ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಳ್ಳೆ ಕಡಿತ: ಜಾನುವಾರು ಸಾವು

ಪಶುಪಾಲಕರು ಸಂರಕ್ಷಣಾ ಕ್ರಮ ಅನುಸರಿಸಲು ವೈದ್ಯರ ಸಲಹೆ:
Last Updated 14 ಸೆಪ್ಟೆಂಬರ್ 2020, 8:03 IST
ಅಕ್ಷರ ಗಾತ್ರ

ಹನುಮಸಾಗರ: ಸಮೀಪದ ಹಿರೇ ಗೊಣ್ಣಾಗರ ಗ್ರಾಮದ ಯಮನೂರಪ್ಪ ಹನುಮನಾಳ ಎಂಬುವವರಿಗೆ ಸೇರಿದ ಎರಡು ಆಕಳುಗಳು ವಿಪರೀತ ಸೊಳ್ಳೆಗಳ ಕಡಿತದಿಂದ ಮೃತಪಟ್ಟಿದ್ದು, ಹಿರಿಯ ಪಶುವೈದ್ಯಾಧಿಕಾರಿ ಡಾ.ಸಿದ್ದಲಿಂಗಯ್ಯ ಸಂಕೀನ್ ಹಾಗೂ ಕೆಎಂಎಫ್ ಅಧಿಕಾರಿ ರಂಂಗಪ್ಪ ವಾಲ್ಮೀಕಿ ಭಾನುವಾರ ಪರಿಶೀಲಿಸಿದರು.

ಮೂರು ದಿನಗಳಿಂದ ರಕ್ತ ಹೀನತೆಯಿಂದ ಬಳಲುತ್ತಿದ್ದ ಜಾನುವಾರುಗಳನ್ನು ಸ್ಥಳೀಯ ವೈದ್ಯರಿಂದ ಚಿಕಿತ್ಸೆ ನೀಡಲಾಗಿತ್ತು. ಆದರೆ ಈ ಜಾನುವಾರುಗಳಿಗೆ ಈಗಾಗಲೆ ಬಬೇಸಿಯೋಸಿಸ್ ರೋಗ ಉಲ್ಭಣಗೊಂಡಿದ್ದರಿಂದ ಪ್ರಯೋಜನವಾಗಲಿಲ್ಲ ಎಂದು ಹಿರಿಯ ಪಶುವೈದ್ಯಾಧಿಕಾರಿ ಸಿದ್ದಲಿಂಗಯ್ಯ ಶಂಕೀನ ತಿಳಿಸಿದರು.

ರೈತರು ಜಾನುವಾರುಗಳ ಸಂರಕ್ಷಣೆಗೆ ಅಗತ್ಯ ಕ್ರಮ ಪಾಲಿಸಬೇಕು ಎಂದು ಮಾಹಿತಿ ನೀಡಲಾಗುತ್ತಿದೆ. ಬಬೇಸಿಯೋಸಿಸ್ ಎಂಬುದು ಸೊಳ್ಳೆಗಳಿಂದ ಬರುವ ಸಾಮಾನ್ಯ ಕಾಯಿಲೆಯಾಗಿದೆ. ಮಳೆಗಾಲದಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿ ದನಗಳಿಗೆ ವಿವಿಧ ರೋಗಗಳು ಹರಡಲು ಕಾರಣವಾಗುತ್ತದೆ. ಸೊಳ್ಳೆಪರದೆ, ಸಂಜೆ ಹೊಗೆ ಹಾಕುವುದು, ಜಾನುವಾರುಗಳಿಗೆ ರೋಗದ ಲಕ್ಷಣ ಕಂಡು ಬಂದ ತಕ್ಷಣ ವೈದ್ಯರ ಸಲಹೆ ಪಡೆದುಕೊಂಡರೆ ಜಾನುವಾರುಗಳನ್ನು ಉಳಿಸಿಕೊಳ್ಲಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಬಬೇಸಿಯೋಸಿಸ್ ಇದು ಹೆಚ್ಚಾಗಿ ಮಿಶ್ರತಳಿ ದನಗಳಿಗೆ ಬರುತ್ತದೆ. ನೊಣ, ಸೊಳ್ಳೆ, ಹೇನು, ಜಿಗಟ, ಕಜ್ಜಿ ಮತ್ತು ಉಣ್ಣೆಗಳು ಆಹಾರ, ಆಶ್ರಯ ಮತ್ತು ಸಂತಾನೋತ್ಪತ್ತಿಗಾಗಿ ಮಾತ್ರ ಸೀಮಿತಗೊಳ್ಳದೆ ರಕ್ತದ ಪ್ರೊಟೊಜೊವ ಬ್ಯಾಕ್ಟಿರಿಯಲ್, ವೈರಲ್ ರೋಗಗಳನ್ನು ಹರಡುವಲ್ಲಿ ಮಧ್ಯವರ್ತಿಗಳಾಗಿ ಪ್ರಮುಖ ಪಾತ್ರ ವಹಿಸುತ್ತವೆ. ಇದರಿಂದ ಜಾನುವಾರುಗಳಲ್ಲಿ ಜ್ವರ, ರಕ್ತ ಹೀನತೆ, ಹಿಮೊಗ್ಲೋಬಿನ್ ಮಿಶ್ರಿತ ಮೂತ್ರ, ಜಾಂಡೀಸ್ ಬರುತ್ತದೆಎಂದು ತಿಳಿಸಿದರು.

ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಸಾವು ಸಂಭವಿಸುತ್ತದೆ. ವೈದ್ಯರ ಸಲಹೆಯಂತೆ ಕೀಟನಾಶಕಗಳಿಂದ ಕೊಟ್ಟಿಗೆ ಮತ್ತು ಜಾನುವಾರುಗಳ ಮೈಮೇಲೆ ಸಿಂಪಡಿಸಿ ಪರೋಪಜೀವಿಗಳನ್ನು ನಾಶಪಡಿಸಿಬೇಕು ಎಂದು ಹೇಳಿದರು.

ಮಳೆಗಾಲ ಜಾನುವಾರುಗಳಿಗೆ ಮುಂಜಾಗ್ರತ ಕ್ರಮಗಳ ಜೊತೆಗೆ ತಮ್ಮ ಪಾಲನಾ ಪದ್ಧತಿಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅವಶ್ಯವಾಗುತ್ತದೆ. ಹೆಚ್ಚು ಮಳೆ ಬಿದ್ದಾಗ ವಾತಾವರಣದಲ್ಲಿನ ಉಷ್ಣತೆಯಲ್ಲಿ ಗಣನೀಯವಾಗಿ ಇಳಿಕೆ ಕಾಣುತ್ತದೆ. ಈ ರೀತಿಯ ವಾತಾವರಣವು ರೋಗ ತರುವ ಸೂಕ್ಷ್ಮಾಣು ಜೀವಿಗಳು ಮತ್ತು ಪರಾವಲಂಬಿ ಜೀವಿಗಳ ಬೆಳವಣಿಗೆಗೆ ಹೆಚ್ಚು ಅನುಕೂಲಕರವಾದುದು. ಇದರಿಂದ ಜಾನುವಾರುಗಳು ಖಾಯಿಲೆಗೆ ತುತ್ತಾಗುವ ಸಂಭವ ಹೆಚ್ಚು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT