ಶನಿವಾರ, ನವೆಂಬರ್ 27, 2021
21 °C

‘ಪರಿಹಾರದ ಕಾರ್ಯಕ್ಕೆ ಒತ್ತು ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ‘ಅಧಿಕಾರಿಗಳು ಮಳೆಹಾನಿಗೆ ಸಂಬಂಧಿಸಿದ ಕೆಲಸಗಳಿಗೆ ಒತ್ತು ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ವಿ.ಮಹೇಶ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಎಲ್ಲ ತಾಲ್ಲೂಕಿನ ತಹಶೀಲ್ದಾರರು ಬೇರೆ ಕೆಲಸಗಳನ್ನು ಪಕ್ಕಕ್ಕಿಟ್ಟು ಮೊದಲು ಮಳೆ ಹಾನಿಯ ಕುರಿತ ಕೆಲಸಗಳಿಗೆ ಆದ್ಯತೆ ನೀಡಬೇಕು. ಗ್ರಾಮ ಲೆಕ್ಕಿಗರಿಂದ ಜಂಟಿ ಸರ್ವೇ ಮಾಡಿಸಿ ತುರ್ತಾಗಿ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಸಂಬಂಧಿಸಿದವರಿಗೆ ಆದಷ್ಟು ಬೇಗ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಮಳೆಯಿಂದ 77 ಶಾಲೆಗಳು ಹಾಗೂ 89 ಅಂಗನವಾಡಿ ಕೇಂದ್ರಗಳು ಸೋರುತ್ತಿರುವ ಕುರಿತು ತಿಳಿದು,‘ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳು ಈಚೆಗೆ ನಿರ್ಮಾಣ ಮಾಡಿದ್ದವಾಗಿದ್ದರೆ ಕಳಪೆ ಕಾಮಗಾರಿ ಎಂದು ಪರಿಗಣಿಸಬೇಕು. ಕಟ್ಟಡ ನಿರ್ಮಾಣ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ರೈತರು ವಿಮೆ ಕಂತು ಪಾವತಿಸಿದ್ದರೆ, ವಿಮೆ ಪಾವತಿ ಪ್ರಕ್ರಿಯೆ ಬೇಗನೆ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಪರಿಹಾರ ನೀಡದ ಇನ್ಯುರೆನ್ಸ್ ಕಂಪನಿಗಳ ವಿರುದ್ಧ ವರದಿ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ರೈತರ ಕುಂದುಕೊರತೆ ಮತ್ತು ಅವರ ಸಮಸ್ಯೆಗಳಿಗೆ ಕೃಷಿ ಇಲಾಖೆಯಲ್ಲಿರುವ ಒಂಬುಡ್ಸಮನ್‌ಗಳು ಕೂಡಲೇ ಪರಿಹಾರ ಒದಗಿಸಬೇಕು. ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.