ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಮುರ್ಲಾಪುರ: ಶುದ್ಧ ನೀರಿಗಾಗಿ ನಿತ್ಯ ಪರದಾಟ

ಹಾಳಾದ ನೀರಿನ ಘಟಕ, ಶುದ್ಧ ನೀರಿಗಾಗಿ ನಿತ್ಯ ಪರದಾಟ
Last Updated 12 ಏಪ್ರಿಲ್ 2022, 5:03 IST
ಅಕ್ಷರ ಗಾತ್ರ

ಅಳವಂಡಿ: ಸಮೀಪದ ಮುರ್ಲಾಪುರ ಗ್ರಾಮ ಮೂಲ ಸೌಕರ್ಯ ಕೊರತೆ ಎದುರಿಸುತ್ತಿದ್ದು, ಕಚ್ಚಾ ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಂದ ಗ್ರಾಮಸ್ಥರು ತೊಂದರೆ ಎದುರಿಸುತ್ತಿದ್ದಾರೆ.

ಮುರ್ಲಾಪುರ ಗ್ರಾಮ ಜಿಲ್ಲೆಯ ಗಡಿ ಭಾಗದಲ್ಲಿದ್ದು, ಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಳಪಡುತ್ತದೆ. ಸುಮಾರು 900 ಜನಸಂಖ್ಯೆ ಹೊಂದಿರುವ ಈ ಊರು, ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿದೆ. ಆದರೆ ಇಲ್ಲಿ ಸಮಸ್ಯೆಗೆ ಮಾತ್ರ ಯಾವುದೇ ಕೊರತೆ ಇಲ್ಲದಂತಾಗಿದೆ!

ನಾಲ್ಕು ವರ್ಷಗಳ ಹಿಂದೆ ಶುದ್ಧ ನೀರಿನ ಘಟಕ ಮಂಜೂರಾಗಿದೆ. ಆದರೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭದಿಂದ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಾ ಬಂದಿದೆ. ಕೆಟ್ಟು ಹೋಗಿರುವ ಶುದ್ಧ ನೀರಿನ ಘಟಕ ಇಂದಿಗೂ ದುರಸ್ತಿಯಾಗದೆ ಪಾಳು ಬಿದ್ದಿದೆ. ಹೀಗಾಗಿ ಇಲ್ಲಿನ ಜನ ನೀರಿಗೇ 4-5 ಕಿ.ಮೀ ಚಲಿಸಿ ಕೃಷಿಹೊಂಡ , ಕೆರೆ , ಬೇರೆ ಗ್ರಾಮ ಅಥವಾ ನಗರಕ್ಕೆ ಹೋಗಿ ಶುದ್ಧ ಕುಡಿಯುವ ನೀರು ತರುವಂತಾಗಿದೆ. ದಿನ ಬಳಕೆಯ ನೀರು ಒಂದು ದಿನ ಬಂದರೆ ಒಂದು ದಿನ ಬರುವುದಿಲ್ಲ.

ಬೇಸಿಗೆ ಕಾಲಿಡುತ್ತಿದ್ದಂತೆ ನೀರಿನ ಸಮಸ್ಯೆ ಸಾಮಾನ್ಯವಾಗಿದೆ. ಇಲ್ಲಿನ ಜನ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಗ್ರಾಮದಿಂದ ಮುಂಡರಗಿ ನಗರಕ್ಕೆ - ಕವಲೂರ ಗ್ರಾಮಕ್ಕೆ ತೆರಳುವ ರಸ್ತೆ ಕಿತ್ತು ಹೋಗಿ ಹೋಗಿದೆ. ಇದರಿಂದ ವಾಹನ ಸವಾರರು ಕೈಯಲ್ಲಿ ಜೀವಹಿಡಿದು ಸಂಚರಿಸುವ ಪರಿಸ್ಥಿತಿ ಇದೆ. ಈ ರಸ್ತೆಯಲ್ಲಿ ಹಲವಾರು ಅಪಘಾತಗಳು ನಡೆದಿವೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸರಿಯಾದ ರಸ್ತೆ ಇಲ್ಲ. ತಗ್ಗು, ದಿಣ್ಣೆಗಳಿವೆ. ತೆಗ್ಗು ಪ್ರದೇಶದಲ್ಲಿ ನೀರು ನಿಂತು ಗಬ್ಬು ನಾರುತ್ತಿದೆ. ಸೊಳ್ಳೆಗಳ ಕಾಟ ಜಾಸ್ತಿಯಾಗಿ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ. ಚರಂಡಿ ವ್ಯವಸ್ಥೆ ಇದ್ದರೂ ಅದರಲ್ಲಿ ಹುಳು ತುಂಬಿದೆ. ಅದನ್ನು ತೆಗೆಯಲು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಮಾಡಿದೆ.

‘ಗ್ರಾಮದಲ್ಲಿ ಪ್ರಸ್ತುತ ಜಲ ಜೀವನ್‌ ಮಿಷನ್ ಯೋಜನೆ ಕಾಮಗಾರಿಯಿಂದ ರಸ್ತೆ ಅಗೆಯಲಾಗಿದೆ. ಬೇಗನೆ ಕಾಮಗಾರಿ ಮುಗಿಸುತ್ತಿಲ್ಲ. ಇದರಿಂದ ನಮಗೆ ತೊಂದರೆ ಆಗುತ್ತಿದೆ’ ಎಂದು ಜನರು ’ಪ್ರಜಾವಾಣಿ‘ಗೆ ತಿಳಿಸಿದರು.

‘ರಸ್ತೆ ಸರಿ ಇಲ್ಲದಿರುವುದರಿಂದ ಗ್ರಾಮಕ್ಕೆ ಆಟೊ, ಬಸ್ ಬರುತ್ತಿಲ್ಲ. ಕುಡಿಯುವ ನೀರಿನ ಘಟಕ ಈಗ ಪಾಳುಬಿದ್ದಿದೆ. ಚರಂಡಿಯಲ್ಲಿ ಹೂಳು ತುಂಬಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾರೂ ಇತ್ತ ತಿರುಗಿ ನೋಡುತ್ತಿಲ್ಲ‘ ಎಂದು ಗ್ರಾಮಸ್ಥರೊಬ್ಬರು ದೂರಿದರು.

ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಗ್ರಾಮದ ಅಭಿವೃದ್ಧಿ ಕಡೆಗೆ ಅಧಿಕಾರಿಗಳು ಗಮನ ಹರಿಸಬೇಕು ಎಂಬುದು ಗ್ರಾಮಸ್ಥರ ಹಕ್ಕೊತ್ತಾಯವಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸಲಾಗುವುದು. ರಸ್ತೆ ಹಾಗೂ ಚರಂಡಿ ಸ್ವಚ್ಛತೆ ಬಗ್ಗೆ ಪಿಡಿಒ ಅವರಿಗೆ ತಿಳಿಸಿ, ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸೂಚಿಸಲಾಗುವುದು.

- ಮಲ್ಲಿಕಾರ್ಜುನ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಕೊಪ್ಪಳ

ಚರಂಡಿ ವ್ಯವಸ್ಥೆ ಸ್ವಚ್ಛತೆ ಸೇರಿದಂತೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು.

- ತೋಟಪ್ಪ ಶಿಂಟ್ರ, ಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT