ಶುಕ್ರವಾರ, ನವೆಂಬರ್ 22, 2019
22 °C
ಕುಷ್ಟಗಿ: ಎಂಜಿನಿಯರ್‌ಗಳು, ಪ್ರತಿನಿಧಿಗಳೇ ಬೇನಾಮಿ ಗುತ್ತಿಗೆದಾರರು

ಚೆಕ್‌ಡ್ಯಾಂ ಹೆಸರಲ್ಲಿ ನರೇಗಾ ಹಣ ಲೂಟಿ

Published:
Updated:
Prajavani

ಕುಷ್ಟಗಿ: ‘ತಾಲ್ಲೂಕಿನಲ್ಲಿ ಅವೈಜ್ಞಾನಿಕ ಮತ್ತು ಕಳಪೆ ರೀತಿಯಲ್ಲಿ ನೂರಾರು ಮಲ್ಟಿ ಆರ್ಚ್ ಚೆಕ್‌ಡ್ಯಾಂಗಳನ್ನು ನಿರ್ಮಿಸುವ ಮೂಲಕ ನರೇಗಾ ಯೋಜನೆಯ ಕೋಟ್ಯಂತರ ಹಣ ಲೂಟಿ ಹೊಡೆಯಲಾಗುತ್ತಿದೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಳೆ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸಿ ಅಂತರ್ಜಲ ಹೆಚ್ಚಿಸುವ ಮಹತ್ವದ ಉದ್ದೇಶದಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗ ತಾಲ್ಲೂಕಿನಲ್ಲಿ ಈ ವರ್ಷ ಅಂದಾಜು ತಲಾ ₹10 ಲಕ್ಷದಂತೆ 24 ಕೋಟಿ ವೆಚ್ಚದಲ್ಲಿ 236 ಇಂಥ ಚೆಕ್‌ಡ್ಯಾಂಗಳನ್ನು ನಿರ್ಮಿಸುತ್ತಿದೆ. 

‘ತಾಲ್ಲೂಕಿನ ಹಿರೇಬನ್ನಿಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿರೇಬನ್ನಿಗೋಳ ಹಾಗೂ ಚಿಕ್ಕನಂದಿಹಾಳ ಸೀಮಾಂತರದಲ್ಲಿ  9 ಸರಣಿ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ನೀರು ಬಾರದ ಸ್ಥಳದಲ್ಲಿ ಇವುಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಪ್ರಯೋಜನವಿಲ್ಲ’ ಎಂದು  ಸುತ್ತಲಿನ ಕೆಲ ಗ್ರಾಮಸ್ಥರು ಆರೋಪಿಸಿದರು.

‘ನೀರು ಬಾರದ, ಸಮತಟ್ಟಾಗಿರುವ ಸ್ಥಳದ ಆಯ್ಕೆ, ಕಳಪೆ ಕಾಮಗಾರಿ, ಸ್ಥಳದಲ್ಲಿಯೇ ದೊರೆಯುವ ಹಳ್ಳದಲ್ಲಿನ ಮಣ್ಣನ್ನೇ ಮರಳು ಎಂದು ಬಳಸುತ್ತಿರುವುದು, ಒಂದು ಅಡಿಯಷ್ಟು ಗುಂಡಿ ತೆಗೆದಿರುವುದು ಮತ್ತು ಕಾಂಕ್ರೀಟ್‌ ಅಡಿಪಾಯ ಇಲ್ಲದೆಯೇ ಡ್ಯಾಂಗಳನ್ನು ನಿರ್ಮಿಸುತ್ತಿರುವುದು, ಕಿರುಬೆರಳುಗಾತ್ರದ ಕಬ್ಬಿಣದ ರಾಡ್‌ಗಳ ಬಳಕೆ ಕೂಲಿಕಾರರ ಬದಲು ಜೆಸಿಬಿ ಯಂತ್ರಗಳ ಬಳಕೆ ಈ ರೀತಿಯ ಅದ್ವಾನಗಳು ಕಣ್ಣಿಗೆ ರಾಚುತ್ತಿದೆ’ ಎಂದು ಗುರುವಾರ ಸ್ಥಳಕ್ಕೆ ತೆರಳಿದ್ದ ಪತ್ರಕರ್ತರಿಗೆ ಯಲಬುರ್ತಿ ಗ್ರಾಮಸ್ಥರು ವಿವರಿಸಿದರು.

ಕೆಲಸ ಮಾಡುವವರು ಯಾರು?: ‘ಜನಪ್ರತಿನಿಧಿಗಳು, ಒಬ್ಬ ಅಧಿಕಾರಿ, ಅಧಿಕಾರಿಯೊಬ್ಬರ ಪುತ್ರ, ಸಂಘಟನೆಯ ಮುಖಂಡರು ಗುತ್ತಿಗೆದಾರರ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿಗೆ ದೂರು ಸಲ್ಲಿಸಿದರೂ ಯಾರೂ ಕ್ರಮಕ್ಕೆ ಮುಂದಾಗಿಲ್ಲ’ ಎಂದು ಫಕೀರಪ್ಪ ಪೂಜಾರ, ರಮೇಶ ಪಾಟೀಲ, ಹೊನ್ನಪ್ಪ ಗೋಗೇರಿ, ಪರಶುರಾಮ ಹರಿಜನ, ಹೊನ್ನಪ್ಪ ಪೂಜಾರ ಇತರರು ಆರೋಪಿಸಿದರು.

ಭೇಟಿ ನೀಡಿಲ್ಲ: ಈ ವಿಷಯ ಕುರಿತಂತೆ ನೀರು ನೈರ್ಮಲ್ಯ ಇಲಾಖೆಯ ಕಿರಿಯ ಎಂಜಿನಿಯರ್‌ (ಪ್ರಭಾರ) ಶಿವಾನಂದ ನಾಗೋಡ ಅವರನ್ನು ಸಂಪರ್ಕಿಸಿದಾಗ, ‘ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 236 ಚೆಕ್‌ಡ್ಯಾಂಗಳ ನಿರ್ಮಿಸಲಾಗುತ್ತಿದೆ, ಸ್ಥಳ ಸೂಕ್ತ ಇದೆಯೆ ಇಲ್ಲವೊ ಎಂಬುದನ್ನು ಎಂಜಿನಿಯರ್‌ ನಿರ್ಧರಿಸುತ್ತಾರೆ. ಹಿರೇಬನ್ನಿಗೋಳ ಪಂಚಾಯಿತಿಯಲ್ಲಿ ನಡೆದಿರುವ ಕಾಮಗಾರಿ ಸ್ಥಳಕ್ಕೆ ನಾನು ಭೇಟಿ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು. ಆದರೆ ಹೆಚ್ಚಿನ ವಿವರ ನೀಡಿಲಲ್ಲ.

ಮಾಹಿತಿ ನೀಡಿದ ನರೇಗಾ ಸಹಾಯಕ ನಿರ್ದೇಶಕ ಅರುಣಕುಮಾರ ದಳವಾಯಿ, ಈ ಬಗ್ಗೆ ತಮಗೆ ಸ್ಪಷ್ಟ ಮಾಹಿತಿ ಇಲ್ಲ, ಸ್ಥಳ ಮತ್ತು ಕಾಮಗಾರಿಯನ್ನು ಜಿಯೊ ಟ್ಯಾಗ್‌ ಮಾಡಬೇಕಾಗುತ್ತದೆ. ಚೆಕ್‌ಡ್ಯಾಂ ನಿರ್ಮಾಣದಿಂದ ಪ್ರಯೋಜನವಾಗುತ್ತದೆಯೊ ಇಲ್ಲವೊ ಎಂಬುದನ್ನು ಎಂಜಿನಿಯರ್‌ ಗಮನಿಸುತ್ತಾರೆ. ಜನರ ದೂರಿನ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.

ಪ್ರತಿಕ್ರಿಯಿಸಿ (+)