ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಜಿಲ್ಲೆಯಲ್ಲಿ ಸಾಂಕ್ರಾಮಿಕದ ಭೀತಿ; ಸ್ವಚ್ಛತೆಗೆ ಯಾವಾಗ ವೇಗ?

ಜಿಲ್ಲಾ ಕೇಂದ್ರ, ಗ್ರಾಮೀಣ ಭಾಗದಲ್ಲಿ ಕಾಣದ ಶುಚಿತ್ವ, ದಾಖಲೆಗಷ್ಟೇ ಸೀಮಿತವಾದ ಜಾಗೃತಿ ಕಾರ್ಯಕ್ರಮಗಳು
Last Updated 4 ಜುಲೈ 2022, 11:06 IST
ಅಕ್ಷರ ಗಾತ್ರ

ಕೊಪ್ಪಳ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಸಮರ್ಪಕವಾಗಿ ಕಾಪಾಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು. ನೀರು ಸಂಗ್ರಹಿಸಿದ ಟ್ಯಾಂಕ್‌ಗಳನ್ನು ಬ್ಲೀಚಿಂಗ್‌ ಪೌಡರ್‌ನಿಂದ ಸ್ವಚ್ಛಗೊಳಿಸಬೇಕು.

ಮಳೆಗಾಲದ ಸಮಯದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮುಂಜಾಗ್ರತಾ ಕ್ರಮಗಳು ಇವು.

ಆದರೆ, ವಾಸ್ತವದಲ್ಲಿ ಜಿಲ್ಲೆಯಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಎಲ್ಲೆಂದರಲ್ಲಿ ಚರಂಡಿ ನೀರು ನಿಲ್ಲುವುದು, ದುರ್ನಾತ, ಸೊಳ್ಳೆಗಳ ಹಾವಳಿ, ಸ್ವಚ್ಛತೆಗೆ ಆದ್ಯತೆ ನೀಡದೇ ಇರುವ ಸ್ಥಿತಿ ಕಾಣುತ್ತಿದೆ. ಅನೇಕ ಕಡೆ ಸುರಕ್ಷತೆಗಾಗಿ ಬ್ಲೀಚಿಂಗ್‌ ಪೌಡರ್‌ ಕೂಡ ಸಿಂಪಡಣೆ ಮಾಡಿಲ್ಲ.

ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿಯೂ ಸ್ವಚ್ಛತೆ ಮರೀಚಿಕೆಯಾಗಿದೆ. ಇತ್ತೀಚೆಗೆ ನಗರಸಭೆ ವ್ಯಾಪ್ತಿಯ ಒಂದನೇ ವಾರ್ಡ್‌ಗೆ ‘ಪ್ರಜಾವಾಣಿ‘ ಪ್ರತಿನಿಧಿ ತೆರಳಿದ್ದಾಗ ಅಲ್ಲಿನ ನಿವಾಸಿಯೊಬ್ಬರು, ’ಹೆಂಗಾದ್ರೂ ಮಾಡಿ ನಮ್ಮ ಮನೆ ಬಾಜು ಇರೊ ಚರಂಡಿ ಸ್ವಚ್ಛ ಮಾಡಿಸಿಕೊಡ್ರಿ. ದಿನಾ ಅದರ ವಾಸನಿ, ಕೊಳಕು ನೋಡಿ ಜೀವ ರೋಸಿ ಹೋಗೈತ್ರಿ‘ ಎಂದು ಮನವಿ ಮಾಡಿಕೊಂಡರು. ಇದು ಇಲ್ಲಿನ ಸ್ವಚ್ಛತೆ ಅವ್ಯವಸ್ಥೆಗೆ ಸಾಕ್ಷಿಯಂತಿದೆ.

ಜಿಲ್ಲೆಯ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಮಳೆಗಾಲದ ಸಮಯದಲ್ಲಿ ಒಂದೇ ಕಡೆ ನೀರು ಸಂಗ್ರಹವಾಗುವುದರಿಂದ ಸಾಂಕ್ರಾಮಿಕ ರೋಗಗಳಾದ ಕಾಲರಾ, ಕರಳು ಬೇನೆ, ವಾಂತಿ ಬೇಧಿ, ಅತಿಸಾರ ಹಾಗೂ ಕಾಮಾಲೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಎಚ್ಚರಿಕಾ ಕ್ರಮ ಕೈಗೊಳ್ಳಬೇಕಾದ ಇಲಾಖೆ, ಸ್ಥಳೀಯ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ತಮ್ಮ ಕೆಲಸ ಮಾಡಿಲ್ಲ.

ಲಕ್ಷಾಂತರ ವೆಚ್ಚ

ಕುಷ್ಟಗಿಯಲ್ಲಿ ನೈರ್ಮಲ್ಯ ಹೆಚ್ಚಿಸುವ ಸಲುವಾಗಿಯೇ ಇಲ್ಲಿಯ ಪುರಸಭೆಯಲ್ಲಿ ಸಿಬ್ಬಂದಿ ಇದ್ದಾರೆ. ರಾಸಾಯನಿಕಗಳ ಖರೀದಿಗೆ ಪ್ರತಿ ವರ್ಷ ಲಕ್ಷಗಟ್ಟಲೇ ಹಣ ಖರ್ಚಾಗುತ್ತಿದೆ. ಆದರೆ ಮಾಲಿನ್ಯ ನಿಯಂತ್ರಣ ಮೀರಿ ಪಟ್ಟಣದ ಬಹುತೇಕ ವಾರ್ಡುಗಳು ಗಬ್ಬೆದ್ದಿರುವುದು ಸ್ಥಳೀಯ ಸಂಸ್ಥೆಯ ನಿರ್ಲಕ್ಷ್ಯಕ್ಕೆ ನಿದರ್ಶನದಂತಿವೆ.

ಪುರಸಭೆಗೆ ಹೊಂದಿಕೊಂಡೇ ಇರುವ ಸರ್ಕಾರಿ ಪ್ರವಾಸಿ ಮಂದಿರದ ಪಕ್ಕದ ರಸ್ತೆಯಲ್ಲಿನ ಸ್ಥಿತಿ ಕಣ್ಣಿಗೆ ರಾಚುವಂತಿದೆ. ಅಂಗಡಿಯವರೆಲ್ಲ ಕಸ ತಂದು ಬಿಸಾಡುವುದು ಇಲ್ಲೇ. ಬಸ್‌ ನಿಲ್ದಾಣದ ಬಳಿ ಜೆಸ್ಕಾಂ ಕಚೇರಿ ಆವರಣ ಗೋಡೆಯ ದಕ್ಷಿಣ ಭಾಗದಲ್ಲಿ ಲಾರಿಗಟ್ಟಲೇ ತ್ಯಾಜ್ಯ ಇದ್ದು ಜನ ಅಲ್ಲೇ ಮಲ ಮೂತ್ರ ವಿಸರ್ಜಿಸುತ್ತಾರೆ. ಇದನ್ನು ಗಮನಿಸಿದರೆ ಇಲ್ಲಿಯೂ ಸ್ಥಳೀಯ ಸಂಸ್ಥೆ ಅಸ್ತಿತ್ವದಲ್ಲಿದೆಯೆ? ಎಂಬ ಅನುಮಾನ ಬರುತ್ತಿದೆ ಎನ್ನುತ್ತಾರೆ ಪಟ್ಟಣದ ಪರಶುರಾಮಪ್ಪ ಕಲಭಾವಿ ಇತರರು.

ಚರಂಡಿಯಲ್ಲಿ ಹೂಳು

ಅಳವಂಡಿ ಸಮೀಪದ ಬೋಚನಹಳ್ಳಿ ಗ್ರಾಮದ 2ನೇ ವಾರ್ಡಿನಲ್ಲಿ ಚರಂಡಿಗಳು ಸಮರ್ಪಕ ಸ್ವಚ್ಛತೆ ಇಲ್ಲ. ಇದ್ದರೂ ಅವುಗಳಲ್ಲಿ ಹೂಳು ತುಂಬಿಕೊಂಡಿದೆ. ಇದರಿಂದ ರಸ್ತೆಗಳು ಕೆಸರು ಗದ್ದೆಯಾಗಿವೆ. ಈ ಕುರಿತು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ ಮಾಡಿದರು.

ದಾಖಲೆಗೆ ಸೀಮಿತ!

ಯಲಬುರ್ಗಾ ತಾಲ್ಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಹುತೇಕ ಗ್ರಾಮದಲ್ಲಿ ಸ್ವಚ್ಛತೆಗೆ ಕಾಳಜಿ ತೋರಿಸುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸಿ ಸಾರ್ವಜನಿಕ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಆರೋಗ್ಯ ಇಲಾಖೆ ಹಾಗೂ ಪಂಚಾಯಿತಿ ಅಧಿಕಾರಿಗಳು ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಪ್ರಯತ್ನಿಸುತ್ತಿರುವುದು ಸಾಮಾನ್ಯವಾಗಿದೆ. ಆದರೆ ಬಹುತೇಕ ಯೋಜನೆಗಳು ದಾಖಲೀಕರಣ ಹಾಗೂ ಪ್ರಚಾರಕ್ಕೆ ಮಾತ್ರ ಸೀಮಿತವಾಗಿವೆ.

ಘನ ತ್ಯಾಜ್ಯ ವಿಲೇವಾರಿ ಘಟಕ ಬೇವೂರು ಹಾಗೂ ಮುಧೋಳದಲ್ಲಿದ್ದು, ಮುರಡಿ ಹಾಗೂ ಹಿರೇವಂಕಲಕುಂಟಾ ಪ್ರದೇಶದಲ್ಲಿ ಹೆಚ್ಚುವರಿ ಘಟಕಗಳು ನಿರ್ಮಾಣಗೊಳ್ಳುತ್ತಿವೆ. ಯಲಬುರ್ಗಾ ಪಟ್ಟಣ ಪಂಚಾಯಿತಿ ಪ್ರತಿ ಮನೆಗೆ ಹಸಿ ಮತ್ತು ಒಣ ಕಸ ಸಂಗ್ರಹಕ್ಕಾಗಿ ಎರಡು ಬಕೆಟ್‌ಗಳನ್ನು ವಿತರಿಸುತ್ತಿದ್ದಾರೆ. ಸಂಬಂಧಿಸಿದ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಂತಹ ಕಾರ್ಯಕ್ರಮಗಳು ಸಾರ್ವಜನಿಕ ಸ್ಥಳಗಳ ಬದಲಿಗೆ ಶಾಲೆಗಳಿಗಷ್ಟೇ ಸೀಮಿತವಾಗಿವೆ.

ಮುನ್ನೆಚ್ಚರಿಕೆ

ತಾವರಗೇರಾ ಪಟ್ಟಣ ಪಂಚಾಯಿತಿಯಿಂದ ನೀರು ನಿಲ್ಲದಂತೆ ಮರಂ (ಮಣ್ಣು) ಹಾಕಿ ಎಚ್ಚರಿಕೆ ವಹಿಸಲಾಗಿದೆ. ಬ್ಲೀಚಿಂಗ್‍ ಪೌಡರ್ ಸಿಂಪರಣೆ ಮಾಡಿದ್ದು, ನಾಡ ಕಾರ್ಯಾಲಯದ ಆವರಣದಲ್ಲಿ ನೀರು ನಿಲ್ಲದಂತೆ ಮರಂ ಹಾಕಲಾಗಿದೆ. ಪೌರಕಾರ್ಮಿಕರು ಸಹ ದಿನನಿತ್ಯ ಸ್ವಚ್ಚತೆ ಕಾರ್ಯ ಮಾಡುತ್ತಿದ್ದಾರೆ ಎಂದು ಪಟ್ಟಣ ಪಂಚಾಯ್ತಿ ಆರೋಗ್ಯ ನಿರೀಕ್ಷಕ ಪ್ರಾಣೇಶ ಬಳ್ಳಾರಿ ತಿಳಿಸಿದರು.

ವಿಲೇವಾರಿ ಕೊರತೆ

ಗಂಗಾವತಿ ನಗರದ ಪ್ರಮುಖ ವೃತ್ತ, ವಾರ್ಡು, ಖಾಲಿ ನಿವೇಶನಗಳಲ್ಲಿ ರಾಶಿಗಟ್ಟಲೇ ಕಸ ಸಂಗ್ರಹವಾಗಿ ದುರ್ನಾತ ಬೀರಿ, ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಆತಂಕವಾಗಿದೆ.

ನಗರದ 35 ವಾರ್ಡುಗಳಿಂದ ನಿತ್ಯ 45 ಟನ್‌ಗೂ ಹೆಚ್ಚು ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ನಗರಸಭೆ ಸಿಬ್ಬಂದಿ ಕೊರತೆಯೂ ಇದಕ್ಕೆ ಕಾರಣ.

ಈಗಾಗಲೇ ಮುಂಗಾರು ಆರಂಭವಾಗಿದ್ದು, ರಸ್ತೆ ಪಕ್ಕ, ಚರಂಡಿ ಪಕ್ಕ ಸಾರ್ವಜನಿಕರು ಹಾಕಿದ ಕಸ ಮಳೆಗೆ ಚರಂಡಿಯಲ್ಲಿ ತುಂಬಿ ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆ ಹರಿದು ಜನರ ಸಂಚಾರಕ್ಕೆ ಅಡಚಣೆ ಆಗುತ್ತಿದೆ.

ಮುಚ್ಚದ ತೆಗ್ಗು ಗುಂಡಿಗಳು

ಕನಕಗಿರಿ ಪಟ್ಟಣ ಪಂಚಾಯಿತಿ ಅಸ್ತಿತ್ವಕ್ಕೆ ಬಂದು ಆರು ವರ್ಷ ಕಳೆದಿವೆ. ಸಿ.ಸಿ ರಸ್ತೆ, ಚರಂಡಿ, ಇತರೆ ಕಾಮಗಾರಿಗಳಿಗೆ ಕೋಟಿಗಟ್ಟಲೇ ಅನುದಾನ ವೆಚ್ಚ ಮಾಡಲಾಗಿದೆ. 17 ವಾರ್ಡ್‌ಗಳ ಪೈಕಿ ಹಲವಾರು ಬೀದಿಗಳಲ್ಲಿ ಕಾಮಗಾರಿ ಹಲವೆಡೆ ತೆಗ್ಗು ಗುಂಡಿಗಳು ಹಾಗೆ ಇವೆ.

‘ಜನರ ಸಹಭಾಗಿತ್ವವೂ ಮುಖ್ಯ’

ಕಾರಟಗಿ/ಕುಕನೂರು: ಕಾರಟಗಿ ಪಟ್ಟಣದ ಸ್ವಚ್ಛತೆಯ ಹೊಣೆ ಹೊತ್ತ ಪುರಸಭೆ ಸಿಬ್ಬಂದಿ, ವಾಹನಗಳ ವ್ಯವಸ್ಥೆ ಮಾಡಿಕೊಂಡು ಸರದಿಯಲ್ಲಿ ಕಸ ಗೂಡಿಸುವಿಕೆ, ವಿಲೇವಾರಿ ಮುಖ್ಯವಾಗಿ ಚರಂಡಿಗಳ ಸ್ವಚ್ಛತೆಯತ್ತ ಸಾಕಷ್ಟು ಗಮನ ಹರಿಸಿದರೂ ಸ್ವಚ್ಛತೆ ಮರೀಚಿಕೆಯಾಗಿದೆ.

‘ನಮ್ಮ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಪಟ್ಟಣದ ಸ್ವಚ್ಛತೆಗೆ ಇದಷ್ಟೇ ಸಾಕಾಗುವುದಿಲ್ಲ. ಜನರ ಸಹಭಾಗಿತ್ವವೂ ಮುಖ್ಯ‘ ಎಂದು ಕಾರಟಗಿ ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಳುತ್ತಾರೆ.

ಕುಕನೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಬ್ಲೀಚಿಂಗ್ ಪೌಡರ್ ಸಿಂಪಡಿಸುತ್ತಾರೆ. ಆರೋಗ್ಯ ಇಲಾಖೆ ಸೊಳ್ಳೆಗಳನ್ನ ಹತೋಟಿಯಲ್ಲಿಡಲು ಲಾರ್ವಾ ಎಂಬ ಕಾರ್ಯಕ್ರಮದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಸುನೀಲ್ ಹೇಳಿದರು.

ಧಾರ್ಮಿಕ ತಾಣಗಳಲ್ಲಿ ಸ್ವಚ್ಛತೆ ಮರೀಚಿಕೆ

ಮುನಿರಾಬಾದ್: ಹುಲಿಗಮ್ಮ ದೇವಿ ದೇವಸ್ಥಾನ ಹತ್ತಿರ ಹರಿಯುತ್ತಿರುವ ಕೊಳಚೆ ನೀರಿನ ಕಾಲುವೆ ಪರಿಸರ ಹಲವು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಿದೆ.

ಹುಣ್ಣಿಮೆ, ಮಂಗಳವಾರ ಹಾಗೂ ಶುಕ್ರವಾರ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಬರುತ್ತಾರೆ. ಹೊರಭಾಗದಿಂದ ಬರುವ ಭಕ್ತರು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವುದು ವಾಡಿಕೆ. ಗ್ರಾಮದಿಂದ ಕೆಲವು ಚರಂಡಿಗಳ ನೀರು ನೇರವಾಗಿ ಕಾಲುವೆ ಮೂಲಕ ನದಿಗೆ ಹರಿಯುತ್ತಿದೆ. ಈಚೆಗೆ ನದಿ ದಡದಲ್ಲಿ ತ್ಯಾಜ್ಯ ಮತ್ತು ಕಸ ಸುರಿದ ಪರಿಣಾಮ ಪರಿಸರವೆಲ್ಲ ಮಾಲಿನ್ಯವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹಬ್ಬುವ ಭೀತಿ ಇದೆ. ಮುಂಗಾರು ಚುರುಕಾಗಿದ್ದು, ಮಳೆ ನೀರು ಮತ್ತೆ ಚರಂಡಿ ಸೇರಿ ಅದು ನದಿಗೆ ಹರಿದು ಬರುತ್ತದೆ ಎಂದು ದೇವಸ್ಥಾನಕ್ಕೆ ನಿಯಮಿತವಾಗಿ ಬರುವ ಭಕ್ತ ಹಿಟ್ನಾಳ ಗ್ರಾಮದ ಸಜ್ಜನ್ ಕೊಟ್ರೇಶ.

‘ನದಿ ದಡದಲ್ಲಿ ಹಾಕಿದ ತ್ಯಾಜ್ಯ ಮತ್ತು ಕಸವನ್ನು ಡ್ರೋನ್ ಕ್ಯಾಮೆರಾ ಮೂಲಕ ಸಮೀಕ್ಷೆ ನಡೆಸಲಾಗಿದೆ. ಅದನ್ನು ವಿಲೇವಾರಿ ಮಾಡಲು ನಿರ್ಧಾರ ಕೈಗೊಳ್ಳಲಾಗುವುದು‘ ಎಂದುಪಿಡಿಒ ಪರಮೇಶ್ವರಯ್ಯ ತಿಳಿಸಿದರು.

ಈಗಿನ ಸ್ವಚ್ಛತೆಯ ಕೆಲಸ ಇನ್ನಷ್ಟು ವೇಗ ಪಡೆಯಬೇಕಿದೆ. ಅಧಿಕಾರಿ ದಕ್ಷರಾದರೂ ಎಲ್ಲದರತ್ತ ಚಿತ್ತ ಹರಿಸುವುದು ಕಷ್ಟಕರ. ಪೌರ ಕಾರ್ಮಿಕರೊಂದಿಗೆ ಜನರೂ ತಮ್ಮ ಜವಾಬ್ದಾರಿ ಅರಿತರೆ ಮಾತ್ರ ಸುಂದರ ವಾತಾವರಣ ನಿರ್ಮಿಸಲು ಸಾಧ್ಯ.
ವೀರಪ್ರಕಾಶ, 6ನೇ ವಾರ್ಡ್‌ ನಿವಾಸಿ, ಕಾರಟಗಿ

ಪುರಸಭೆ ಜನರಿಂದ ಪ್ರತಿ ವರ್ಷ ಶುಲ್ಕ ಸಂಗ್ರಹಿಸುತ್ತಿದ್ದರೂ ಅಗತ್ಯ ಸೌಲಭ್ಯಗಳಿಲ್ಲ. ನೈರ್ಮಲ್ಯ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಮಳೆಗಾಲದಲ್ಲಿ ಡೆಂಗಿ, ಮಲೇರಿಯಾ ಇತರೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
-ಅಶೋಕ ಮಡಿವಾಳರ
ಕುಷ್ಟಗಿ ನಿವಾಸಿ

ಯಲಬುರ್ಗಾ ಪಟ್ಟಣದಲ್ಲಿನ ಮೂರ್ನಾಲ್ಕು ವಾರ್ಡ್‍ಗಳನ್ನು ಕೊಳೆಗೇರಿ ಎಂದು ಗುರುತಿಸಲಾಗಿದೆ. ಅವುಗಳ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ಸ್ವಚ್ಛತೆ, ಉತ್ತಮ ಚರಂಡಿ, ರಸ್ತೆ ಹಾಗೂ ಇತರೆ ಸೌಲಭ್ಯಗಳು ಮರೀಚಿಕೆಯಾಗಿದೆ
-ಹನಮಂತಪ್ಪ ಭಜಂತ್ರಿ, 4ನೇ ವಾರ್ಡ್‌ ನಿವಾಸಿ

ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು, ಸ್ಥಳೀಯರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ. ಚರಂಡಿಗಳು ಹೂಳು ತುಂಬಿ ದುರ್ವಾಸನೆ ನಾರುತ್ತಿವೆ.
-ಕೋಟೇಶ ಯಲ್ಲಣ್ಣನವರ
ಯುವಕ, ಅಳವಂಡಿ

ಸಾಂಕ್ರಾಮಿಕ ರೋಗ ತಡೆಗಾಗಿ ಬ್ಲಿಚಿಂಗ್ ಪೌಡರ್ ಸಿಂಪರಣೆ ಮಾಡಲು ಸಿದ್ದತೆ ಕೈಗೊಳ್ಳಲಾಗಿದೆ. ತೆಗ್ಗುಗುಂಡಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲಾಗುತ್ತದೆ
-ದತ್ತಾತ್ರೇಯ ಹೆಗಡೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಸಾಂಕ್ರಾಮಿಕ ರೋಗ ತಡೆಗಾಗಿ ಬ್ಲಿಚಿಂಗ್ ಪೌಡರ್ ಸಿಂಪರಣೆ ಮಾಡಲು ಸಿದ್ದತೆ ಕೈಗೊಳ್ಳಲಾಗಿದೆ. ತೆಗ್ಗುಗುಂಡಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲಾಗುತ್ತದೆ
-ದತ್ತಾತ್ರೇಯ ಹೆಗಡೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಳೆಗಾಲದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಹಿಸಬೇಕಾದ ಎಚ್ಚರಿಕೆ ಬಗ್ಗೆ ಮುಂಜಾಗ್ರತಾ ಕ್ರಮಗಳ ಮಾಹಿತಿಯನ್ನು ಎಲ್ಲರಿಗೂ ನೀಡಲಾಗಿದೆ
-ಅಲಕನಂದಾ ಕೆ. ಮಳಗಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

ಪಟ್ಟಣ ಪಂಚಾಯಿತಿ ಆಡಳಿತದಲ್ಲಿ ಅಧಿಕಾರಿಗಳು ಮಾತ್ರ ಇದ್ದು, ಜನಪ್ರತಿನಿಧಿಗಳು ಆಡಳಿತ ವ್ಯಾಪ್ತಿಯಲ್ಲಿ ಬಂದಿಲ್ಲ. ಸ್ಥಳೀಯ ಆಡಳಿತ ಸೊಳ್ಳೆಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು ಶ್ಲಾಘನೀಯ
-ಚಂದ್ರಶೇಖರ ಗುರಿಕಾರ. ಸ್ಥಳೀಯ ನಿವಾಸಿ ತಾವರಗೇರಾ

***

–ವರದಿ ಪ್ರಮೋದ‌

ಪೂರಕ ಮಾಹಿತಿ: ಕೆ. ಮಲ್ಲಿಕಾರ್ಜುನ, ನಾರಾಯಣರಾವ್‌ ಕುಲಕರ್ಣಿ, ಉಮಾಶಂಕರ ಹಿರೇಮಠ,ಗುರುರಾಜ ಅಂಗಡಿ, ಕೆ. ಶರಣಬಸವ ನವಲಹಳ್ಳಿ, ಮಂಜುನಾಥ ಎಸ್. ಅಂಗಡಿ, ಎನ್‌. ವಿಜಯ, ಜುನಸಾಬ ವಡ್ಡಟ್ಟಿ, ಮೆಹಬೂಬ್‌ಸಾಬ್‌ ಕನಕಗಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT