ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನ್‌ ಎಮ್ಮೆಲ್ಲೆಗಳೋ ಯಾಕ್ಹಿಂಗ್‌ ಆಡ್ತಾರೊ!

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗುರುವಾರದ ಸಂತಿ ಮಾಡಾಕ್‌ ಬಜಾರ್‌ದಾಗ್‌ ಹೊಂಟಾಗ ದೂರದಿಂದಲೇ ಪಟಾಕಿ, ಬಾಜಾಬಜಂತ್ರಿ ಸದ್ದು ಕೇಳಿಬರಾಕತ್ತಿತ್ತು. ಎಂಎಲ್‌ಎ ಎಲೆಕ್ಷನ್‌ಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಸಾಕ್‌ ಸವಾರಿ ಹೊಂಟಿದ್ದು ನೋಡಿ ರಸ್ತೆ ಬದಿ ನೋಡ್ತಾ ನಿಂತೆ. ‘ಅಂವಾ ಮೊನ್ನೆಅರ ತೆನೆ ಹೊತ್ತ ಪಾರ್ಟ್ಯಾಗ್‌ ಇದ್ನಲ್ಲ. ಇವತ್ ನೋಡಿದ್ರ ಕಮಲ ಹಿಡಕೊಂಡಾನ್‌. ಆಕಿ ಅಂತ್ರು ಬಿಜೆಪಿಗೆ ಮಣ್‌ ಹೊತ್ತಾಕಿ. ಈಗ ಮೊದ್ಲ ಬಾರಿಗೆ ತೆನೆ ಹೊತ್ಕೊಂಡು ಉಸ್ಸಪ್ಪಾ ಅನ್ನಾಕತ್ತಾಳ್‌. ಚೆಡ್ಡಿ ತೊಡುತ್ತಿದ್ದಾಗ್‌ನಿಂದ್‌ ಬಿಜೆಪ್ಯಾಗ್‌ ಇದ್ದಾಂವ ಈಗ ನೋಡಿದ್ರ ‘ಕೈ’ ಹಿಡದಾನ. ಇವ್ಕ ಸ್ವಲ್ಪನಾರ ಮಾನಾ ಮರ್ವಾದಿ ಐತೇನ್‌’ ಅಂತ ಪಕ್ಕದಾಗ ನಿಂತಿದ್ದ ರಾಮ್ಯಾ ಬೈದುಕೊಳ್ಳುತ್ತಿದ್ದ. ‘ಇವ್ರ ಏನರ್‌s ಆರ‍್ಸಿ ಬಂದ್ರ ಮತ್‌ ಯಾವ ಪಾರ್ಟಿಗೆ ಹೋಗ್ತಾರೋ ಅನ್ನೋದು ಅವ್ಕ ಗೊತ್ತ ಇದ್ದಂಗ್‌ ಕಾಣ್ಸುದಿಲ್ಲ’ ಎಂದು ಭೀಮ್ಯಾ ಮಾರುತ್ತರ ನೀಡುತ್ತಲೇ ಬೀಡಿ ಹಚ್ಕೊಂಡ.

ಆ ಗದ್ದಲ್‌ದಾಗ್‌ ಕಣ್ಣಿಗೆ ಬಿದ್ದ ದತ್ಯಾನ ಹಿಡ್ದು ನಿಲ್ಸಿ, ‘ಏಯ್‌ ಪ್ರಭ್ಯಾ ಎಲ್ಲಿ ಅದಾನ್‌, ನೋಡಿಯೇನ್‌’ ಎಂದು ಪ್ರಶ್ನಿಸಿದೆ. ‘ಅಂವಾ ಈಗ ಸ್ವರ್ಗದಾಗ ಅದಾನ’ ಅಂದ. ‘ಒಗಟಾಗಿ ಹೇಳಬ್ಯಾಡ. ಸ್ವಲ್ಪ ಬಿಡಿಸಿ ಹೇಳ್‌’ ಎಂದೆ. ‘ಅದs, ಬಾಬು ಪ್ಯಾರಡೈಸ್‌ ಬಾರ್‌ನಾಗ್‌ ಕುಂತಾನ್‌ ನೋಡ್‌’ ಅಂದ. ‘ಅಂವ್ಗ ಭೆಟ್ಟಿ ಆಗಬೇಕಾಗೇತಿ. ಬರ್ತಿ ಏನ್‌’ ಎಂದೆ. ‘ಮಟಮಟ ಮಧ್ಯಾಹ್ನದಾಗ ತಂಪ್ ಬಿಯರ್‌ ಕುಡಸ್ತೀನಿ ಅಂದ್ರ ಯಾವ್‌ ನನ್ನ ಮಗ ಬ್ಯಾಡ ಅಂತಾನ್ ನಡಿ’ ಅಂದ.

ಇಬ್ರೂ, ಬಾರ್‌ಗೆ ಹೋಗಿ ಮಂದ ಬೆಳಕ್‌ನ್ಯಾಗ್‌ ಮೂಲ್ಯಾಗ್‌ ಕುಂತಿದ್ದ ಪ್ರಭ್ಯಾನ ಮುಂದ್‌ ಕುಕ್ಕರ್‌ಬಡಿದ್ವಿ. ‘ಅಲ್ಲೋ, ಎಲ್ಲಾ ಪಕ್ಷದವ್ರು ಧೂಂ ಧಾಂ ಮೆರವಣಿಗೆ ಮಾಡ್ಕೋತ ನಾಮಪತ್ರ ಸಲ್ಸಾಕತ್ತಾರ್‌. ನೀ ನೋಡಿದ್ರ ಇಲ್ಲಿ ಎಣ್ಣಿ ಹಾಕ್ಕೊಂಡ್‌ ಕುಂತಿಯಲ್ಲ. ಏನ್‌ ನಿನ್ನ ಕತಿ’ ಎಂದೆ ಕಕ್ಕುಲಾತಿಯಿಂದ.

‘ನಾ ಯಾವ ಪಕ್ಷದಾಗ್‌ ಅದೀನಿ ಅನ್ನೋದು ನೆನಪ್‌ ಮಾಡ್ಕೊಳಾಕ್‌ ಕುಡ್ಯಾಕ್‌ ಕುಂತೀನಿ’ ಅಂದ ಪ್ರಭ್ಯಾ. ‘ಭಪ್ಪರೆ ಮಗನs. ಎಲ್ರೂ ಏನೇನೋ ಮರ‍್ಯಾಕ್‌ ಕುಡಿತೀದ್ರ. ನಿನ್ನ ಕತಿ ಉಲ್ಟಾನ ಐತಿ ಬಿಡಪಾ. ದಾರು ಕುಡದ್ರ ಅದೆಲ್ಲ ನೆನಪಾಗುದಿಲ್ಲಲೆ. ಮಂಪರು ಪರೀಕ್ಷೆಗೆ ಒಳಪಡಬೇಕ್‌. ನೀನು ಬಿಜೆಪಿಗೆ ಹಿಂದ್‌ ಬೈದದ್ದು ಸೇರಿ ಎಲ್ಲಾ ನೆನಪಾಗ್ತದ ನೋಡು’ ಎಂದೆ.

‘ಅದಿರ್ಲಿ, ನಿಮ್ಮ ಪಾರ್ಟಿ ಎಂಪಿ, ಧರ್ಮ– ಸಂಸ್ಕೃತಿ ಸಂರಕ್ಷಣೆಯ ಕಟ್ಟಾಳು ಸಾಕ್ಷಿ ಮಹಾರಾಜ್‌, ‘ಲೆಟ್ಸ್‌ ಮೀಟ್‌’ ಹೆಸರಿನ ಬಾರ್‌ ಅಂಡ್‌ ನೈಟ್‌ಕ್ಲಬ್‌ ’ ಉದ್ಘಾಟ್ಸ್ಯಾರ್‌. ಕುಡ್ಯಾಕ್‌, ಕುಣ್ಯಾಕ್‌ ಅಲ್ಲಿಗೆ ಹೋಗೂದ್‌ ಬಿಟ್ಟು ಇಲ್ಯಾಕ್‌ ಕುಂತಿ ಮಬ್ಬs’ ಎಂದು ಬೈದೆ.

‘ಏಯ್‌ ಅವ್ರು ಭಾರತದ ಭವ್ಯ ಪರಂಪರೆ ಮತ್‌s ಸಂಸ್ಕೃತಿಯ ರಕ್ಷಕರು. ಅವ್ರ ಹೆಂಗ್‌ ಬಾರ್‌ ಉದ್ಘಾಟನೆ ಮಾಡ್ತಾರ್‌. ಸುಳ್‌ ಸುದ್ದಿ ಹೇಳಬ್ಯಾಡ, ಬರೀ ಬ್ಯಾಡ್‌. ಕೇಸ್‌ ಆಕ್ತೈತಿ ನೋಡ್‌’ ಎಂದು ಬೆದರಿಸಿದ.

‘ಖರೇನೋ ಮಾರಾಯಾ. ಸಾಕ್ಷಿ ಮಹಾರಾಜ್‌ ಅವರೇ ಇದ್ಕ ಖುದ್‌ ಸಾಕ್ಷಿ ಅದಾರ್‌. ಯಾವ ಕೋರ್ಟೂ ಸಾಕ್ಷ್ಯಾಧಾರ ಇಲ್ಲ ಅಂತ ಹೇಳೂ ಹಂಗs ಇಲ್ಲ. ಗುಂಡೂರಾವ್‌ ಅವರು ಹಿಂದ್‌ ಈಜುಗೊಳದಾಗ್‌ ಧುಮುಕಿ ಉದ್ಘಾಟನೆ ಮಾಡ್ದಂಗ್‌, ಈ ಮಹಾರಾಜರು ‘ಲೆಟ್ಸ್‌ ಮೀಟ್‌’ನ್ಯಾಗ್‌ ‘ಮೀಟ್’ ತಿಂದ್ರೊ ಅಥ್ವಾ ಲೈಟಾಗಿ ಏನಾದ್ರು ತಗೊಂಡು ಉದ್ಘಾಟನೆ ಮಾಡಿದ್ರೊ ಗೊತ್ತಿಲ್ಲ. ಒಟ್‌ನ್ಯಾಗ್ ಅವ್ರs ನೈಟ್‌ಕ್ಲಬ್‌ ಚಾಲು ಮಾಡಿದ್ದಂತೂ ಖರೆ ಐತಿ. ಮೋದಿ ಸಾಹೇಬ್ರು ಮುಂದಿನ ‘ಮನ್‌ ಕಿ ಬಾತ್‌’ನ್ಯಾಗ್‌, ಭಾರತಾಂಬೆಯ ಮಕ್ಕಳೆಲ್ಲ ಬನ್ನಿ ಒಂದಾಗಿ ಸೇರೋಣ (ಲೆಟ್ಸ್‌ ಮೀಟ್‌), ರಾತ್ರಿ ಪಾರ್ಟಿ ಮಾಡೋಣ ... ಅಂತ ರಾಗಬದ್ಧವಾಗಿ ಭಾಷ್ಣಾ ಬಿಗಿಬಹುದು ನೋಡು’ ಎಂದು ಛೇಡಿಸಿದೆ.

‘ಸಾಕ್ಷಿ ಮಹಾರಾಜರನ್ನ, ಯೋಗಿಗಳನ್ನ ನಿನಗ್‌ ಮನ್ಸಿಗೆ ಬಂದ್ಹಂಗ್‌ ಬೈ. ಹೆಂಗ್‌ರ ಪೂಜೆ ಮಾಡು. ಆದ್ರ ಮೋದಿ ಮಹಾರಾಜ್‌ ಬಗ್ಗೆ ಹಂಗೆಲ್ಲ ಹಗುರಾಗಿ ಮಾತನಾಡಬೇಡ’ ಎಂದು ಪ್ರಭ್ಯಾ ನಶೆದಾಗ್s ತಾಕೀತು ಮಾಡಿದ.

‘ಆಯ್ತು ಬಿಡಪ. ನಿನ್ನ ವಿಷಯಾಕ್ಕ ಬರೋಣ. ಪಕ್ಷಾಂತರಿಗಳ ಬಗ್ಗೆ ನೀ ಯಾಕ್‌ ತಲೆ ಕೆಡಿಸಿಕೊಳ್ತಿ. ಖರ್ಚ್‌ ಮಾಡಾವ್ರು ಅವ್ರು. ಯಾವ ಪಾರ್ಟಿ ಆದ್ರೇನ್‌. ಎಲ್ಲಾ ಪಕ್ಷದೊಳ್ಗ ಅದೇ ಕಳಂಕಿತರು, ವಲಸಿಗರು, ಪಕ್ಷನಿಷ್ಠೆ ಇಲ್ಲದವರs ಅದಾರ್‌. ಅವ್ರೆಲ್ಲ ಪಕ್ಷಾಂತರಿಗಳಷ್ಟ ಅಲ್ಲ. ಭಕ್ಷಾಂತರಿಗಳಲೇ. ದುಡ್ಡು ಬಿಸಾಕಿ ಪಕ್ಷಗಳನ್ನ ಆಪೋಶನ ತಗೋತಾರ್ಲೆ ಅವ್ರು.

‘ಎಲ್ಲಾ ಕಾಂಚಾಣಂ ಪ್ರಭಾವ. ದುಡ್ಡಿದ್ದವನೇ ದೊಡ್ಡಪ್ಪ, ಅವ್ನೇ ಗೆಲ್ಲೋದಪ್ಪ. ಸಮೀಕ್ಷೆ, ಪಕ್ಷನಿಷ್ಠೆ ಎಲ್ಲಾ ಮಣ್ಣು ಮಸಿ’ ಎಂದೆ.  ‘ಹ್ಞೂನಪಾ. ನಮ್ಮ ಅಮಿತ್‌ ಶಾ ಸಾಹೇಬ್ರೂ ಅದ್ನ ಟ್ವೀಟ್‌ ಮಾಡ್ಯಾರ್‌, ನೋಡಿ ಇಲ್ಲ' ಎಂದ ಪ್ರಭ್ಯಾ ಎದೆಯುಬ್ಬಿಸಿ.  ‘ಭಾಳ್‌ ಧಿಮಾಕ್‌ ಮಾಡ್ಬ್ಯಾಡ. ಎರಡ್‌ ಸಾಲ್‌ನ್ಯಾಗ್‌, – ಕುರುಡು ಕಾಂಚನ (ಕಾಂಚಾಣ), ಈ ಸಾಲಗಳು (ಸಾಲುಗಳು), ವರ್ಣಿಸುತ್ತದೆ (ವರ್ಣಿಸುತ್ತವೆ)– ಮೂರು ತಪ್ಪುಗಳು ಉಳದಾವ್‌ ನೋಡಲೇ’ ಎಂದೆ.

‘ಕನ್ನಡದಾಗ ಎಂಎ ಮಾಡಿದವ್ರಿಗೇ ಸುದ್ಧ ಕನ್ನಡಾ ಬರೂದಿಲ್ಲ. ಇನ್ನs ಎಲೆಕ್ಷನ್‌ದಾಗ ಟ್ವೀಟ್‌ ಮಾಡು ಉಪದ್ವಾಪಿ ಮಾಡಾಕ್‌ ಹೋದ್ರ ಹೀಂಗೇ ಆಗ್ತೈತಿ’ ಅಂದ. ‘ಮೂರ್ನಾಲ್ಕು ಜಿಲ್ಲೆಯವರಿಗೆ ಬಿಟ್ರ ಬ್ಯಾರೆಯವ್ರಿಗೆ ಶುದ್ಧ ಕನ್ನಡಾನ ಬರುದಿಲ್ಲ' ಅಂತ ನಿಮ್ಮ ಪಾರ್ಟಿಯ ಕೌಶಲ ಅಭಿವೃದ್ಧಿ ಸಚಿವ್ರು ಹೇಳಿದ್ದನ್ನು ನಿಮ್ಮವರs ಖರೆ ಮಾಡ್ಯಾರ್‌ ನೋಡ್‌’ ಎಂದು ಹೇಳಿ ಅವ್ನ ಪ್ರತಿಕ್ರಿಯೆಗೆ ಕಾದೆ.

ಅಡ್ಡಬಾಯಿ ಹಾಕಿದ ದತ್ಯಾ, ‘ಅಭ್ಯರ್ಥಿಗಳ ಮಕಾ ನೋಡ್ಬ್ಯಾಡ್ರಿ. ಭಾರತ ಮಾತೆ, ಮೋದಿ ಮಕಾ ನೋಡಿ ಪಕ್ಷದ ಪರವಾಗಿ ಕೆಲ್ಸ ಮಾಡ್ರಿ ಅಂತs ಚಾಣಕ್ಯ ಅಪ್ಪಣೆ ಕೊಡಿಸ್ಯಾನಲ್ಲ, ನೀ ಏನ್‌ ಅಂತಿ’ ಅಂತ ಪ್ರಶ್ನಿಸಿದ.

‘ಕಳಂಕಿತ ಪುತ್ರರನ್ನ ಆರಿಸಿ ಕಳಿಸಿದ್ರ ಅವರ ಮುಖಕ್ಕ ಮೆತ್ತಿದ ಕಳಂಕದ ಕಪ್ಪು ಮಸಿಯಿಂದ, ಮೋದಿ ಮುಖಾನೂ ಕಪ್ಪಗಾಗ್ತೈತಿ, ಒರ್ಸ್ಗೊಲ್ಲಾಕ್‌ ಕಷ್ಟ ಆಗ್ತೈತಿ ಅನ್ನೋದು ಈ ಚಾಣಕ್ಯನಿಗೆ ಹೊಳೆದಿಲ್ಲೇನ್‌. ಎಂಥಾ ದಡ್ಡ ಅದಾನಲೇ ಅಂವಾ’ ಎಂದೆ.

‘ಅವನ್ನೆಲ್ಲ ಮರೀಬೇಕಂತ ಇಲ್ಲಿಗೆ ಬಂದ್ರ, ನೀವಿಬ್ರು ಗಾಯಕ್ಕ ಉಪ್‌ ಸವರಾಕತ್ತೀರಿ’ ಎಂದು ಬೈದುಕೊಳ್ಳುತ್ತಲೆ ಬಾಟ್ಲಿ ಎತ್ತಿ ಗಟಗಟ ಕುಡ್ದು ಒಂದೇ ಏಟಿಗೆ ಖಾಲಿ ಮಾಡಿದ.

‘ಎಲ್ಲಾ ಪಾರ್ಟ್ಯಾಗ್‌ ಬಂಡುಕೋರರು (ರೆಬೆಲ್ಸ್) ಅದಾರ. ಖರೇನ ಗಂಡಸಾಗಿದ್ರ ಗೆದ್ದು ತೋರಿಸ್ಲಿ ಅಂತ ಶ್ರೀರಾಮುಲುಗೆ ಮೊಣಕಾಲ್ಮುರಿನ ತಿಪ್ಪೇಸ್ವಾಮಿ ಸವಾಲ್‌ ಹಾಕ್ಯಾನ್‌ ನೋಡಿ ಇಲ್ಲ’ ಎಂದು ದತ್ಯಾ ಮಾತಿನ ದಿಕ್ಕು ಬದಲಿಸಿದ.

‘ಲೇ ಅವೆಲ್ಲ ಬಂಡಲ್‌ ರೆಬೆಲ್ಸ್‌. ಮಂಡ್ಯದ ‘ರೆಬೆಲ್‌ ಸ್ಟಾರ್‌s’ನ ನಿಜವಾದ ಗಂಡ್ಸು ಕಣಲೆ ಗಂಡ್ಸು. ಟಿಕೆಟ್‌ ಬೇಕಂತ್‌ ಅರ್ಜಿ ಹಾಕಿಲ್ಲ. ಬಿ ಫಾರಂ ಬೇಕೇ ಬೇಕು ಅಂತ ರೆಸಾರ್ಟ್‌ಗೂ ಹೋಗಿಲ್ಲ. ಆದ್ರೂ ಮನೆ ಬಾಗಿಲಿಗೇ ಬಿ ಫಾರಂ ಕಳಸ್ತೀವಿ ಅಂತಾರ. ಅದೂ ಕಾಂಗ್ರೆಸ್‌ನ್ಯಾಗ್‌. ಮನ್ಯಾಗ್‌ ಕುಂತನs ಪಾರ್ಟಿ ಮುಖಂಡರನ್ನ ಕುಣ್ಸಾಕತ್ತಾನಲ್ಲ. ನಾಗರಹಾವು ಚಿತ್ರದಾಗ್‌, ‘ಏಯ್‌ ಬುಲ್‌ ಬುಲ್‌, ಮಾತಾಡಕಿಲ್ವಾ’ ಅಂದ್ಹಂಗ್‌, ಪ್ರಚಾರ್‌ದಾಗ್‌ ವೋಟ್ ಹಾಕಾಕಿಲ್ವಾ ಅಂತ ಅಂದ್ರ, ಮಂಡ್ಯಾದವರು ಮಂಡೆ ಬಿಸಿ ಮಾಡ್ಕೊಂಡ್‌ ಮನ್ಯಾಗ್‌s ಕುಂದ್ರುಹಂಗ್‌ ಮಾಡ್ತಾರೇನ್‌ ನೋಡ್ಬೇಕ್‌’ ಎಂದೆ.

‘ಕೂಸು ಹುಟ್ಟು ಮೊದ್ಲ ಕುಲಾಯಿ ಹೊಲಿದಂತೆ, ಇನ್ನೂ ಆರಿಸಿಯೇ ಬಂದಿಲ್ಲದಿದ್ರೂ, ಶ್ರೀರಾಮುಲುನ ಮುಂದಿನ ಉಪಮುಖ್ಯಮಂತ್ರಿ ಮಾಡಾಕ್‌ ಗಣಿ ಧಣಿ ಟೊಂಕಕಟ್ಟಿ ನಿಂತಾನ. ಜಿ.ಟಿ. ದೇವೇಗೌಡನ ಜಿಲ್ಲಾ ಉಸ್ತುವಾರಿ ಮಂತ್ರಿ ಮಾಡ್ತೀನಿ ಅಂತ ಕುಮಾರಣ್ಣ ಹೇಳ್ಕೊಂಡ್‌ ತಿರಗಾಕತ್ತಾನಲ್ಲ. ಸಿದ್ರಾಮಣ್ಣನs ಮುಂದಿನ ಸಿಎಂ ಆಗ್ತಾನ ಏನ್‌, ಇಲ್ಲ’ ಎಂದು ತೊದಲುತ್ತಲೇ ದತ್ಯಾ ಪ್ರಶ್ನಿಸಿದ.

‘ಎಲ್ಲಾ ಚಾಮುಂಡೇಶ್ವರಿ ಮತ್ತs ಬಾದಾಮಿ ಬನಶಂಕರಿ ದೇವಿ ಆಶೀರ್ವಾದ ಮ್ಯಾಲ್‌ ಅವಲಂಬಿಸಿದೆ ನೋಡ್‌’ ಎಂದೆ.

ನಶೆದಾಗಿನ ಹುಕಿವೊಳ್ಗ ಪ್ರಭ್ಯಾ, ‘ಏನ್‌ ಹುಡ್ಗೀರೊ, ಇದ್ಯಾಕ್‌ ಹಿಂಗ್‌ ಆಡ್ತೀರೊ...’ ಹಾಡಿನ ಧಾಟಿವೊಳ್ಗ .. ‘ಏನ್‌ ರಾಜಕಾರಣಿಗಳೊ ಇದ್ಯಾಕ್‌ಹಿಂಗ್‌ ಬಾಯಿ ಬಡ್ಕೊಳ್ತಾರೊ, ಟಿಕೆಟ್‌ ಟಿಕೆಟ್ ಟಿಕೆಟ್‌ ಅಂತ ಗಳಗಳನೆ ಕಣ್ಣೀರ್ ಹಾಕ್ತಾರೊ’... ಎಂದು ಹಾಡಲು ಶುರುಹಚ್ಚಿಕೊಂಡ.

ಅವ್ನ ನಶೆ ಸದ್ಯಕ್ಕ ಇಳಿಯುವ ಸೂಚ್ನಾ ಕಾಣ್ಸಲಾರದ್ದಕ್ಕ, ‘ನಾವು ಹೋಗೋಣ ನಡೀಪಾ. ಎಲ್ಲಿ ಹೋಗಿ ಬಿದ್ದೀರಿ ಅಂತ ಹೆಂಡ್ತಿ ಫೋನ್‌ ಮಾಡಿ ಬೈಯ್ಯಾಕತ್ತಾಳ. ಲೇಟ್ ಆದ್ರ ಬಾಗ್ಲಾನ ತಗಿದಿಲ್ಲ ನಡಿಯೋ ಮಾರಾಯಾ’ ಅಂದ ದತ್ಯಾ. ನಂದೂ ಅದs ಕತಿ ಅದs ಏಳ್‌ ಅಂತ ಮನಸ್ನ್ಯಾಗ್ ಅಂದಕೊಂಡು, ‘ಆಯ್ತು ನಡೀಪಾ’ ಎಂದೆ, ಪ್ರಭ್ಯಾನ ಹಾಡಿನ ಹಿಮ್ಮೇಳದಾಗ ಇಬ್ರೂ ಬಾರ್‌ನಿಂದ ಹೊರಬಿದ್ದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT