ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಸಾಗರ | ಎಲ್ಲೆಡೆ ಕೃಷಿ ಚಟುವಟಿಕೆ ಚುರುಕು

ಭೂಮಿಯ ಹಸಿ ನೋಡಿ ಬಿತ್ತನೆಗೆ ಮುಂದಾಗಿ: ರೈತರಿಗೆ ಕೃಷಿ ಇಲಾಖೆ ಸಲಹೆ
Last Updated 10 ಮೇ 2020, 20:00 IST
ಅಕ್ಷರ ಗಾತ್ರ

ಹನುಮಸಾಗರ: ವಾರದಿಂದ ಅಲ್ಪಸ್ವಲ್ಪ ಮಳೆಯಾಗುತ್ತಿದ್ದು ಕೆಲ ಭಾಗಗಳಲ್ಲಿ ಹೆಸರು ಬಿತ್ತನೆಗೆ ಪೂರವಾಗುಷ್ಟು ಮಳೆ ಆಗಿರುವುದರಿಂದ ರೈತರು ಮುಂಗಾರು ಬಿತ್ತನೆ ಕೈಗೊಳ್ಳಲು ಮಡಿಗೇರ ಕುಲುಮೆಗಳಲ್ಲಿ ಕೃಷಿ ಚಟುವಟಿಕೆಗೆ ಬೇಕಾಗುವ ಕೂರಗಿಗಳನ್ನು ಸಿದ್ಧಪಡಿಸಿಕೊಳ್ಳುತ್ತಿರುವ ದೃಶ್ಯ ಭಾನುವಾರ ಕಂಡು ಬಂದಿತು.

‘ಈ ಬಾರಿ ಬಿತ್ತನೆಗೆ ಅನುಕೂಲವಾಗವಂತೆ ಮಳೆಯಾಗಿದೆ. ಅಲ್ಪಸ್ವಲ್ಪ ಭರಣಿ ಮಳೆಯಾಗಿದ್ದು ಜಮೀನುಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ಸೋಮವಾರದಿಂದ ಆರಂಭವಾಗುವ ಕೃತ್ತಿಕಾ ಮಳೆಗೆ ಹೆಸರು, ಸಜ್ಜೆ ಬಿತ್ತನೆಗೆ ಮುಂದಾಗುತ್ತೇವೆ. ರೋಹಿಣಿ ಮಳೆಯಾದರೆ ಜೋಳ, ತೊಗರಿ ಬಿತ್ತನೆ ಮಾಡುವ ಉದ್ದೇಶ ಇಟ್ಟುಕೊಂಡಿದ್ದೇವೆ' ಎಂದು ರೈತ ಮಲ್ಲಪ್ಪ ಕೊನಸಾಗರ ಹೇಳಿದರು.

ಈಗಾಗಲೆ ಕೆಲ ಭಾಗಗಳಲ್ಲಿ ಹೆಸರು, ಸೂರ್ಯಕಾಂತಿ ಬೀಜಗಳ ಬಿತ್ತನೆ ಕಾರ್ಯ ನಡೆದಿದೆ. ಕೆಲವೊಂದು ಬೀಜಗಳನ್ನು ಅನಿವಾರ್ಯವಾಗಿ ಎತ್ತಿನ ಕೂರಿಗೆಗಳಿಂದಲೇ ಬಿತ್ತನೆ ಮಾಡಬೇಕಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಕೂರಿಗೆ ತಯಾರಿಸುವ ಕೆಲಸ ಈಗ ಭರದಿಂದ ಸಾಗಿದೆ.

15 ದಿನಗಳ ಅವಧಿಯಲ್ಲಿ ಎರಡು ಬಾರಿ ಅಲ್ಪಸ್ವಲ್ಪ ಮಳೆಯಾಗಿರುವುದರಿಂದ ಮುಂದೆ ಮಳೆಯಾಗುವ ವಿಶ್ವಾಸದಿಂದ ರೈತರು ಮಿಂಚು ಹೆಸರು ಹಾಗೂ ಮುಂಗಾರು ಜೋಳ ಬಿತ್ತನೆಗೆ ಬೀಜಗಳ ಹುಡುಕಾಟದಲ್ಲಿದ್ದಾರೆ.

ಗ್ರಾಮೀಣ ಕುಲುಮೆಗಳಲ್ಲಿ ಶೇಂಗಾ ಕೂರಗಿ, ಎಳ್ಳು ಕೂರಗಿ, ಜೋಳದ ಕೂರಗಿಯಂತಹ ತರಾವರಿ ಕೂರಿಗೆಗಳನ್ನು ರೈತರು ಬಿತ್ತನೆಗೆ ಪೂರ್ವದಲ್ಲಿ ಸಿದ್ಧಪಡಿಸಿಕೊಳ್ಳುವುದು ಸಾಮಾನ್ಯ. ಆದರೆ ಈಚೆಗೆ ಟ್ರ್ಯಾಕ್ಟರ್ ಮೂಲಕ ಬಿತ್ತನೆ ಮಾಡುವುದು ಆರಂಭಗೊಂಡ್ದಿದರಿಂದ ಕಟ್ಟಿಗೆ ಕೂರಿಗೆಗಳಿಂದ ಬಿತ್ತನೆ ಮಾಡುವ ರೈತರ ಸಂಖ್ಯೆ ಕಡಿಮೆಯಾಗಿದೆ. ಜೊತೆಗೆ ಹಳ್ಳಿಗಳಲ್ಲಿ ಎತ್ತುಗಳ ಸಂಖ್ಯೆಯೂ ಕಡಿಮೆಯಾಗಿದೆ.

‘ನಮ್ಮ ಕುಲುಮ್ಯಾಗ ತಯಾರಾಗುವ ಕೂರಿಗೆಗಳನ್ನು ಬಳಸುವ ರೈತರ ಸಂಖ್ಯೆ ಈಗ ಕಡಿಮೆಯಾಗಿದೆ. ಹಿಂದೆ ಬೇಸಿಗೆಯಿಂದಲೇ ಕುಂಟಿ, ಕೂರಗಿ ಮಾಡಿಸಿಕೊಳ್ಳಾಕ ರೈತರ ಜಾತ್ರೋಪಾದಿಯಲ್ಲಿ ಸೇರುತ್ತಿದ್ದರು. ಆದರೆ ಈಗ ರೈತರು ಸಂಖ್ಯೆ ಕಡಿಮೆಯಾಗೈತ್ರಿ, ಇಂತಹ ಉದ್ಯೋಗ ಮಾಡಿಯೇ ಹೊಟ್ಟಿ ತುಂಬಿಸಿಕೊಳ್ಳುವ ನಮ್ಮಂತ ಕಸುಬುದಾರರಿಗೆ ಸರಿಯಾಗಿ ಮಳಿಯಾದ್ರ ಕೆಲಸ ಸಿಗತೈತ್ರಿ‘ ಎಂದು ಕುಲುಮೆ ಕೆಲಸ ಮಾಡುತ್ತಿದ್ದ ಶೇಷಪ್ಪ ಬಡಿಗೇರ ಹೇಳಿದರು.

‘ಮಿಂಚು ಹೆಸರು ಬಿತ್ತನೆ ಮಾಡಿವ್ರಿ, ಮುಂದೆ ಉತ್ತಮ ಮಳಿ ಬಂತಂದ್ರ ಜೋಳ ಬಿತ್ತನೆ ಮಾಡಬೇಕಂತ ಬೀಜ ಇಟ್ಟುಕೊಂಡು ಕುಂತೀವ್ರಿ, ಕಳೆದ ಮೂರು ವರ್ಷದಿಂದ ಸರಿಯಾದ ಸಮಯಕ್ಕೆ ಮಳೆ ಆಗದಿರುವುದರಿಂದ ಸರಿಯಾಗಿ ಜೋಳ ಬಿತ್ತನೆ ನಡೆದಿಲ್ಲ. ಈ ಬಾರಿ ಉತ್ತಮ ಮಳೆಯಾದ್ರ ಜೋಳ ಬಿತ್ತೀವ್ರಿ, ಹೊಟ್ಟಿಗೆ ಹಿಡಿ ಕಾಳು ಬರದ್ದಿದರೂ ದನಗಳಿಗೆ ಹೊರೆ ಮೇವು ಬೆಳಿತೈತ್ರಿ‘ ಶಿವಪ್ಪ ಪೂಜಾರ ಹೇಳಿದರು.

‘ರೈತ ಸಂಪರ್ಕ ಕೇಂದ್ರದಲ್ಲಿ ಸದ್ಯ 600ಕಿಲೊ ಹೆಸರು ಬೀಜವಿದ್ದು ಹಂಚಿಕೆ ಆರಂಭಿಸಿದ್ದೇವೆ. ಈ ಭಾಗಕ್ಕೆ ಅವಶ್ಯವಿರುವ ಬೀಜ, ಗೊಬ್ಬರ ಪ್ರಮಾಣವನ್ನು ಇಲಾಖೆಗೆ ತಿಳಿಸಿದ್ದೇವೆ. ಬಂದ ನಂತರ ರೈತರಿಗೆ ಮಾಹಿತಿ ನೀಡಲಾಗುತ್ತದೆ‘ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಪ್ರಕಾಶ ತಾರಿವಾಳ ತಿಳಿಸಿದರು.

*
ಭರಣಿ ಮಳೆಗೆ ಹೆಸರು ಬಿತ್ತಿದೆರೆ, ಎರಡನೇ ಬೆಳೆಯಾದ ಹಿಂಗಾರು ಬೆಳೆ ತೆಗೆಯಲು ಅನುಕೂಲವಾಗುತ್ತದೆ. ಈ ಬಾರಿ ಬಿತ್ತನೆಗೆ ಪೂರಕವಾಗುವಷ್ಟು ಮಳೆ ಸುರಿದಿದೆ.
-ಗುರಪ್ಪ ಮಡಿವಾಳರ, ಹನುಮಸಾಗರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT