ಸೈನಿಕರನ್ನು ಅವಮಾನಿಸುವವರು ಮುಳುಗಿ ಸಾಯಿರಿ-ವಿರೋಧಿಗಳಿಗೆ ನರೇಂದ್ರ ಮೋದಿ ಹಿಡಿಶಾಪ

ಶುಕ್ರವಾರ, ಏಪ್ರಿಲ್ 26, 2019
35 °C

ಸೈನಿಕರನ್ನು ಅವಮಾನಿಸುವವರು ಮುಳುಗಿ ಸಾಯಿರಿ-ವಿರೋಧಿಗಳಿಗೆ ನರೇಂದ್ರ ಮೋದಿ ಹಿಡಿಶಾಪ

Published:
Updated:
Prajavani

ಗಂಗಾವತಿ (ಕೊಪ್ಪಳ ಜಿಲ್ಲೆ): ‘ನಾವು ದೇಶ ಮೊದಲು ಎಂದರೆ ಇವರು ಕುಟುಂಬವೇ ಮೊದಲು ಎನ್ನುತ್ತಿದ್ದಾರೆ. ನಮ್ಮ ಸೈನಿಕರನ್ನು ಅವಮಾನಿಸುವವರು ಮುಳುಗಿ ಸಾಯಿರಿ’ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶದಿಂದ ವಿರೋಧಿಗಳಿಗೆ ಹಿಡಿಶಾಪ ಹೇಳಿದರು.

ಶುಕ್ರವಾರ ಇಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರದಲ್ಲಿ ಮಾತನಾಡಿದ ಅವರು, ‘ಎರಡು ಹೊತ್ತು ಊಟಕ್ಕೆ ಗತಿ ಇಲ್ಲದವರು ಸೇನೆ ಸೇರುತ್ತಾರೆ ಎಂದು ಇಲ್ಲಿಯ ಮುಖ್ಯಮಂತ್ರಿ ಹೇಳುತ್ತಾರೆ. ಕುಮಾರಸ್ವಾಮಿ ಅವರೇ ಇದೆಂಥ ಮಾತು? ನಿಮ್ಮ ಮನಸ್ಸಿನಲ್ಲಿರುವುದನ್ನೇ ಹೇಳಿದ್ದೀರಿ ಬಿಡಿ’ ಎಂದು ವಾಗ್ದಾಳಿ ನಡೆಸಿದರು.

‘ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ತಾವು ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ದೇವೇಗೌಡರ ಪುತ್ರ ಹೇಳಿದ್ದಾರೆ. 2014ರ ಚುನಾವಣೆಯಲ್ಲಿ ದೇವೇಗೌಡರೂ ಇದನ್ನೇ ಹೇಳಿದ್ದರು. ಸುಳ್ಳು ಹೇಳುವ ಇವರನ್ನು ನಂಬಬೇಡಿ. ಮಕ್ಕಳನ್ನೆಲ್ಲ ಚುನಾವಣೆಗೆ ನಿಲ್ಲಿಸುವ ಇಂಥವರನ್ನು ಧಿಕ್ಕರಿಸಿ, ರಾಷ್ಟ್ರವಾದ ಗೆಲ್ಲಿಸಿ’ ಎಂದು ಮನವಿ ಮಾಡಿದರು.

‘ರಾಜ್ಯದಲ್ಲಿ ಮೊದಲು ಕಾಂಗ್ರೆಸ್‌ನವರದ್ದು ಶೇ 10 ಪರ್ಸೆಂಟ್ ಸರ್ಕಾರ ಇತ್ತು. ಈಗ ಜೆಡಿಎಸ್‌ ಮತ್ತು ಕಾಂಗ್ರೆಸ್‌ನದ್ದು 20 ಪರ್ಸೆಂಟ್ ಸರ್ಕಾರ’ ಎಂದು ಛೇಡಿಸಿದರು.

‘ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ದೇಶವನ್ನು ಒಡೆದಾಳುವ ಭಾವನೆ ಇದೆ. ಟಿಪ್ಪು ಸುಲ್ತಾನ್ ಜಯಂತಿ ಮಾಡಲು ಇವರಿಗೆ ಹಣ ಇದೆ. ಆದರೆ ಈ ದೇಶದ ಪರಂಪರೆಗೆ ಶ್ರೇಷ್ಠ ಕೊಡುಗೆ ನೀಡಿದ ಹಂಪಿ ಉತ್ಸವ ಮಾಡಲು ಹಣವಿಲ್ಲ. ತುಂಗಭದ್ರಾ ಜಲಾಶಯ ವಿಸ್ತರಿಸಲು ಆಗುತ್ತಿಲ್ಲ. ನಮ್ಮ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಾವಿರಾರು ಕೋಟಿ ಸೌಲಭ್ಯ ನೀಡುತ್ತೇವೆ. ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ. ಕರ್ನಾಟಕದ ಎಲ್ಲ ರೈತರ ಖಾತೆಗೂ ಪ್ರೋತ್ಸಾಹ ಧನ, 60 ವರ್ಷ ಮೀರಿದ ರೈತರಿಗೆ ಪಿಂಚಣಿ ನೀಡುತ್ತೇವೆ’ ಎಂದ ಅವರು, ಈ ಯೋಜನೆಗಳನ್ನು ಮಾಡಿದರೆ ರೈತ ನಾಯಕ ಯಡಿಯೂರಪ್ಪನವರಿಗೆ ಖುಷಿ ಆಗುತ್ತದೆ ಎಂದು ಅವರತ್ತ ಕೈ ಮಾಡಿದರು.

‘ದೆಹಲಿ ತುಘಲಕ್ ರಸ್ತೆಯಲ್ಲಿ ಕಾಂಗ್ರೆಸ್‌ನ ದೊಡ್ಡ ನಾಯಕನ ಮನೆ ಇದೆ.  ಕ್ವಟ್ರೋಚಿ, ಮಿಷಲ್‌ ಮಾಮಾ ಮೂಲಕ ದೊಡ್ಡ–ದೊಡ್ಡ ಹಗರಣ ನಡೆಸಿದ್ದಾರೆ. ಅದು ಶೀಘ್ರ ಹೊರಬರಲಿದೆ. ಕೆಲ ತಿಂಗಳ ಹಿಂದೆ ರಚನೆಯಾ‌ದ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಮಕ್ಕಳು, ಗರ್ಭಿಣಿಯರಿಗೆ ಮೀಸಲಿಟ್ಟ ಹಣ ಲೂಟಿ ಮಾಡಿ ದೆಹಲಿಯ ತಮ್ಮ ನಾಯಕರಿಗೆ ನೀಡುತ್ತಿದೆ. ಬಡವರ ಅನ್ನಕ್ಕೂ ಕನ್ನ ಹಾಕಿರುವವರನ್ನು ಕ್ಷಮಿಸಬೇಡಿ’ ಎಂದರು.

‘ಸೈನಿಕರಿಗೆ ಕಳಪೆ ಶಸ್ತ್ರಾಸ್ತ, ಕಳಪೆ ಬುಲೆಟ್‌ ಪ್ರೂಫ್‌ ಜಾಕೆಟ್‌ಗಳನ್ನು ಹಿಂದಿನ ಸರ್ಕಾರ ಪೂರೈಕೆ ಮಾಡಿತ್ತು. ರಕ್ಷಣೆ ವಿಷಯದಲ್ಲಿಯೂ ಹೇಗೆ ದುಡ್ಡು ಹೊಡೆಯಬೇಕು ಎಂದೇ ಅವರು ವಿಚಾರ ಮಾಡುತ್ತಿದ್ದರು. ನಮ್ಮ ಸರ್ಕಾರ ಬಂದ ಮೇಲೆ ಅದಕ್ಕೆಲ್ಲ ಕಡಿವಾಣ ಹಾಕಲಾಗಿದೆ. ಇದೇ ಅವರಿಗೆ ತೊಂದರೆಯಾಗಿದೆ’ ಎಂದರು.

 ‘ಶ್ರೀರಾಮ ನವಮಿಗೂ ಮುನ್ನ ರಾಮನ ಸೇವಕ ಹನುಮನ ಜನ್ಮಭೂಮಿಗೆ ಆಶೀರ್ವಾದ ಪಡೆಯಲು ಬಂದಿದ್ದೇನೆ. ರಾಮನಿಗೆ ಶಬರಿ, ಹನುಮ ಹೇಗೆಯೋ ಹಾಗೆ ನಾನು ನಿಮ್ಮ ಪ್ರಧಾನ ಸೇವಕ. ಈ ದೇಶದ ಚೌಕೀದಾರ್ ’ ಎಂದು ಮೋದಿ ಹೇಳಿದಾಗ ಕಾರ್ಯಕರ್ತರಿಂದ ಚೌಕೀದಾರ್‌ ಘೋಷಣೆ ಮೊಳಗಿತು.

 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 1

  Sad
 • 0

  Frustrated
 • 8

  Angry

Comments:

0 comments

Write the first review for this !