ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಸಂಗೀತ ಕಲಿಕೆಗೆ ಪ್ರೋತ್ಸಾಹಿಸಿ- ಶಾಸಕ ಅಮರೇಗೌಡ ಬಯ್ಯಪುರ

ವಿವೇಕ ಸಂಗೀತ ವಿದ್ಯಾಲಯ ಉದ್ಘಾಟನೆ
Last Updated 19 ಅಕ್ಟೋಬರ್ 2021, 6:28 IST
ಅಕ್ಷರ ಗಾತ್ರ

ಕುಷ್ಟಗಿ: ದೇಶ ವಿದೇಶದಲ್ಲೂ ಮನ್ನಣೆಗಳಿಸಿರುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಗ್ಗೆ ಯುವಕರು ಆಸಕ್ತಿ ಬೆಳೆಸಿಕೊಳ್ಳಬೇಕಿದೆ ಎಂದು ಶಾಸಕ ಅಮರೇಗೌಡ ಬಯ್ಯಪುರ ಹೇಳಿದರು.

ಪಟ್ಟಣದಲ್ಲಿ ಈಚೆಗೆ ಅಸ್ತಿತ್ವಕ್ಕೆ ಬಂದ ವಿವೇಕ ಸಂಗೀತ ವಿದ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೀತಕ್ಕೆ ಮನಸ್ಸನ್ನು ಮುದ ಗೊಳಿಸುವ ಶಕ್ತಿ ಇದೆ. ಬದುಕಿನಲ್ಲಿ ಎದುರಾಗುವ ಮಾನಸಿಕ ಒತ್ತಡವನ್ನು ನೀಗಿಸಿ ಮನ ಮುದಗೊಳಿಸುವ ಶಕ್ತಿ ಸಂಗೀತದಲ್ಲಿದೆ. ಆದರೆ ಇಂಥ ಮಹತ್ವ ಪಾಶ್ಚಿಮಾತ್ಯ ಸಂಗೀತದಲ್ಲಿ ಇಲ್ಲ. ಆದರೂ ಮಕ್ಕಳು, ಯುವಕರು ಪಾಶ್ಚಿಮಾತ್ಯ ಸಂಗೀತದತ್ತ ವಾಲುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ದೇಶದಲ್ಲಿ ಹಿಂದೂಸ್ತಾನಿ, ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಅನೇಕ ಮಹಾನ್‌ ಕಲಾವಿದರು ನಮ್ಮ ದೇಶ ಮತ್ತು ಸಂಗೀತಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಶಾಶ್ವತವಾಗಿ ಉಳಿಯುವ ಸಾಮಾಜಿಕ ವ್ಯವಸ್ಥೆಯಲ್ಲಿ ಉತ್ತಮ ಬದಲಾವಣೆಗೆ ಕಾರಣವಾಗುವ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯುವ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಹೀಗಾದಾಗ ದೇಸಿ ಸಂಗೀತ ಮತ್ತು ಕಲಾವಿದರಿಗೆ ಪ್ರಾಮುಖ್ಯತೆ ನೀಡಿದಂತಾಗುತ್ತದೆ. ಅಂಥ ವ್ಯವಸ್ಥೆ ಹುಟ್ಟುಹಾಕುವಲ್ಲಿ ಸಂಗೀತ ಶಾಲೆಗಳು ಪ್ರಯತ್ನ ಮುಂದುವರೆಸಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ ಮಾತನಾಡಿ, ಸಂಗೀತ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯಕ್ಕೂ ಪೂರಕವಾಗಿದ್ದು, ನಾಡಿನ ಸಂಗೀತ ದಿಗ್ಗಜರಿಂದ ಬೇರೆ ದೇಶಗಳೂ ಸಂಗೀತ ಸೇವೆ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಲಾವಿದ ಸಂಗಮೇಶ್ವರ ಸಾದ್ವಿಮಠ ಮಾತನಾಡಿ, ಸಂಗೀತದಲ್ಲಿ ಆಸಕ್ತಿ ಇರುವ ಯಾರೇ ಆದರೂ ವಯಸ್ಸಿನ ನಿರ್ಭಂಧ ಇಲ್ಲದೆ ಕಲಿಕೆಗೆ ಅವಕಾಶ ಕಲ್ಪಿಸಿ ಸಂಗೀತ ಪರೀಕ್ಷೆಗೆ ಸಮರ್ಥರನ್ನಾಗಿಸುವ ನಿಟ್ಟಿನಲ್ಲಿ ಶಾಲೆಯ ಸಂಗೀತ ಶಿಕ್ಷಕರು ಮುತುವರ್ಜಿ ವಹಿಸಲಿದ್ದಾರೆ ಎಂದು ಹೇಳಿದರು.

ಶಿಕ್ಷಕ ಮೌನೇಶ ಬಡಿಗೇರ, ವಿರೇಶ ಬಂಗಾರಶೆಟ್ಟರ, ವೀರೂ ಪಾಟೀಲ, ಎ.ವೈ.ಲೋಕರೆ, ರವೀಂದ್ರ ಬಾಕಳೆ, ಡಾ.ಮಲ್ಲಪ್ಪ ಪಳೂಟಿ, ರೇಷ್ಮೆ ಇಲಾಖೆ ನಿವೃತ್ತ ಅಧಿಕಾರಿ ಎಸ್‌.ಜಿ.ಗಣಾಚಾರಿ, ರಾಜು ಹೆಬಳೆ ಇತರರು ಇದ್ದರು. ಶಿಕ್ಷಕ ಕುಮಾರಸ್ವಾಮಿ ಹಿರೇಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT