ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಗುಳದಾಳ ಗ್ರಾಮ ಸಮಗ್ರ ಅಭಿವೃದ್ಧಿಗೆ ಕ್ರಮ

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ: ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿಕೆ
Last Updated 17 ಅಕ್ಟೋಬರ್ 2021, 4:30 IST
ಅಕ್ಷರ ಗಾತ್ರ

ಗುಳದಾಳ (ಗಂಗಾವತಿ): ‘ಗುಳದಾಳ (ಮಸಾರಿ ಕ್ಯಾಂಪ್) ಗ್ರಾಮಕ್ಕೆ ಡಾಂಬರೀಕರಣ ರಸ್ತೆ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು‘ ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಭರವಸೆ‌ ನೀಡಿದರು.

ಇಲ್ಲಿನ ಗುಳದಾಳ ಗ್ರಾಮದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ‘ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿ ಮಾತನಾಡಿದರು.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ, ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲಿದ್ದಾರೆ. ಈ ವೇಳೆ ಗ್ರಾಮಸ್ಥರು ತಮ್ಮ ಸಮಸ್ಯೆಗಳ ಕುರಿತು ಮಾಹಿತಿ ನೀಡಿದಲ್ಲಿ, ಸಂಜೆ ಒಳಗಾಗಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಾಗುತ್ತದೆ ಎಂದರು.

ಹಾಗೇಯೆ ಗ್ರಾಮದಲ್ಲಿ ಕೋವಿಡ್ ಲಸಿಕೆ ಪಡೆಯುವ ಜೊತೆಗೆ ಕೋವಿಡ್‌ ಮುಕ್ತ ಗ್ರಾಮವನ್ನಾಗಿಸುವ ಕೆಲಸ ಮಾಡಬೇಕು. ಇತ್ತೀಚೆಗೆ ಜಿಲ್ಲೆಯ ಹಳ್ಳಿಭಾಗದಲ್ಲಿ ಅಸ್ಪೃಶ್ಯತೆ ಪ್ರಕರಣಗಳು ಹೆಚ್ಚಾಗಿವೆ. ಅದರಂತೆ ಈ ಗ್ರಾಮದಲ್ಲಿ ಅಸ್ಪೃಶ್ಯತೆ ಏನಾದರೂ ಕಂಡು ಬಂದಲ್ಲಿ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದರೆ, ಕೂಡಲೆ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಇದೇ ವೇಳೆ ಗ್ರಾಮದ ಜನರು ಗ್ರಾಮದಲ್ಲಿನ ಕುಡಿಯುವ ನೀರು, ಶೌಚಾಲಯ, ಸಾರ್ವಜನಿಕ ರುದ್ರಭೂಮಿ, ಚರಂಡಿ, ಸಿಸಿ ರಸ್ತೆ, ಪಿಂಚಣಿ, ವಸತಿ ಮನೆ, ಶಾಲೆಯ ಅಭಿವೃದ್ಧಿ, ಮಧ್ಯಪಾನ ತಡೆ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಮನವಿ ಪತ್ರಗಳನ್ನು ಸಲ್ಲಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅವರು, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಒದಗಿಸಲಾಗುತ್ತದೆ ಎಂದರು.

ನಂತರ ಶಾಸಕ ಬಸವರಾಜ ದಢೆಸೂಗೂರ್ ಮಾತನಾಡಿ, ಇಲ್ಲಿ ಸಮಸ್ಯೆಗಳ ಕುರಿತು ಗ್ರಾಮಸ್ಥರು ಅರ್ಜಿ ನೀಡಿದರೆ, ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ₹ 1.5 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.

ಎ.ಸಿ ನಾರಾಯಣರೆಡ್ಡಿ ಕನಕರೆಡ್ಡಿ ಮಾತನಾಡಿ, ತಾಲ್ಲೂಕು ಆಡಳಿತದ ಕಂದಾಯ, ಕಾರ್ಮಿಕ, ಆಧಾರ್ ತಿದ್ದುಪಡಿ, ಪಿಂಚಣಿ, ಕೃಷಿ, ತೋಟಗಾರಿಕೆ, ಆರೋಗ್ಯ, ಅರಣ್ಯ, ಪಶು ಸಂಗೋಪನೆ ಇಲಾಖೆ ಸೇರಿದಂತೆ ಇತರೆ ಇಲಾಖೆ ಯೋಜನೆಗಳ
ಕುರಿತು ನಾಮಫಲಕಗಳು ಸಾಧರಪಡಿಸಲಾಗಿದೆ. ಸಾರ್ವಜನಿಕರು ಇವುಗಳ ಉಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.

ಸಿಇಓ ಫೌಜಿಯಾ ತರುನ್ನಮ್ ಮಾತನಾಡಿ, ಗ್ರಾಮಸ್ಥರು ಸಲ್ಲಿಸಿದ ಆಹವಾಲುಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ, ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಈಗಾಗಲೇ ಜಿ.ಪಂ ವತಿಯಿಂದ ‘ಮನೆ ಮನೆಗೆ ನರೇಗಾ ಅಭಿಯಾನ‘ ಆರಂಭಿಸಲಾಗಿದೆ ಎಂದರು.

ಗ್ರಾಮಸ್ಥರಿಂದ ಎಲ್ಲ ಇಲಾಖೆಗಳಲ್ಲಿ ಸೇರಿ ಒಟ್ಟು 56 ಅಹವಾಲು ಅರ್ಜಿಗಳು ಸ್ವೀಕೃತವಾದವು.

ತಹಶೀಲ್ದಾರ್‌ಗೆ ತರಾಟೆ: ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ವಿವಿಧ ಇಲಾಖೆ ಅಧಿಕಾರಿಗಳ ಹಾಜರಾತಿ ಮಾಹಿತಿ ಕುರಿತು ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡು, ನಂತರ ಸಾರ್ವಜನಿಕ‌ ರುದ್ರಭೂಮಿ ಸಮಸ್ಯೆ ಇರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸಂಜೆ ವೇಳೆ ಎಲ್ಲ ಅಧಿಕಾರಿಗಳನ್ನು ಗ್ರಾಮಸ್ಥರ ಮನೆಗಳಿಗೆ ಭೇಟಿ ನೀಡುವಂತೆ ತಿಳಿಸಿ, ಕೆಸಕ್ಕಿ ಹಂಚಿನಾಳ ಗ್ರಾಮದಿಂದ ಗುಳದಾಳ ಗ್ರಾಮಕ್ಕೆ ಸಂಪರ್ಕವಾಗುವ ರಸ್ತೆಯನ್ನು ಪರಿಶೀಲನೆ ನಡೆಸಿದರು.

ತಹಶೀಲ್ದಾರ್ ಯು.ನಾಗರಾಜ, ಡಿ.ಎಚ್.ಒ ಟಿ.ಲಿಂಗರಾಜ, ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಅಕ್ಕಮಹಾದೇವಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿದ ಇಲಾಖೆಗಳ ಅಧಿಕಾರಿಗಳು ಇದ್ದರು.

ಚಾಮಲಾಪುರ: ಸಮಸ್ಯೆ ಪರಿಹಾರ

ಕೊಪ್ಪಳ: ತಾಲ್ಲೂಕಿನ ಇರಕಲ್ಲಗಡಹೋಬಳಿಯ ಚಾಮಲಾಪುರ ಗ್ರಾಮದಲ್ಲಿಶನಿವಾರ ತಹಶೀಲ್ದಾರ್‌ ನೇತೃತ್ವದ ತಂಡ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಿತು.

ತಹಶೀಲ್ದಾರ್ ಅಮರೇಶ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂಬ ಆಶಯದೊಂದಿಗೆ ಈಗಾಗಲೇ ವಿವಿಧ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯವನ್ನು ಮಾಡುವ ಮೂಲಕ ಸುತ್ತಮುತ್ತಲಿನ ಗ್ರಾಮಸ್ಥರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ ನೀಡುವ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ ಎಂದರು.

ಸಣ್ಣಪುಟ್ಟ ಕೆಲಸಕ್ಕೆ ತಾಲ್ಲೂಕು ಕಚೇರಿಗೆ ಅಲೆಯುವುದನ್ನು
ತಪ್ಪಿಸಲು ಜನರ ಮನೆ ಬಾಗಿಲಿಗೆ ಆಡಳಿತವನ್ನು ಒಯ್ಯಬೇಕು ಎಂಬ ಪರಿಕಲ್ಪನೆಯನ್ನು ಈ ಗ್ರಾಮ ವಾಸ್ತವ್ಯ ಹೊಂದಿದೆ. ಸುಲಭ ಮತ್ತು
ಸ್ಥಳದಲ್ಲಿಯೇ ಬಗೆ ಹರಿಯುವ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದರು.

ಸ್ಮಶಾನ ಜಾಗೆ ಸಮಸ್ಯೆ, ಶುದ್ಧ ಕುಡಿಯುವ ನೀರು, ರಸ್ತೆ, ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಜನರು ಅಹವಾಲು ಸಲ್ಲಿಸಿದರು. ಮಾಸಿಕ
ಪಿಂಚಣಿ ಸಮಸ್ಯೆ, ಅಂಗವಿಕಲರಿಗೆ, ಹಿರಿಯರಿಗೆ ಸೌಲಭ್ಯ, ಹಿರಿಯ ನಾಗರಿಕರ ಗುರುತಿನ ಚೀಟಿನೀಡುವ ಕೆಲಸ ಕೂಡಾ ನಡೆಯಿತು. 50ಕ್ಕೂ ಹೆಚ್ಚು ಸಮಸ್ಯೆಗಳನ್ನು ಬಗೆಹರಿಸಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಹೊಲಕ್ಕೆ ಹೋಗುವ ರಸ್ತೆ, ಪಂಚಾಯಿತಿಯಲ್ಲಿ ಆಗುತ್ತಿರುವ
ವಿಳಂಬ ಕುರಿತು ಗಮನ ಸೆಳೆಯಲಾಯಿತು.ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅರವಿಂದ ಲಂಬು ಮಾತನಾಡಿದರು. ಈ ವೇಳೆ ಗ್ರಾಮಸ್ಥರಿಂದ ಸಾಮರಸ್ಯ, ದುಶ್ಚಟ ಮುಕ್ತಿ, ಅಸ್ಪಶೃತೆ ಮೌಢ್ಯದ ಪ್ರತಿಜ್ಞಾ ವಿಧಿಯನ್ನು ಭೋದಿಸಿ, ಪ್ರಮಾಣ ವಚನ ಸ್ವೀಕರಿಸಲಾಯಿತು.

ತಾಲ್ಲೂಕು ಪಂಚಾಯಿತಿಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ,ಪಂಚಾಯಿತಿ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಕೆರೆ ಪ್ರದೇಶ ಪರಿಶೀಲನೆ

ತಾವರಗೇರಾ: ‘ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ನಿಮ್ಮ ಊರಿಗೆ ಬಂದಿದ್ದಾರೆ. ನಿಮ್ಮ ಸಮಸ್ಯೆಗಳನ್ನು ಇಲ್ಲಿ ಪರಿಹರಿಸಲಾಗುವುದು‘ ಎಂದು ಕುಷ್ಟಗಿ ತಹಶೀಲ್ದಾರ ಎಂ. ಸಿದ್ದೇಶ ಹೇಳಿದರು.

ಸಮೀಪದ ಎಸ್ ಗಂಗನಾಳ ಗ್ರಾಮದಲ್ಲಿ ಕಂದಾಯ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ವಿವಿಧ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಹಯೋಗದಲ್ಲಿ ನಡೆದ ‘ಗ್ರಾಮ ವಾಸ್ತವ್ಯ‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಂತರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅಧಿಕಾರಿಗಳು ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿದರು. ಹೊರವಲಯದಲ್ಲಿರುವ ರುದ್ರಭೂಮಿ, ಜಿನುಗುಕೆರೆ, ಗ್ರಾಮದಲ್ಲಿರುವ ತೆರದ ಬಾವಿಗಳನ್ನು ವೀಕ್ಷಣೆ ಮಾಡಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ. ಆನಂದ ಗೋಟುರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಯರಾಂ ಚವ್ಹಾಣ್, ಸಣ್ಣ ನೀರಾವರಿ ಇಲಾಖೆಯ ಜೆಇ ರಾಜಶೇಖರ ಕಟ್ಟಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಚನ್ನಬಸಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ತೋಟಗಾರಿಕೆಯ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ, ಮಂಜುನಾಥ, ತಿಪ್ಪಯ್ಯ, ಬಾಲಚಂದ್ರ, ಸಂಗನಾಳ ಗ್ರಾಪಂ ಅಧ್ಯಕ್ಷೆ ಯಮನಮ್ಮ ತಳ್ಳಳ್ಳಿ, ಉಪಾಧ್ಯಕ್ಷ ಶರಣಪ್ಪ ಹಂಚಿನಾಳ, ಪಿಡಿಓ ಕವಿತಾ ಪಾಟೀಲ್, ನಾಡ ತಹಶೀಲ್ದಾರ ವಿಜಯಲಕ್ಷ್ಮೀ ಮುಂಡರಗಿ, ಕಂದಾಯ ನಿರೀಕ್ಷಕ ಶರಣಪ್ಪ ದಾಸರ, ಸಾರಿಗೆ ಇಲಾಖೆಯ ಮಹಾಂತೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT