ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಂಚನೆಯಾದರೆ ಧ್ವನಿ ಎತ್ತಿ’

ಗ್ರಾಹಕರ ದಿನಾಚರಣೆ: ಶಾಸಕ ಅಮರೇಗೌಡ ಹೇಳಿಕೆ
Last Updated 28 ಡಿಸೆಂಬರ್ 2019, 10:26 IST
ಅಕ್ಷರ ಗಾತ್ರ

ಕುಷ್ಟಗಿ: ಗ್ರಾಹಕರ ಹಿತರಕ್ಷಣೆಗಾಗಿ ಜಾರಿಗೆ ತಂದಿರುವ ಕಾನೂನನ್ನು ಪಾಲಿಸಿದರೆ ಮಾತ್ರ ವ್ಯವಸ್ಥೆ ಸುಧಾರಿಸಲು ಸಾಧ್ಯ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

'ರಾಷ್ಟ್ರೀಯ ಗ್ರಾಹಕರ ದಿನಾಚರಣೆ' ನಿಮಿತ್ತ ಇಲ್ಲಿಯ ಬಸವಭವನದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸದಾಗಿ ಜಾರಿಗೆ ಬರಲಿರುವ ಗ್ರಾಹಕರ ರಕ್ಷಣಾ ಕಾಯ್ದೆ-2019 ರಲ್ಲಿ ಬಹಳಷ್ಟು ಮಹತ್ವದ ಅಂಶಗಳನ್ನು ಅಳವಡಿಸುವ ಮೂಲಕ ಗ್ರಾಹಕರ ಹಕ್ಕುಗಳಿಗೆ ಹೆಚ್ಚಿನ ಬಲ ನೀಡಲಾಗಿದೆ ಎಂದರು.

ದೈನಂದಿನ ವ್ಯಾಪಾರ, ವಹಿವಾಟಿನಲ್ಲಿ ಮೋಸ, ವಂಚನೆ ಕಂಡುಬರುತ್ತಿದ್ದು ಅದರ ವಿರುದ್ಧ ಜನರು ಧ್ವನಿ ಎತ್ತಿ ನ್ಯಾಯ ದೊರಕಿಸಿಕೊಳ್ಳಬೇಕು. ಅದೇ ರೀತಿ ಗ್ರಾಹಕರು ಹಕ್ಕುಗಳ ರಕ್ಷಣೆ ಸಂಬಂಧ ಉತ್ಪಾದಕರು, ಮಾರಾಟಗಾರರು ಮತ್ತು ನೌಕರರು ತಮ್ಮ ತಮ್ಮ ವೃತ್ತಿಪರ ನಿಷ್ಠೆ ಹೊಂದಬೇಕು ಎಂದು ಹೇಳಿದರು.

ಜಿಲ್ಲಾ ಗ್ರಾಹಕ ವೇದಿಕೆ ಸದಸ್ಯ ರವಿರಾಜ ಕುಲಕರ್ಣಿ ಮಾತನಾಡಿ, ಗ್ರಾಹಕರ ಹಕ್ಕುಗಳ ಕಾಯ್ದೆ ಜಾರಿಗೆ ಬಂದು ಮೂರು ದಶಕಗಳು ಕಳೆದರೂ ನಿರೀಕ್ಷಿತ ರೀತಿಯಲ್ಲಿ ಜನರಿಗೆ ಫಲ ದೊರೆತಿಲ್ಲ. ಮೋಸಕ್ಕೆ ಒಳಗಾದರೂ ಗ್ರಾಹಕರು ಅದನ್ನು
ಹೇಳಿಕೊಳ್ಳುತ್ತಿಲ್ಲ. ಅದಕ್ಕೆ ಗ್ರಾಹಕರಲ್ಲಿ ಅರಿವಿನ ಕೊರತೆ ಇರುವುದು ಕಾರಣ ಎಂದರು.

ಹೊಸಕಾಯ್ದೆ ಅನ್ವಯ ಗ್ರಾಹಕರ ವೇದಿಕೆಯು ಆಯೋಗ ಎಂದು ಬದಲಾಗಲಿದೆ. ನೊಂದವರು ₹1 ಕೋಟಿ ವರೆಗೂ ಪರಿಹಾರ ಪಡೆಯುವುದಕ್ಕೆ ಅವಕಾಶವಿದೆ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ವಕೀಲೆ ಸಾವಿತ್ರಿ ಮುಜುಮದಾರ, ಈ ಹಿಂದೆ ಕೇವಲ ನಷ್ಟ ಪರಿಹಾರ ಮತ್ತು ದಂಡಕ್ಕೆ ಮಾತ್ರ ಅವಕಾಶ ಇತ್ತು. ಬದಲಾದ ಕಾನೂನಿನಲ್ಲಿ ಸರಕು ಉತ್ಪಾದಕ ಮತ್ತು ಮಾರಾಟಗಾರರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದ್ದು, ಕಾಯ್ದೆ ಉಲ್ಲಂಘಿಸುವವರಿಗೆ ಹೆಚ್ಚಿನ ಪ್ರಮಾಣದ ದಂಡದ ಜೊತೆಗೆ ಗರಿಷ್ಠ ಅವಧಿಯ ಜೈಲು ಶಿಕ್ಷೆಯನ್ನೂ ವಿಧಿಸಲು ಅವಕಾಶ ಇದೆ ಎಂದು ಅವರು ಹೇಳಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ನಾರಾಯಣರಡ್ಡಿ ಕನಕರಡ್ಡಿ ಮಾತನಾಡಿ, ಜನರಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮ ನಡೆಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಎ.ಜಿ.ಮಾಲ್ದರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಸ್ಯೆ ಸುಜಾತ ಅಕ್ಕಸಾಲಿ, ತಹಶೀಲ್ದಾರ್‌ ಎಂ.ಸಿದ್ದೇಶ್‌, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎ.ಎ.ಮೊರಬ್, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ವರ್ತಕ ರಹೀಂಸಾಬ್ ಮುಲ್ಲಾ, ಗನಿಸಾಬ್ ಮಾಲ್ದರ್ ಇದ್ದರು.

ಶರಣಪ್ಪ ಹುಡೇದ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT