ಮೋದಿ ರ‍್ಯಾಲಿಯತ್ತ ಬಿಜೆಪಿ ಚಿತ್ತ: ಪ್ರಿಯಾಂಕಾಗೆ ಕಾಂಗ್ರೆಸ್ ಮೊರೆ

ಮಂಗಳವಾರ, ಏಪ್ರಿಲ್ 23, 2019
31 °C
ಗಂಗಾವತಿಯಲ್ಲಿಯೇ ಮೂರು ಲೋಕಸಭಾ ಕ್ಷೇತ್ರದ ಜಂಟಿ ಪ್ರಚಾರ

ಮೋದಿ ರ‍್ಯಾಲಿಯತ್ತ ಬಿಜೆಪಿ ಚಿತ್ತ: ಪ್ರಿಯಾಂಕಾಗೆ ಕಾಂಗ್ರೆಸ್ ಮೊರೆ

Published:
Updated:
Prajavani

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರ ಕಣ ರಂಗೇರಿದೆ. ಬಿಜೆಪಿ, ಕಾಂಗ್ರೆಸ್ ಕ್ಷೇತ್ರದಲ್ಲಿ ಮೊದಲ ಹಂತದ ಶಕ್ತಿ ಪ್ರದರ್ಶನ ಮಾಡಿವೆ. ಏ.18ರಂದು ಗಂಗಾವತಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಕಾರ್ಯಕ್ರಮ ಯಶಸ್ವಿಗೆ ಸಿದ್ಧತೆ ನಡೆಸಲಾಗುತ್ತಿದೆ.

ಮೋದಿ ಮೋಡಿಗೆ ಆತಂಕಗೊಂಡಿರುವ ಕಾಂಗ್ರೆಸ್ ಮುಖಂಡರು, ಏ.20ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಕರೆಸಲು ಡಿಸಿಸಿ ವತಿಯಿಂದ ಮನವಿ ಮಾಡಿದ್ದು, ಕಾಂಗ್ರೆಸ್ ಪ್ರಚಾರ ಸಮಿತಿ ಘೋಷಣೆ ಮಾಡಬೇಕಾಗಿರುವುದೇ ಒಂದೇ ಬಾಕಿ ಇದೆ.

ಗಂಗಾವತಿಯಲ್ಲಿ ಏಕೆ ಸಮಾವೇಶ: ವಾಣಿಜ್ಯ, ವ್ಯಾಪಾರ ದೃಷ್ಟಿಯಿಂದ ಅತ್ಯಂತ ಮಹತ್ವದ ಸ್ಥಳವಾಗಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ ಲೋಕಸಭಾ ಕ್ಷೇತ್ರದ ಮಧ್ಯಬಿಂದುವಾಗಿರುವ ದೊಡ್ಡ ಪಟ್ಟಣ. ಜಿಲ್ಲಾ ಕೇಂದ್ರಕ್ಕಿಂತಲೂ ಹೆಚ್ಚಿನ ಚಟುವಟಿಕೆಯಿಂದ ಕೂಡಿದ್ದು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ನೆರವಾಗುತ್ತಿದೆ ಎನ್ನುವ ಕಾರಣಕ್ಕೆ ಇಬ್ಬರೂ ರಾಷ್ಟ್ರೀಯ ನಾಯಕರ ರ‍್ಯಾಲಿ ಗಂಗಾವತಿಯಲ್ಲಿಯೇ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಬಿಜೆಪಿಯಿಂದ ಸ್ಥಳ ಪರಿಶೀಲನೆ: ಏ. 18ರಂದು ಮಧ್ಯಾಹ್ನ 2 ಗಂಟೆ ನಂತರ ಗಂಗಾವತಿಗೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದು, ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. ಸಮಾವೇಶಕ್ಕಾಗಿ ಗಂಗಾವತಿಯಲ್ಲಿ ಪ್ರಾಥಮಿಕ ಸಿದ್ಧತೆಗಳು ನಡೆದಿದ್ದು, ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ನೇತೃತ್ವದಲ್ಲಿ ಸಮಾವೇಶದ ಸ್ಥಳ ಪರಿಶೀಲನೆ ನಡೆದಿದೆ.

ನಗರ ಹೊರಹೊಲಯದ ರಾಯಚೂರು ರಸ್ತೆ ಅಥವಾ ಕನಕಗಿರಿ ರಸ್ತೆಗೆ ಹೊಂದಿಕೊಂಡ 30 ಎಕರೆ ಪ್ರದೇಶದಲ್ಲಿ ಸಮಾವೇಶ ನಡೆಸಲು ಆ ಪಕ್ಷದ ನಾಯಕರು ತಯಾರಿ ನಡೆಸಿದ್ದಾರೆ.

20ಕ್ಕೆ ಪ್ರಿಯಾಂಕಾ?: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ನೇತೃತ್ವದಲ್ಲಿ ಏ.20ಕ್ಕೆ ಪ್ರಿಯಾಂಕಾ ಅವರನ್ನು ಕರೆಯಿಸಲು ಮುಂದಾಗಿದೆ. ಕೆಪಿಸಿಸಿಗೆ ಒಟ್ಟು ಮೂರು ದಿನಾಂಕಗಳನ್ನು ನೀಡಿದ್ದು, ಏ. 19,20,21 ಈ ಮೂರು ದಿನಾಂಕದಲ್ಲಿ ಯಾವುದಾದರು ಒಂದು ದಿನ ಬರುವಂತೆ ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಎರಡೂ ಪಕ್ಷಗಳು ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮಿಂಚಿನ ಸಂಚಾರದ ಮೂಲಕ ಪ್ರಚಾರ ನಡೆಸುತ್ತಿದ್ದು, ಆಯಾ ಪಕ್ಷದ ವರಿಷ್ಠರು, ಸ್ಟಾರ್ ಪ್ರಚಾರಕರು ಜಿಲ್ಲೆಗೆ ಭೇಟಿ ನೀಡಿ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.

ಸಿದ್ದು ರ‍್ಯಾಲಿ: ಮೈತ್ರಿ ಅಭ್ಯರ್ಥಿ ಪರವಾಗಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಏ. 19ರಂದು ಸಿರುಗುಪ್ಪ, ಮಸ್ಕಿ, ಸಿಂಧನೂರು ಸೇರಿ ಬೆಳಿಗ್ಗೆ ಒಂದು ಕಡೆ ರ‍್ಯಾಲಿ. ಅಂದೇ ಸಂಜೆ ಗಂಗಾವತಿ, ಕನಕಗಿರಿ ಸೇರಿ ಇನ್ನೊಂದು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !