ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಗತ್ಯ ಒತ್ತಡಕ್ಕೆ ಒಳಗಾಗುವುದು ಬೇಡ: ಸಚಿವ ಬಿ.ಸಿ.ಪಾಟೀಲ ಮನವಿ

ಕೋವಿಡ್ ನಿಯಂತ್ರಣ, ನಿರ್ವಹಣೆ ಸಭೆ
Last Updated 7 ಮೇ 2021, 5:09 IST
ಅಕ್ಷರ ಗಾತ್ರ

ಕೊಪ್ಪಳ: ‘ರಾಜ್ಯದಾದ್ಯಂತ ಕೋವಿಡ್ ಎರಡನೇ ಅಲೆ ಗಂಭೀರ ಪರಿಣಾಮವನ್ನು ಬೀರುತ್ತಿದ್ದು, ತೀವ್ರವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ಕೋವಿಡ್ ರೋಗಿಯ ಚಿಕಿತ್ಸೆಯನ್ನು ಅಗತ್ಯ ವೈದ್ಯರೇ ನಿರ್ಧರಿಸುತ್ತಾರೆ. ರೋಗಿಗಳು ಹಾಗೂ ಕುಟುಂಬಸ್ಥರು ಅನಗತ್ಯ ಒತ್ತಡಕ್ಕೆ ಒಳಗಾಗಿಆಮ್ಲಜನಕ ಹಾಗೂ ವೆಂಟಿಲೇಟರ್‌ಗಳಿಗೆ ಬೇಡಿಕೆ ಇಡದೆ ಧೈರ್ಯವಾಗಿ ವೈದ್ಯರಿಂದ ಚಿಕಿತ್ಸೆ ಪಡೆಯಿರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳಗುರುವಾರ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆ ಕುರಿತಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೋವಿಡ್-19 ಲಕ್ಷಣವುಳ್ಳ ಅಥವಾ ಎಲ್ಲ ಕೋವಿಡ್ ಸೋಂಕಿತರಿಗೆಆಮ್ಲಜನಕ ಅಥವಾ ವೆಂಟಿಲೇಟರ್‌ಗಳ ಅಗತ್ಯವಿರುವುದಿಲ್ಲ. ರೋಗಿಯ ಚಿಕಿತ್ಸೆಗೆ ಏನು ಬೇಕು ಎಂಬುವುದನ್ನು ವೈದ್ಯರು ನಿರ್ಧರಿಸಬೇಕು, ರೋಗಿಗಳಲ್ಲ. ವೈದ್ಯರು ಸತತವಾಗಿ ರೋಗಿಯ ಮೇಲೆ ನಿಗಾ ವಹಿಸುತ್ತಾರೆ’ ಎಂದರು.

ರೋಗಿಯ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆ ನೀಡುತ್ತಾರೆ. ಅದಕ್ಕೂ ಮೊದಲೇ ರೋಗಿಗಳು ಅನಗತ್ಯವಾಗಿ ಭಯಪಟ್ಟು ಆಮ್ಲಜನಕ ಹಾಗೂ ವೆಂಟಿಲೇಟರ್‌ಗಳ ಬೇಡಿಕೆ ಇಡುವುದರಿಂದ ಅತೀ ಅಗತ್ಯವಾಗಿರುವ ರೋಗಿಗೆ ಆ ಸೌಲಭ್ಯ ಸಿಗದೇ ಇರಬಹುದು. ಆದ್ದರಿಂದ ಕಡಿಮೆ ತೀವ್ರತೆ ಇರುವ, ಗಂಭೀರ ಸಮಸ್ಯೆ ಇರದ ರೋಗಿಗಳು ಮನೋಸ್ಥೈರ್ಯವನ್ನು ಹೆಚ್ಚಿಸಿಕೊಂಡು ಚಿಕಿತ್ಸೆಯಿಂದ ಬೇಗ ಗುಣಮುಖವಾಗಬಹುದು ಎಂದು ಹೇಳಿದರು.

ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾದಲ್ಲಿ ಮುಂಜಾಗ್ರತಾ ಕ್ರಮವಾಗಿ ಇನ್ನೂ ಹೆಚ್ಚಿನ ಸಂಖ್ಯೆಯಆಮ್ಲಜನಕ ಬೆಡ್‌ಗಳನ್ನು ಸಿದ್ಧಗೊಳಿಸಿ. ನಗರದ ಗವಿಸಿದ್ಧೇಶ್ವರ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನಲ್ಲಿ 100, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 50 ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಅಗತ್ಯಾನುಸಾರ ಆಮ್ಲಜನಕಬೆಡ್‌ಗಳನ್ನು ನಿರ್ಮಿಸಿ. ಒಂದು ವಾರದಲ್ಲಿ ಈ ಕೆಲಸ ಪೂರ್ಣಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್‌ ಸುರಳ್ಕರ್‌ ಅವರಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾ.ಪಂ. ಅಧ್ಯಕ್ಷರು, ಸದಸ್ಯರಿಗೆ ಪತ್ರ ಬರೆದು, ಗ್ರಾಮಕ್ಕೆ ಮರಳಿದವರನ್ನು ಗುರುತಿಸಿ ಅವರಿಗೆ ಕೋವಿಡ್ ಪರೀಕ್ಷೆಗೊಳಪಡಿಸುವಂತೆ, ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಲು ಹಾಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಮೂರ್ತಿ ಅವರಿಗೆ ಸೂಚನೆ ನೀಡಿದರು.

ಮುಂಜಾಗ್ರತೆಯಾಗಿ 140 ಬೆಡ್‌ಗಳನ್ನು ಒಂದು ವಾರದಲ್ಲಿಯೇ ಹೆಚ್ಚು ಮಾಡಲಾಗುತ್ತದೆ. ಮೂರನೇ ಅಲೆಗೆ ನಾವು ಸಿದ್ಧವಾಗಬೇಕಾದ ಪರಿಸ್ಥಿತಿ ಬಂದಿದೆ. ಜಿಲ್ಲೆಗೆ ಹೊಸ ತರದ ಎಲ್ಲ ವೈದ್ಯಕೀಯ ಆಧುನಿಕ ಸೌಲಭ್ಯಗಳಿರುವ 9 ಆಂಬುಲೆನ್ಸ್‌ಗಳನ್ನು ತರಿಸಲಾಗುತ್ತಿದೆ. ಜಿಲ್ಲೆಯ ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾದಲ್ಲಿ ಸಿಟಿಸ್ಕ್ಯಾನ್‌ ಮಷಿನ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ್, ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯಿತಿ ಕೆಡಿಪಿ ಸದಸ್ಯ ಅಮರೇಶ ಕರಡಿ,ಎಸ್‌ಪಿ ಟಿ.ಶ್ರೀಧರ್,ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಸಹಾಯಕ ಆಯುಕ್ತ ನಾರಾಯಣರೆಡ್ಡಿ ಕನಕರೆಡ್ಡಿ, ಡಿಎಚ್‌ಒ ಡಾ.ಲಿಂಗರಾಜು.ಟಿ, ಕಿಮ್ಸ್ ನಿರ್ದೇಶಕ ಡಾ.ವೈಜನಾಥ ಇಟಗಿ ಇದ್ದರು.

ಕೋವಿಡ್ ಸೆಂಟರ್‌ಗೆ ಸಚಿವ ಭೇಟಿ, ಪರಿಶೀಲನೆ: ಜಿಲ್ಲಾ ಆಸ್ಪತ್ರೆಯಲ್ಲಿರುವ ಕೋವಿಡ್ ಸೆಂಟರ್‌ಗೆ ಗುರುವಾರ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಭೇಟಿ ನೀಡಿ, ಕೋವಿಡ್ ರೋಗಿಗಳ ಆರೋಗ್ಯ ವಿಚಾರಿಸಿ, ನೀಡಲಾಗುತ್ತಿರುವ ಚಿಕಿತ್ಸೆ ಹಾಗೂ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

ಪಿಪಿಇ ಕಿಟ್ ಧರಿಸಿ ಕೋವಿಡ್ ರೋಗಿಗಳಿರುವ ವಾರ್ಡ್ ಒಳಗೆ ತೆರಳಿದ ಸಚಿವರು ಕೋವಿಡ್ ರೋಗಿಗಳಿಗೆ ನೀಡಲಾಗುತ್ತಿರುವ ಉಪಹಾರ, ಊಟ ಹಾಗೂ ಔಷಧಿ ಸೇರಿದಂತೆ ಅವರಿಗೆ ನೀಡಲಾಗುತ್ತಿರುವ ವಿವಿಧ ಸೌಲಭ್ಯಗಳ ಕುರಿತು ರೋಗಿಗಳಿಂದಲೇ ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಐಸಿಯು ವಾರ್ಡ್‌ಗಳಲ್ಲಿರುವ ಕೋವಿಡ್ ರೋಗಿಗಳ ಜತೆ ಮಾತನಾಡಿದ್ದೇವೆ. ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕೋವಿಡ್ ಸೆಂಟರ್‌ನಲ್ಲಿ ಒಟ್ಟು 106 ಜನ ರೋಗಿಗಳಿದ್ದು, ಉತ್ತಮವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗೆ ಕೋವಿಡ್ ರೋಗಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಜನರು ಆರಂಭದಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳದಿರುವುದೇ ಕಾರಣವಾಗಿದೆ ಎಂದರು.

ಜನರು ಕೋವಿಡ್ ಲಕ್ಷಣಗಳು ಕಂಡುಬಂದ ತಕ್ಷಣವೇ ಪರೀಕ್ಷೆ ಮಾಡಿಸಿ, ಸೂಕ್ತ ರೀತಿಯ ಚಿಕಿತ್ಸೆಯನ್ನು ಪಡೆಯಬೇಕು. ಅಂದಾಗ ಮಾತ್ರ ಸಾವನ್ನಪ್ಪುವವರ ಪ್ರಮಾಣವನ್ನು ನಿಯಂತ್ರಿಸಬಹುದು ಎಂದರು.

ಬೆಂಗಳೂರಿನ ಬಳಿಕ ಹಳ್ಳಿಗಳಲ್ಲಿಯೂ ಸಹ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ 35 ಬೆಡ್‌ಗಳು ಹೆಚ್ಚಿವೆ. ಅಲ್ಲದೇ ಬೆಡ್‌ಗಳನ್ನು ಹೆಚ್ಚಿಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳುತ್ತೇವೆ. ನಮ್ಮ ಜಿಲ್ಲೆಯಲ್ಲಿ ಈವರೆಗೆ ಆಮ್ಲಜನಕ ಮತ್ತು ಬೆಡ್‌ಗಳ ಕೊರತೆ ಎದುರಾಗಿಲ್ಲ. ಮುಂದೆ ಯಾವುದೇ ರೀತಿಯ ಕೊರತೆ ಆಗದಂತೆಯೂ ಕ್ರಮ ವಹಿಸುತ್ತೇವೆ ಎಂದರು.

ಸಾರ್ವಜನಿಕರು ಇದುವರೆಗೂ ಏನೂ ಆಗಿಲ್ಲ ಎನ್ನುವ ಭಾವನೆ ಹೊಂದಿದ್ದು, ಅದನ್ನು ಬಿಟ್ಟು ವಾಸ್ತವವನ್ನು ಅರಿತುಕೊಳ್ಳಬೇಕು. ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಕೋವಿಡ್ ಪ್ರಕರಣ ಕಡಿಮೆ ಆಗದ್ದಿದ್ದರೆ ಲಾಕ್ ಡೌನ್ ಮುಂದುವರಿಸುವುದು ಅನಿವಾರ್ಯವಾಗುತ್ತದೆ ಎಂದರು.

ಸಚಿವರ ಜತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಕೆಡಿಪಿ ಸದಸ್ಯ ಅಮರೇಶ ಕರಡಿ ಅವರೂ ಕೂಡಾ ಪಿಪಿಇ ಕಿಟ್ ಧರಿಸಿ, ಕೋವಿಡ್ ಸೆಂಟರ್‌ನ ಒಳಗೆ ಪ್ರವೇಶಿಸಿದರು.

ಕೋವಿಡ್ ಸೆಂಟರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯಿಂದ ಅವರಿಗೆ ಆಗುತ್ತಿರುವ ಸಮಸ್ಯೆ ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಸಂಸದ ಸಂಗಣ್ಣ ಕರಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಲಿಂಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT