ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕ ಮೂರ್ತಿ ಸ್ಥಾಪನೆಗೆ ಅಡ್ಡಿ: ಆರೋಪ

Last Updated 7 ಜುಲೈ 2021, 12:53 IST
ಅಕ್ಷರ ಗಾತ್ರ

ಕೊಪ್ಪಳ: ‘ಬಸ್‌ ನಿಲ್ದಾಣದ ಎದುರು ಕನಕದಾಸರ ವೃತ್ತ ಮತ್ತು ಮೂರ್ತಿ ಸ್ಥಾಪನೆಗೆ ಸಂಸದ ಸಂಗಣ್ಣ ಕರಡಿ ಅಡ್ಡಿಪಡಿಸುತ್ತಿದ್ದಾರೆ’ ಎಂದು ಹಾಲುಮತ ಸಮಾಜದ ಮುಖಂಡರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದಸಮಾಜದ ಗುರುಗಳಾದ ಹಾಲವರ್ತಿ ಜಡೇಸಿದ್ಧೇಶ್ವರ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ,‘ ಕನಕದಾಸರು ಒಂದು ಜಾತಿಗೆ ಸೀಮಿತವಾಗಿಲ್ಲ. ಐದಾರು ಶತಮಾನಗಳ ಹಿಂದೆಯೇ ಜಾತಿ ನಿರ್ಮೂಲನೆಗೆ ಶ್ರಮಿಸಿದ ಮಹಾನ್‌ ವ್ಯಕ್ತಿ. ಆದ್ದರಿಂದ ಮೂರ್ತಿ ಸ್ಥಳದ ಕುರಿತು ಅಪಸ್ವರ ಎತ್ತಿರುವುದು ಖಂಡನೀಯ’ ಎಂದರು.

1988 ರಲ್ಲಿ ಸಾರಿಗೆ ಸಚಿವರಾಗಿದ್ದ ಸಿದ್ದರಾಮಯ್ಯನವರು ಅಂದು ಕನಕದಾಸ ವೃತ್ತ ಎಂದು ನಾಮಕರಣ ಮಾಡಿ ಅದನ್ನು ಅನಾವರಣ ಮಾಡಿದ್ದರು. ಆದರೆ ಮೂರ್ತಿ ಪ್ರತಿಷ್ಠಾಪನೆ ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಸುತ್ತಮುತ್ತಲಿನ ಬೀದಿ ವ್ಯಾಪಾರದಿಂದ ವೃತ್ತ ಕಾಣದಂತೆ ಆಗಿತ್ತು. ಈಗ ಅದಕ್ಕೆ ಕಾಲಕೂಡಿ ಬಂದಿದ್ದು, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಮಾಜದ ಮುಖಂಡ ಕೆ.ಎನ್‌.ಕೊಡತಗೇರಿ ಮಾತನಾಡಿ,‘ವೃತ್ತ ನಿರ್ಮಾಣಕ್ಕೆ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ. ಪರವಾನಗಿ ನೀಡಿದ ವರ ವಿರುದ್ಧ ಕ್ರಮ ಜರುಗಿಸಿ ಮಾಹಿತಿ ನೀಡಬೇಕು ಎಂದು ಸಂಸದ ಸಂಗಣ್ಣ ಕರಡಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಮೂರ್ತಿ ಪ್ರತಿಷ್ಠಾಪನೆ ಕಾರ್ಯ ವಿಳಂಬಕ್ಕೆ ಕಾರಣರಾಗಿದ್ದಾರೆ. ಅವರ ಬಗ್ಗೆ ನಮಗೆ ಗೌರವ ಇದೆ. ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಬಾರದು. ಕ್ಷಮೆಯಾಚನೆ ಮಾಡಿ ಪತ್ರ ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.

ಸಮಾಜದ ಮುಖಂಡರಾದ ಹನಮಂತ ಹಳ್ಳಿಕೇರಿ, ಕಳಕನಗೌಡ ಗೌಡರ, ಗ್ಯಾನಪ್ಪ ತಳಕಲ್ ಹಾಗೂ ಶಿವಣ್ಣ ಇದ್ದರು.

ಮೂರ್ತಿ ಸ್ಥಾಪನೆಗೆ ವಿರೋಧವಿಲ್ಲ: ಸಂಸದ

‘ಕುರುಬ ಸಮಾಜದವರು ವಿರೋಧಿಗಳಲ್ಲ. ಕನಕದಾಸರ ಬಗ್ಗೆಯೂ ಗೌರವ ಇದೆ. ನಗರಸಭೆಗೆ ಸೇರಿದ ವಾಣಿಜ್ಯ ಸಂಕೀರ್ಣವನ್ನು ಹಳೆ ಕಟ್ಟಡ ಎಂದು ನೆಲಸಮಗೊಳಿಸಿ, ಅಲ್ಲಿವ್ಯಾಪಾರ ಮಾಡುತ್ತಿದ್ದ 20 ಜನರನ್ನು ಬೇರೆ ಕಡೆಗೆ ತೆರಳುವಂತೆ ಮಾಡಲಾಗಿದೆ. ಮಾಹಿತಿ ನೀಡದೇ ಏಕಾಏಕಿ ಕಾಮಗಾರಿ ಆರಂಭಿಸಲಾಗಿದೆ’ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದರು.

ಮೂರ್ತಿ ಸ್ಥಾಪನೆಗೆ ಅಪಸ್ವರ ತೆಗೆದಿದ್ದಾರೆ ಎಂಬ ವಾದ ಹೆಚ್ಚಾಗುತ್ತಿರುವ ಕಾರಣ ಸಂಸದರು ಪ್ರತಿಕ್ರಿಯೆ ನೀಡಿ, ಅಲ್ಲಿ ವೃತ್ತ, ಮೂರ್ತಿ ಸ್ಥಾಪನೆಗೆ ನಮ್ಮ ವಿರೋಧವಿಲ್ಲ. ನಗರಸಭೆ ಆಡಳಿತ ಮಂಡಳಿಯಲ್ಲಿ ಚರ್ಚೆ ನಡೆಸದೇ, ಜನಪ್ರತಿನಿಧಿಗಳಾದ ನಮ್ಮ ಗಮನಕ್ಕೂ ತಾರದೇ ಈಗ ಮೂರ್ತಿ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಯಾವ ಹಿನ್ನೆಲೆಯಲ್ಲಿ ಅನುಮತಿ ನೀಡಲಾಯಿತು ಎಂಬ ಮಾಹಿತಿಯನ್ನು ನಾವು ಜಿಲ್ಲಾಧಿಕಾರಿಗಳಿಗೆ ಕೇಳಿದ್ದೇವೆ. ಇದರ ಹಿಂದೆ ಯಾವುದೇ ದುರುದ್ದೇಶ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ಕುರಿತು ನಮಗೂ ದೂರುಗಳು ಬಂದಿವೆ. ಸಂಸದರಾಗಿ ಪ್ರಶ್ನೆ ಮಾಡದೇ ಇದ್ದರೆ ಹೇಗೆ. ವಿಚಾರವಂತರಾದವರು ಕೂಲಂಕಶವಾಗಿ ತಿಳಿದುಕೊಂಡು ಚರ್ಚೆ ಮಾಡುತ್ತಾರೆ.ಸಭೆಯಲ್ಲಿ ವಿಷಯ ಮಂಡಿಸದೇ ಅಂದಿನ ನಗರಸಭೆ ಆಡಳಿತಾಧಿಕಾರಿ ಸರ್ವಾಧಿಕಾರಿ ಧೋರಣೆ ತಾಳಿರುವುದು ಸರಿಯಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಿಸಿದವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT