ಗುರುವಾರ , ಅಕ್ಟೋಬರ್ 28, 2021
19 °C
ಕಾರ್ಯಾಗಾರದಲ್ಲಿ ಡಯಟ್‌ ನೋಡಲ್‌ ಅಧಿಕಾರಿ ರಾಜೇಂದ್ರ ಬೆಳ್ಳಿ ಅಭಿಮತ

‘ಚಿಗುರು’ ಪುಸ್ತಕ ಅಭ್ಯಾಸಕ್ಕೆ ಪೂರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ‘ಪ್ರೌಢಶಾಲೆ ವಿದ್ಯಾರ್ಥಿಗಳ ವಿಷಯವಾರು ಅಭ್ಯಾಸಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ‘ಚಿಗುರು’ ಘಟಕವಾರು ಅಭ್ಯಾಸ ಹಾಳೆ ಪುಸ್ತಕವನ್ನು ಅರ್ಥಪೂರ್ಣ ರೀತಿಯಲ್ಲಿ ಸಿದ್ಧಪಡಿಸಲಾಗಿದ್ದು ಕಲಿಕೆಗೆ ಪೂರಕವಾಗಲಿದೆ‘ ಎಂದು ಡಯಟ್‌ ನೋಡಲ್‌ ಅಧಿಕಾರಿ ರಾಜೇಂದ್ರ ಬೆಳ್ಳಿ ಹೇಳಿದರು.

ಇಲ್ಲಿಯ ಸರ್ಕಾರಿ ಜ್ಯೂನಿಯರ್ ಕಾಲೇಜನ ಪ್ರೌಢಶಾಲೆ ವಿಭಾಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತಿ, ಡಯಟ್‌ ಕೇಂದ್ರ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಸರ್ಕಾರದ ಮತ್ತು ಅನುದಾನಿತ ಪ್ರೌಢಶಾಲೆಗಳ ಆಂಗ್ಲಭಾಷಾ ಶಿಕ್ಷಕರಿಗೆ ಜ್ಞಾನಜ್ಯೋತಿ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ 'ಚಿಗುರು' ಅಭ್ಯಾಸ ಹಾಳೆ ಪುಸ್ತಕ ಸಿದ್ಧಪಡಿಸುವ ನಿಟ್ಟಿನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಷಯವಾರು ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದಾವಲಸಾಬ್‌ ವಾಲಿಕಾರ ಮಾತನಾಡಿ, ‘ಕಲಿಕಾ ಮಿತ್ರರು ಎಂದು ಕರೆಯಲಾಗುವ 60 ಜನ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಅವರು ಈಗ ಸಿದ್ಧಪಡಿಸಲಾಗಿರುವ ಚಿಗುರು ಪುಸ್ತಕವನ್ನು ಸಂಪೂರ್ಣ ಅಧ್ಯಯನ ಮಾಡಿ ಪ್ರತಿ ಪಾಠದ ಘಟಕವಾರು (ಚಾಪ್ಟರ್) ಅಭ್ಯಾಸ ಹಾಳೆಯನ್ನು ಸಿದ್ಧಪಡಿಸುತ್ತಾರೆ. ತರಬೇತಿಯಲ್ಲಿ ಪಾಲ್ಗೊಂಡಿರುವ ಎಲ್ಲ ವಿಷಯ ಶಿಕ್ಷಕರು ಘಟಕವಾರು ಗುಂಪುಗಳನ್ನು ರಚಿಸಿಕೊಂಡು ಪುಸ್ತಕವನ್ನು ಪುನರ್‌ ಪರಿಶೀಲಿಸಿ, ತಿದ್ದುಪಡಿ ಅಥವಾ ಅನಗತ್ಯ ಸಂಗತಿಗಳನ್ನು ತೆಗೆದುಹಾಕಿ ಪುಸ್ತಕವನ್ನು ಅಂತಿಮಗೊಳಿಸಿದ್ದಾರೆ‘ ಎಂದರು.

ಜಿಲ್ಲಾ ಪಂಚಾಯಿತಿಯಿಂದ ಮುದ್ರಣಗೊಳ್ಳಲಿರುವ ಈ ಪುಸ್ತಕಗಳನ್ನು ಅ.2 ರಂದು ಬಿಡುಗಡೆ ಮಾಡಲಾಗುತ್ತದೆ. ನಂತರ ಅವುಗಳನ್ನು ಜಿಲ್ಲೆಯ ಎಲ್ಲ ಸರ್ಕಾರದ ಮತ್ತು ಅನುದಾನಿತ ಪ್ರೌಢಶಾಲೆಗಳ ಮಕ್ಕಳಿಗೆ ನೀಡಲಾಗುತ್ತದೆ. ಇದರಿಂದ ವಿಷಯವಾರು ಅಭ್ಯಾಸಕ್ಕೆ ಬಹಳಷ್ಟು ಪ್ರಯೋಜನವಾಗಲಿದೆ ಎಂದು ವಿವರಿಸಿದರು.

ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಅಮೀನ್ ಅತ್ತಾರ ಶಿಕ್ಷಕರ ಪ್ರಯತ್ನವನ್ನು ಪ್ರಶಂಸಿಸಿದರು. ಧರ್ಮಕುಮಾರ ಕಂಬಳಿ, ವಿಜಯಕುಮಾರ ಮೈತ್ರಿ, ಸುರೇಶ ಅಂಕೋಲೆ. ನೀಲನಗೌಡ ಹೊಸಗೌಡರ, ಮಲ್ಲಪ್ಪ ಭಂಡಾರಿ, ಈರಣ್ಣ ಪರಸಾಪುರ, ಹುಸೇನಸಾಬ ಕಳಕಾಪುರ, ಶಿಕ್ಷಕ ಫಿರೋಜ್ ನಿರೂಪಿಸಿದರು.

ತಾಲ್ಲೂಕಿನ ಎಲ್ಲ ಪ್ರೌಢಶಾಲೆಗಳ ಆಂಗ್ಲಭಾಷಾ ಶಿಕ್ಷಕರು ಇದ್ದರು. ಪ್ರತಿ ದಿನ ಎರಡು ವಿಷಯಗಳಂತೆ ಮೂರು ದಿನಗಳವರೆಗೆ ನಡೆದ ತರಬೇತಿ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.