ಕೊಪ್ಪಳ: ಈ ಇಬ್ಬರೂ ಅಕ್ಕತಂಗಿಯರಿಗೆ ಒಬ್ಬನೇ ಗಂಡ. ಪತಿಯು ಅನಾರೋ ಗ್ಯದಿಂದ ಅಕಾಲ ಮರಣ ಹೊಂದಿದ ನಂತರ ಮನೆ ನಡೆಸುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಸಹೋದರಿಯರಿಗೆ ನೆರವಾಗಿದ್ದು ನರೇಗಾ ಕೂಲಿ ಯೋಜನೆ.
ಒಂದೇ ಮನೆಯಲ್ಲಿ ಇದ್ದರೂ ಇಬ್ಬರ ಮಧ್ಯೆ ಮನಸ್ತಾಪ ಇದ್ದಿರಲಿಲ್ಲ.ತಾಲ್ಲೂಕಿನ ಹಿರೇಸಿಂದೋಗಿ ಗ್ರಾ.ಪಂ ವ್ಯಾಪ್ತಿಯ ಹಂದ್ರಾಳ ಗ್ರಾಮದ ಗಂಗಮ್ಮ ಮತ್ತು ರೇಣುಕಾ ಅವರೇ ಪರಸ್ಪರ ಹೊಂದಾಣಿಕೆಯಿಂದಲೇ ಜೀವನ ಸಾಗಿಸುತ್ತಿರುವ ಶ್ರಮಿಕ ಸಹೋದರಿಯರಾಗಿದ್ದಾರೆ.
ಪತಿ ಶಂಕ್ರಪ್ಪನ ಮೊದಲ ಪತ್ನಿಯಾದ ಗಂಗಮ್ಮಳಿಗೆ ಮಕ್ಕಳಾಗದ ಹಿನ್ನೆಲೆಯಲ್ಲಿ ಅವರೇ ಖುದ್ದು ನಿಂತು ಸಹೋದರಿ ರೇಣುಕಾ ಅವರನ್ನು ತಮ್ಮ ಪತಿಗೆ ಎರಡನೇ ಮದುವೆ ಮಾಡಿಸಿದ್ದಾರೆ. ರೇಣುಕಾ ಅವರಿಗೆ ಮೂವರು ಪುತ್ರರು ಇದ್ದಾರೆ. ಇವರಿಬ್ಬರ ಜೀವನಕ್ಕೆ ಆಧಾರವಾಗಿದ್ದ ಶಂಕ್ರಪ್ಪ ಕಳೆದ ವರ್ಷ ಅನಾರೋಗ್ಯದಿಂದ ಮರಣ ಹೊಂದಿದರು. ಇಬ್ಬರೂ ಅಕ್ಕ-ತಂಗಿಯರು ಈಗಲೂ ಗ್ರಾಮದಲ್ಲಿ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದಾರೆ.
ಯಜಮಾನನಿಲ್ಲದ ಕುಟುಂಬದ ನೊಗವನ್ನು ತಾವೇ ಹೊತ್ತಿದ್ದಾರೆ. ತಮ್ಮ ಸ್ವಂತ ಜಮೀನುಗಳಲ್ಲೇ ಕೃಷಿ ಕೆಲಸ ಮಾಡುವ ಇವರು, ಕೃಷಿ ಕೆಲಸಗಳು ಇಲ್ಲದ ಸಮಯದಲ್ಲಿ ಉದ್ಯೋಗ ಖಾತ್ರಿಯಡಿ ಕೆಲಸಕ್ಕೆ ಬರುತ್ತಾರೆ. ಕಳೆದ ವರ್ಷದಿಂದ ನರೇಗಾದಡಿ ಕೆಲಸ ಮಾಡುವ ಮೂಲಕ ಸ್ವಾವಲಂಬಿ ಜೀವನ ಸಾಗಿಸುವ ಮೂಲಕ ಗ್ರಾಮದಲ್ಲಿ ಇತರರಿಗೆ ಮಾದರಿಯಾಗಿದ್ದಾರೆ.
ಅಂಗವಿಕಲ ಮಹಿಳೆಗೆ ಆಸರೆ
ಕನಕಗಿರಿ: ಇಂದಿನ ದಿನಮಾನದಲ್ಲಿ ದೈಹಿಕವಾಗಿ ಶಕ್ತಿಶಾಲಿ ಯಾಗಿದ್ದರೂ ಸಾಕಷ್ಟು ಜನ ದುಡಿದು ತಿನ್ನದೆ ಸೋಮಾರಿ ತನದಿಂದ ಕಾಲ ಕಳೆಯುತ್ತಾರೆ. ಇಲ್ಲೊಬ್ಬ ಗೃಹಿಣಿ ತನ್ನ ಎರಡು ಕೈಗಳ ಬೆರಳುಗಳು ಸರಿಯಾಗಿಲ್ಲದಿದ್ದರೂ ಕೂಲಿ ಮಾಡಿ ಜೀವನ ಸಾಗಿಸುವುದರ ಜತೆಗೆ ಆ ಹಣದಲ್ಲಿ ಮಗಳ ಮದುವೆ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.
ತಾಲ್ಲೂಕಿನ ಹಿರೇಡಂಕನಲ್ ಗ್ರಾಮದ ಗಂಗಮ್ಮ ಅವರ ಎರಡು ಕೈಗಳ ಬೆರಳುಗಳು ಹುಟ್ಟಿನಿಂದಲೇ ವಿಕಲತೆಯನ್ನು ಹೊಂದಿವೆ. ಬೆರಳು ಸರಿಯಾಗಿರದ ಹಿನ್ನೆಲೆಯಲ್ಲಿ ಅವರು ಕೆಲಸ ಮಾಡಲು ಅಸಮರ್ಥಳು ಎಂದು ಗ್ರಾಮಸ್ಥರು ಭತ್ತದ ಸಸಿ ನಾಟಿ, ಭತ್ತ ಕಟಾವ್ ಸೇರಿದಂತೆ ಇತರೆ ಕೂಲಿ ಕೆಲಸಗಳಿಗೆ ಕರೆಯುತ್ತಿರಲಿಲ್ಲ.
ಒಂದು ಗಂಡು, ಒಂದು ಹೆಣ್ಣು ಮಗು ಹೊಂದಿದ್ದ ಗಂಗಮ್ಮ ಕುಟುಂಬಕ್ಕೆ ಆಸರೆಯಾಗಿದ್ದ ಪತಿಯನ್ನು ಕಳೆದುಕೊಂಡಿದ್ದಾರೆ. ಈ ಕಡೆಗೆ ಗಂಡ ಇಲ್ಲ, ದುಡಿದು ತಿನ್ನಲು ಕೂಲಿಯೂ ಇಲ್ಲದೆ ಕಂಗಾಲಾಗಿದ್ದಾಗ ನೆರವಿಗೆ ಬಂದಿದ್ದು ನರೇಗಾ ಯೋಜನೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಊರಿನ ಜನ ಕೂಲಿ ಕೆಲಸಕ್ಕೆ ಹೋಗುವುದನ್ನು ಗಮನಿಸಿದ್ದ ಗಂಗಮ್ಮ ಗ್ರಾ.ಪಂ ಕಚೇರಿಗೆ ಭೇಟಿ ನೀಡಿ ತನ್ನ ಅಳಲು ತೋಡಿಕೊಂಡಿದ್ದಾರೆ.
ಗಂಗಮ್ಮಳ ಸಮಸ್ಯೆ ಆಲಿಸಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನರೇಗಾ ಯೋಜನೆಯ ಉದ್ಯೋಗ ಖಾತರಿಯ ಚೀಟಿ ಮಾಡಿಸಿ ಕೆಲಸ ನೀಡಿದ್ದಾರೆ. 2017ರಿಂದ ನರೇಗಾ ಯೋಜನೆಯ ಉದ್ಯೋಗ ಖಾತರಿ ಕಾರ್ಡ್ ಪಡೆದ ಗಂಗಮ್ಮ ಕೂಲಿಕಾರರಿಗೆ ನೀರು ಕೊಡುವುದು ಹಾಗೂ ಕೆರೆಯಲ್ಲಿ ತುಂಬಿದ ಹೂಳನ್ನು ಬೇರೆಡೆಗೆ ಸಾಗಿಸುವ ಕೆಲಸ ಮಾಡುತ್ತಿದ್ದಾರೆ.
ವರ್ಷದಲ್ಲಿ 70 ದಿನಗಳ ಕಾಲ ಕೆಲಸ ಮಾಡಿದ್ದು, ಈ ಹಣದಲ್ಲಿ ಮಕ್ಕಳನ್ನು ಸಾಕುವುದರ ಜತೆಗೆ ಇಂತಿಷ್ಟು ಹಣ ಬ್ಯಾಂಕ್ ಖಾತೆಯಲ್ಲಿ ಉಳಿಸಿಕೊಳ್ಳುತ್ತಾ ಮಗಳ ಮದುವೆ ಮಾಡಿದ್ದಾಳೆ ಎಂದು ಸ್ಥಳೀಯರು ತಿಳಿಸುತ್ತಾರೆ. ಗಂಗಮ್ಮಳ ಮತ್ತೊಬ್ಬ ಮಗ 7ನೇ ತರಗತಿ ಕಲಿಯುತ್ತಿದ್ದು ಆತನ ಶಿಕ್ಷಣಕ್ಕೂ ಖಾತರಿ ಯೋಜನೆ ಆಸರೆಯಾಗಿದೆ.
ಗ್ರಾಮೀಣ ಜನರು ವಿಶೇಷವಾಗಿ ಅಂಗವಿಕಲರ ಜೀವನಕ್ಕೆ ನರೇಗಾ ಯೋಜನೆ ಸಹಾಯಕವಾಗಿದ್ದು, 18 ವರ್ಷ ಮೇಲ್ಪಟ್ಟವರು ಆಯಾ ಗ್ರಾ.ಪಂ. ಕಚೇರಿಗಳಲ್ಲಿ ಜಾಬ್ ಕಾರ್ಡ್ ಮಾಡಿಸಿಕೊಂಡು ಕೂಲಿ ಕೆಲಸ ಮಾಡಬೇಕೆಂದು ತಾಲ್ಲೂಕು ಪಂಚಾಯಿತಿಯ ಐಇಸಿ ಚಂದ್ರಶೇಖರ ಹಿರೇಮಠ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.