ಕೊಪ್ಪಳ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವಂತೆ ಕೇಳುತ್ತೇವೆ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಇಂಡಿಯಾ ಮತ್ತು ಕಾಂಗ್ರೆಸ್ ಒಂದಾಗಿ ಚುನಾವಣೆ ಎದುರಿಸಲಿರುವ ಕಾರಣ ರಾಜ್ಯದ ಕಡೆಯೂ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಇದ್ದಾರೆ. ಅದರಂತೆ ಜಿಲ್ಲೆಯಲ್ಲಿಯೂ ಇದ್ದಾರೆ’ ಎಂದರು. ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲಿ ರಾಜಶೇಖರ ಹಿಟ್ನಾಳ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರಲ್ಲವೇ ಎನ್ನುವ ಪ್ರಶ್ನೆಗೆ ’ಅವರು ನಮ್ಮ ಪಕ್ಷದ ಹಿರಿಯರು. ಸಹಜವಾಗಿ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ. ನಮ್ಮ ಕುಟುಂಬದ ಸದಸ್ಯರು ಹಿಂದಿನ ಎರಡು ಸಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಡಿಮೆ ಮತಗಳಿಂದ ಸೋತಿದ್ದಾರೆ. ಆದ್ದರಿಂದ ಈ ಬಾರಿಯೂ ಟಿಕೆಟ್ ಕೇಳುತ್ತೇವೆ. ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ಅಂತಿಮವಾಗಿ ಹೈಕಮಾಂಡ್ ತೀರ್ಮಾನಿಸುತ್ತದೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಕೆಲಸ ಮಾಡುತ್ತೇವೆ’ ಎಂದರು.
‘ಚೈತ್ರಾ ಕುಂದಾಪುರ ವಂಚನೆ ಮಾಡಿದ್ದಾಳೆ ಎನ್ನುವ ಕಾರಣಕ್ಕಾಗಿಯೇ ಬಂಧಿಸಲಾಗಿದೆ. ಅವರು ಮೂಲತಃ ಆರ್‌ಎಸ್‌ಎಸ್ ಹಿನ್ನಲೆಯಿಂದ ಬಂದವರು. ಅಂಥವರೇ ಹಣ ಹೊಡೆದಿದ್ದಾರೆ ಎಂದರೆ ಹೇಗೆ? ಮುಂದಿನ ದಿನಗಳಲ್ಲಿ ಇನ್ನಷ್ಟು ವಂಚನೆ ಬಯಲಿದೆ ಬರಲಿದೆ. ಈ ಘಟನೆಗೂ ಜಿಲ್ಲೆಯೊಂದಿಗೆ ಯಾವುದೇ ನಂಟು ಇಲ್ಲ. ಪ್ರಚೋದನಕಾರಿಯಾಗಿ ಮಾತನಾಡುವವರಿಗೆ ಬಿಜೆಪಿಯಲ್ಲಿ ಸ್ಥಾನಮಾನ ಸಿಗುತ್ತದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.