ಗುರುವಾರ , ಡಿಸೆಂಬರ್ 3, 2020
18 °C
ಬೆಳೆಹಾನಿ: ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅಸಮಾಧಾನ

ಅಧಿಕಾರಿಗಳಿಂದ ತಪ್ಪು ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಿಂದ ವಿವಿಧ ಬೆಳೆಗಳು ಸಾಕಷ್ಟು ಹಾನಿಗೊಳಗಾಗಿದ್ದರೂ ಅಧಿಕಾರಿಗಳು ಅವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಆರೋಪಿಸಿದರು.

ಮಳೆಯಿಂದ ಹಾನಿಗೊಳಗಾದ ತಾಲ್ಲೂಕಿನ ದೊಣ್ಣೆಗುಡ್ಡ, ಬಿಸನಾಳ, ಕಲಾಲಬಂಡಿ, ತಾವರಗೇರಾ, ಚಳಗೇರಾ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಿಗೆ ಶುಕ್ರವಾರ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಬೆಳೆ ವೀಕ್ಷಿಸಿದ ಅವರು ನಂತರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಮೆಕ್ಕೆಜೋಳ, ಸಜ್ಜೆ, ಶೇಂಗಾ ಇತರೆ ಬೆಳೆಗಳಲ್ಲಿ ಶೇಕಡ 30ರಷ್ಟು ಮಾತ್ರ ಇಳುವರಿ ಬಂದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಬೀಜೋತ್ಪಾದನೆ ಹತ್ತಿ ನಿರೀಕ್ಷೆಗೂ ಮೀರಿ ಹಾಳಾಗಿದೆ. ರೈತರು ಬಿತ್ತನೆ, ಬೆಳೆ ಸಂರಕ್ಷಣೆಗೆ ಮಾಡಿದ ಖರ್ಚು ಕೂಡ ಕೈಗೆ ಬಂದಿಲ್ಲ. ಕುಷ್ಟಗಿ, ಯಲಬುರ್ಗಾ ಮತ್ತು ಕನಕಗಿರಿ ತಾಲ್ಲೂಕುಗಳಲ್ಲಿನ ಪರಿಸ್ಥಿತಿ ಗಂಭೀರವಾಗಿದೆ, ಇತರೆ ತಾಲ್ಲೂಕುಗಳಲ್ಲಿಯೂ ನೀರಾವರಿ ಕ್ಷೇತ್ರ ಹೊರತುಪಡಿಸಿದರೆ ಉಳಿದ ಪ್ರದೇಶದಲ್ಲಿನ ಸ್ಥಿತಿಯೂ ಹೊರತಾಗಿಲ್ಲ. ರೈತರು ಸಂಕಷ್ಟದ ಸ್ಥಿತಿ ಎದುರಿಸುತ್ತಿರುವುದು ಭೇಟಿಯ ಸಂದರ್ಭದಲ್ಲಿ ಕಂಡುಬಂದಿತು ಎಂದರು.

ತಪ್ಪು ಮಾಹಿತಿ: ಮಳೆಯಿಂದ ಆಗಿರುವ ಬೆಳೆ ಹಾನಿಯ ಸಮೀಕ್ಷೆಯನ್ನು ಅಧಿಕಾರಿಗಳು ಸಮರ್ಪಕ ರೀತಿಯಲ್ಲಿ ನಡೆಸಿಲ್ಲ, ಯಾವ ಹೊಲಗಳಿಗೂ ಭೇಟಿ ನೀಡಿಲ್ಲ ಕಾಟಾಚಾರಕ್ಕೆ ಸಮೀಕ್ಷಾ ವರದಿ ಸಲ್ಲಿಸಿದ್ದಾರೆ. ಅಧಿಕಾರಿಗಳ ಪ್ರಕಾರ ಹೊಲದಲ್ಲಿ ಶೇಂಗಾ ಬಳ್ಳಿ ಇದ್ದರೆ ಕಾಯಿ ಇದೆ ಎಂದೆ ಅರ್ಥ ಅದೇ ರೀತಿ ಕಾಳು ಇರಲಿ ಬಿಡಲಿ ಮೆಕ್ಕೆಜೋಳ, ಸಜ್ಜೆ ದಂಟುಗಳು ಇದ್ದರೆ ಅವರ ಪ್ರಕಾರ ಬೆಳೆ ಉತ್ತಮವಾಗಿರುತ್ತದೆ. ಅ.19 ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲರು ನಡೆಸಿ ಪರಿಶೀಲನೆ ಸಭೆಯಲ್ಲಿ ಇದೇ ಮಾದರಿಯಲ್ಲಿ ಮಾಹಿತಿ ನೀಡಿದರು. ಇಡಿ ಜಿಲ್ಲೆಯಲ್ಲಿ ಕೇವಲ 203 ಹೆಕ್ಟರ್‌ ಪ್ರದೇಶದಲ್ಲಿ ಮಾತ್ರ ಹಾನಿಯಾಗಿದೆ ಎಂದು ಹೇಳಿದ್ದ ಅಧಿಕಾರಿಗಳು ಸಭೆಯಲ್ಲಿ ಸಚಿವರು, ಶಾಸಕರು ತರಾಟೆಗೆ ತೆಗೆದುಕೊಂಡ ನಂತರ ಕೆಲವೇ ದಿನಗಳಲ್ಲಿ ಈ ತಾಲ್ಲೂಕಿನಲ್ಲಿ 5000 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಹಾನಿಯಾಗಿದೆ ಎಂದು ವರದಿ ಸಿದ್ಧಪಡಿಸಿದರು. ಇದರ ಮೇಲೆ ಅಧಿಕಾರಿಗಳ ಸಮೀಕ್ಷೆ ಎಷ್ಟು ನಿಖರವಾಗಿದೆ ಎಂಬುದನ್ನು ಊಹಿಸಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒತ್ತಾಯ: ಬೆಳೆ ಹಾನಿಯನ್ನು ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಸಬೇಕು, ಸರ್ಕಾರ ರೈತರನ್ನು ಉಳಿಸುವ ನಿಟ್ಟಿನಲ್ಲಿ ಹೆಚ್ಚಿನ ಪರಿಹಾರ ನೀಡಬೇಕು. ಅದೇ ರೀತಿ ರೈತರ ಸಜ್ಜೆ, ಮೆಕ್ಕೆಜೋಳ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ತಕ್ಷಣ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.