ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವವೃಂದಾವನ: ಮಹಿಮೋತ್ಸವ, ಆರಾಧನೆಗೆ ನಿರ್ಬಂಧ | ಜುಲೈ 21ರವರೆಗೆ ನಿಷೇಧಾಜ್ಞೆ

Last Updated 12 ಜುಲೈ 2022, 14:27 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ನವವೃಂದಾವನ ಗಡ್ಡೆಯಲ್ಲಿ ಉತ್ತರಾದಿಮಠದವರು ರಘುವರ್ಯ ತೀರ್ಥರ ಮಹಿಮೋತ್ಸವ ಮತ್ತು ರಾಯರಮಠದವರು ಜಯತೀರ್ಥರ ಆರಾಧನೆ ನಡೆಸುವ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಿ ತಹಶೀಲ್ದಾರ್‌ ಯು.ನಾಗರಾಜ್ ಆದೇಶ ಹೊರಡಿಸಿದ್ದಾರೆ. ಜುಲೈ 21ರವರೆಗೆ ಆ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಿದ್ದಾರೆ.

ಕೆಲದಿನಗಳ ಹಿಂದೆ ನವವೃಂದಾನದ ಗಡ್ಡೆಯಲ್ಲಿರುವ ಒಂದೇ ಬೃಂದಾವನಕ್ಕೆ ಉತ್ತರಾದಿಮಠದವರು ರಘುವರ್ಯ ತೀರ್ಥರೆಂದು, ರಾಯರಮಠದವರು ಜಯತೀರ್ಥರೆಂದು ಕರೆದಿದ್ದರಿಂದ ವಿವಾದ ಸೃಷ್ಟಿಯಾಗಿತ್ತು. ಈಗ ಎರಡು ಮಠಗಳ ನಡುವೆ ವಾದ-ವಿವಾದಗಳು ಆರಂಭವಾಗಿವೆ.

ರಾಯರ ಮಠದವರು ಜುಲೈ 17 ರಿಂದ 19ರ ವರೆಗೆ ಆರಾಧನೆ, ಉತ್ತಾರಾದಿಮಠದವರು ಜುಲೈ 14 ರಿಂದ 20ರವರೆಗೆ ಮಹಿಮೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಎರಡೂ ಏಕಕಾಲಕ್ಕೆ ಸಮಾರಂಭ ಆಯೋಜಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ವಿವಾದ ಕಾವು ಪಡೆಯುತ್ತಿದ್ದಂತೆ ಕೆಲ ದಿನಗಳ ಹಿಂದೆ ಜಿಲ್ಲಾಡಳಿತ ಎರಡೂ ಮಠದ ಭಕ್ತರ ಸಭೆ ಕರೆದು, ರಾಜಿ ಸಂಧಾನ ನಡೆಸಲು ಮುಂದಾದರೂ ಸಭೆಯಲ್ಲಿ ನಿರ್ಣಯಕ್ಕೆ ಬಂದಿರಲಿಲ್ಲ. ಪೂಜೆಗೆ ತಮಗೇ ಅವಕಾಶ ನೀಡಬೇಕು ಎಂದು ಎರಡೂ ಮಠದ ಭಕ್ತರು ವಾದಿಸಿದ್ದರಿಂದ ಜಿಲ್ಲಾಧಿಕಾರಿ ಎರಡು ಮಠಗಳ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿ, ದಿನನಿತ್ಯದ ಪೂಜೆಗೆ ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಿದ್ದರು.

ಈಗ ಉತ್ತರಾದಿಮಠ ಮತ್ತು ರಾಯರಮಠದ ಭಕ್ತರು ಪೂಜೆಗೆ ಸಿದ್ಧತೆ ನಡೆಸಿದ್ದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಗಂಗಾವತಿ ತಹಶೀಲ್ದಾರ್‌ ಯು.ನಾಗರಾಜ್ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ನವವೃಂದಾವನ ಗಡ್ಡೆಯಲ್ಲಿ ನಾಲ್ಕಕ್ಕಿಂತ ಹೆಚ್ಚು ಜನ ಸೇರಬಾರದು. ಮೆರವಣಿಗೆ, ಗುಂಪು ಸೇರುವುದು, ಮುಷ್ಕರವನ್ನು ನಡೆಸುವುದು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT