ಬುಧವಾರ, ನವೆಂಬರ್ 13, 2019
18 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಖಡಕ್ ಎಚ್ಚರಿಕೆ

ಚೇಲಾಗಳಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ನೀಡಬೇಡಿ

Published:
Updated:
Prajavani

ಕೊಪ್ಪಳ: ಪ್ರವಾಸಿ ಟ್ರಾಕ್ಸಿಗಳನ್ನು ಜನಪ್ರತಿನಿಧಿಗಳು ನಿಮ್ಮ ಚೇಲಾಗಳಿಗೆ ನೀಡಬೇಡಿ. ಅವರು ಅದೇ ಕಾರನ್ನು ತೆಗೆದುಕೊಂಡು ನಿಮ್ಮ ಹಿಂದೆಯೇ ಸುತ್ತುತ್ತಾರೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಆಗುವುದಿಲ್ಲ. ಚೇಲಾಗಳಿಗೆ ಬೇರೆ ರೀತಿ ಸಹಾಯ ಮಾಡಿ ಎಂದು ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೈಯಕ್ತಿಕಕ್ಕೆ ಉಪಯೋಗಿಸು ತ್ತಿದ್ದಾರೋ, ಪಡೆದ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದಾರೋ ಎಂದು ಸಮೀಕ್ಷೆ ಮಾಡಬೇಕು. ಟ್ಯಾಕ್ಸಿ ಬೇಡಿಕೆಯನ್ನು ಸಮೀಕ್ಷೆ ಮಾಡಬೇಕು. ಮುಂದೆ ಮೊಬೈಲ್ ಕ್ಯಾಂಟಿನ್, ಮೋಟರ್ ಬೋಟ್, ಮೊಬೈಲ್ ಶೌಚಾಲಯಕ್ಕೂ ಸಬ್ಸಿಡಿ ನೀಡುತ್ತೇವೆ. ಈ ಯೋಜನೆ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಯುವಕರನ್ನು ಸ್ವಾವಲಂಬನೆಯ ಉದ್ದೇಶ ಹೊಂದಿದೆ. ಸರ್ಕಾರದಿಂದ ಪಡೆದ ಟ್ಯಾಕ್ಸಿಗಳಿಗೆ ಅಪ್ಲಿಕೇಷನ್‌ ನಿರ್ವಹಿಸಬೇಕು ಎಂದರು.

ಪ್ರವಾಸೋದ್ಯಮ ಇಲಾಖೆಯ 22 ಕಾಮಗಾರಿಗಳಿದ್ದು, 4 ಕಾಮಗಾರಿಗಳು ಪೂರ್ಣಗೊಂಡಿವೆ. ಇದರಲ್ಲಿ 7 ಕಾಮಗಾರಿಗಳು ಪ್ರಗತಿಯಲ್ಲಿವೆ. 10 ಕಾಮಗಾರಿಗಳು ಆರಂಭವಾಗಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದರು. ಎಲ್ಲ ಕಾಮಗಾರಿಗಳನ್ನು ಯಾವಾಗ ಮುಕ್ತಾಯಗೊಳಿಸುತ್ತೀರಿ ಎಂದು ಸಚಿವ ಸಿ.ಟಿ.ರವಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಆರ್‌ಟಿಎಚ್‌ ಏಜೆನ್ಸಿಯ ಪ್ರತಿನಿಧಿ ಡಿಸೆಂಬರ್‌ ಒಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದರು.

ಎಲ್ಲವನ್ನೂ ದಾಖಲಿಸುತ್ತಿದ್ದೀರಾ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಇಲ್ಲ ಎಂದು ಪ್ರತಿಕ್ರಿಯಿಸಿದ ಅಧಿಕಾರಿ ವಿರುದ್ಧ ನಾವು ಚಾ ಕುಡಿಯೋಕೆ ಬಂದಿಲ್ಲ. ಇದನ್ನು ದಾಖಲಿಸಿಕೊಳ್ಳಿ ಎಂದು ಕೋಪದಿಂದ ಹೇಳಿದರು. ನಿಗದಿತ ಸಮಯಕ್ಕೆ ಮುಗಿಸದಿದ್ದರೇ ಬ್ಲಾಕ್‌ ಲಿಸ್ಟ್‌ಗೆ ಹಾಕುತ್ತೇನೆ ಎಂದು ಏಜೆನ್ಸಿ ಪ್ರತಿನಿಧಿಗೆ ಎಚ್ಚರಿಕೆ ನೀಡಿದರು.

‘ಆನೆಗೊಂದಿಯ ಆನೆ ಸಾಲು, ಕುದುರೆ ಸಾಲಿನ ಸ್ಮಾರಕಗಳಿಗೆ ₹ 8 ಕೋಟಿ ಮಂಜೂರಾಗಿದೆ. ಏನು ಮಾಡಿದ್ದೀರಿ' ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ 'ಮೈಸೂರಿನಿಂದಲೇ ಎಲ್ಲವನ್ನೂ ಮಾಡುತ್ತಾರೆ. ನಮ್ಮ ಬಳಿ ಮಾಹಿತಿ ಇಲ್ಲ' ಎಂದರು.

ಸಚಿವ ರವಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ನೆಂಟಸ್ಥನ ಮಾಡೋಕೆ ಬಂದಿಲ್ಲ. ಯೋಜನೆಗಳನ್ನು ಮನನ ಮಾಡಲು ಬಂದಿದ್ದೇವೆ. ಪುರಾತತ್ವ ಇಲಾಖೆಯ ಕೆಲಸ ಪುರಾತನ ಶಾಸನಗಳನ್ನು ಸಂರಕ್ಷಿಸುವುದು. ಸಾರ್ವಜನಿಕ ಕೆಲಸಕ್ಕಾಗಿ ಅಲ್ಲ. ಮುಂದಿನ ಬಾರಿ ಸಂಪೂರ್ಣ ಮಾಹಿತಿ ತರಬೇಕು' ಎಂದು ಕಿಡಿಕಾರಿದರು.

ಋಷಿ ಮುಖ ಪರ್ವತ ದಾಖಲಿಸಿಲ್ಲ ಏಕೆ ಎಂದು ಪರಣ್ಣ ಮತ್ತೆ ಪ್ರಶ್ನಿಸಿದರು. ಇದಕ್ಕೆ ಸಿ.ಟಿ.ರವಿ ಪ್ರತಿಕ್ರಿಯಿಸಿ, ಇದನ್ನು ಪ್ರವಾಸಿ ತಾಣಗಳ ಪಟ್ಟಿಗೆ ಸೇರಿಸಿ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗೆ ಸೂಚಿಸಿದರು.

'ಕೊಪ್ಪಳ ಕೋಟೆಯ ಕೆಲಸ ಆಗಿಲ್ಲ. ಆದರೆ ಬೋಗಸ್ ಬಿಲ್ ತೆಗೆದುಕೊಂಡಿ ದ್ದಾರೆ ಎಂದು ಸಾರ್ವಜನಿಕ ದೂರು ಬಂದಿದ್ದು, ವರದಿ ಮಾಡಿ, ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸುನೀಲ್‌ಕುಮಾರ್‌, ನಿರ್ಮಿತಿ ಕೇಂದ್ರದವರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ, ಹಾಗಾಗಿ ಇಂತಹ ಕಾಮಗಾರಿಗಳನ್ನು ತೆಗೆದುಕೊಳ್ಳಬಾರದು. ಬದಲಿಗೆ ಪುರಾತತ್ವ ಇಲಾಖೆಯವರು ಮಾಡಬೇಕು. ಮಾಡದಿದ್ದರೂ ಉಸ್ತುವಾರಿಯನ್ನಾದರೂ ಅವರು ನೋಡಿಕೊಳ್ಳಬೇಕು' ಎಂದರು.

ಶಾಸಕರಾದ ಹಾಲಪ್ಪ ಆಚಾರ್‌, ರಾಘವೇಂದ್ರ ಹಿಟ್ನಾಳ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾಯ ಪಾಟೀಲ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಕೆ.ಎನ್.ರಮೇಶ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)