿಪಿಲಿ ಉದ್ಯಾನವನದ ಆಕರ್ಷಣೆ ಹೆಚ್ಚಿಸಿವೆ.

ಆಸ್ಟ್ರೇಲಿಯಾ, ಸ್ಪೇನ್ ಹಾಗೂ ಹಾಲೆಂಡ್ ದೇಶಗಳ 50ಕ್ಕೂ ಹೆಚ್ಚು ವಿವಿಧ ಬಣ್ಣಗಳ ಪಕ್ಷಿಗಳನ್ನು ಈ ಪುಟ್ಟ ಉದ್ಯಾನವನದ ಗ್ಯಾಲರಿಯಲ್ಲಿ ಪೋಷಣೆ ಮಾಡಲಾಗುತ್ತಿದೆ.

ಆವರಣದಲ್ಲಿರುವ ಮರದ ಮೇಲೆ ಕಟ್ಟಿಗೆಯ ಹಲಗೆಯಿಂದ ಪುಟ್ಟಮನೆ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಮೆಟ್ಟಿಲುಗಳನ್ನೂ ನಿರ್ಮಿಸಿದ್ದಾರೆ. ಯವುದೇ ತೊಂದರೆ ಇಲ್ಲದೆ ಮಕ್ಕಳು ಏರಿಳಿಯಬಹುದಾಗಿದೆ. ಅಲ್ಲದೆ ಸುತ್ತಮುತ್ತ ಏಣಿ, ಉಯ್ಯಾಲೆಯಂಥ ಅಟಿಕೆಗಳು ಇರುವುದರಿಂದ ಮಕ್ಕಳು ಇಲ್ಲಿ ಸಂತಸದಿಂದ ಆಟವಾಡುತ್ತ ಸಮಯ ಕಳೆಯಬಹುದಾಗಿದೆ.

‘ಇಲ್ಲಿನ ವಿಶಾಲವಾದ ಬಯಲಿಗೆ ಕಲೆಯ ಮೂಲಕ ಅಂದ ನೀಡಿದ್ದೇನೆ. ಸಹೋದರ ಗುರುನಾಥ ಪತ್ತಾರ ಅವರ ಮಾರ್ಗದರ್ಶನದಲ್ಲಿ ಕಲಾಕೃತಿಗಳನ್ನು ಸಿದ್ಧಪಡಿಸಿದ್ದೇನೆ. ಈ ಎಲ್ಲ ಕಾರಣಗಳಿಂದ ಮಕ್ಕಳೊಂದಿಗೆ ಅವರ ಪೋಷಕರೂ ಬಂದು ಕೆಲ ಸಮಯ ಇಲ್ಲೇ ಇದ್ದು ಹೋಗುತ್ತಾರೆ. ಅದು ನನಗೆ ತೃಪ್ತಿ ತಂದಿದೆ. ಇನ್ನೂ ಸುಧಾರಣೆ ಮಾಡುವ ಕನಸು ಇದೆ’ ಎಂದು ಕಲಾವಿದ ರವೀಂದ್ರ ಪತ್ತಾರ ಹೇಳುತ್ತಾರೆ.

ಮಕ್ಕಳಿಗೆ ರಂಜನೆ ನೀಡುವ ಉದ್ದೇಶದಿಂದ ರವೀಂದ್ರ ಅವರು ಉದ್ಯಾನ ನಿರ್ಮಿಸಿರುವುದು ಸಂತಸ ತಂದಿದೆ ಎನ್ನುತ್ತಾರೆ ಸ್ಥಳೀಯರಾದ ಈರಣ್ಣ ಬಡಿಗೇರ, ಶರಣಪ್ಪ ಹಂಡಿ.

ರವೀಂದ್ರ ಪತ್ತಾರ ಸಂಪರ್ಕ:ಮೊ. 8747982011.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT