ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಹೆಚ್ಚಳಕ್ಕೆ ಸದಸ್ಯರ ವಿರೋಧ

ಭಾಗ್ಯನಗರ ಪಟ್ಟಣ ಪಂಚಾಯಿತಿ ವಿಶೇಷ ಸಭೆ; ಹೆಚ್ಚು ತೆರಿಗೆ ಸಂಗ್ರಹದಿಂದ ಅಭಿವೃದ್ಧಿ
Last Updated 28 ಡಿಸೆಂಬರ್ 2019, 10:28 IST
ಅಕ್ಷರ ಗಾತ್ರ

ಕೊಪ್ಪಳ: ವಸತಿ, ವಾಣಿಜ್ಯ ಮತ್ತು ಕೈಗಾರಿಕೆ ತೆರಿಗೆಗಳನ್ನು ಹೆಚ್ಚಿಸಬೇಡಿ. ಇದರಿಂದ ಜನರಿಗೆ ತೊಂದರೆ ಆಗುತ್ತದೆ ಎಂದು ಪಟ್ಟಣ ಪಂಚಾಯಿತಿಯ ಸದಸ್ಯರು ಒತ್ತಾಯಿಸಿದರು.

ಸಮೀಪದ ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ಪಟ್ಟಣ ಪಂಚಾಯಿತಿಯ ವಿಶೇಷ ಸಭೆಯಲ್ಲಿ ತೆರಿಗೆ ಹೆಚ್ಚಳದ ಪ್ರಸ್ತಾವವನ್ನು ಅವರು ವಿರೋಧಿಸಿದರು.

ಆಡಳಿತಾಧಿಕಾರಿ ಮಜ್ಜಿಗಿ ಪ್ರತಿಕ್ರಿಯಿಸಿ, ಪುರಸಭೆ ಕಾಯ್ದೆ 1964ರ ಅನ್ವಯ ಎಲ್ಲ ಪಟ್ಟಣ ಪ‍ಂಚಾಯಿತಿಗಳು ಪ್ರತಿ ಮೂರು ವರ್ಷಗಳಿಗೊಮ್ಮೆ ಶೇ 15ರಷ್ಟು ತೆರಿಗೆಯನ್ನು ಹೆಚ್ಚಿಸಬೇಕು. ಆದರೆ ಕಡಿಮೆ ಮಾಡುವಂತಿಲ್ಲ. ಬೇಕಿದ್ದರೆ ಹೆಚ್ಚು ಮಾಡಬಹುದು. ಹಾಗಾಗಿ ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಹೆಚ್ಚು ತೆರಿಗೆ ಸಂಗ್ರಹವಾದರೆ ಅಭಿವೃದ್ಧಿ ಸಾಧ್ಯ ಎಂದರು.

ಪಟ್ಟಣ ಪಂಚಾಯಿತಿ ಆದ ತಕ್ಷಣ ತೆರಿಗೆಯನ್ನು ₹ 300 ರಿಂದ 900ಕ್ಕೆ ಹೆಚ್ಚಿಸಲಾಯಿತು.‌ ಈಗ ಮತ್ತೆ ಶೇ 15ರಷ್ಟು ಹೆಚ್ಚಿಸಿದರೇ, ಜನರಿಗೆ ಹೊರೆಯಾಗುತ್ತದೆ ಎನ್ನುವ ಸದಸ್ಯ ರಮೇಶ ಹ್ಯಾಟಿ ಮಾತಿಗೆ, ಧ್ವನಿಗೂಡಿಸಿದ ಸದಸ್ಯ ಸುರೇಶ ದರಗದಕಟ್ಟಿ, ಜನರಿಗೆ ಅತಿ ಹೆಚ್ಚು ಹೊರೆಯಾದರೆ ಉತ್ತರಿಸಲು ಕಷ್ಟವಾಗುತ್ತದೆ ಎಂದರು.

ಕಾರಕುಟ್ಟುವವರಂತಹ ಸಣ್ಣ ಉದ್ದಿಮೆದಾರರನ್ನು ಗಮನದಲ್ಲಿಟ್ಟುಕೊಂಡು ತೆರಿಗೆ ಕಡಿಮೆ ಹೆಚ್ಚಿಸಿದದೆ, ಸಿಮೆಂಟ್ ಮಾರಾಟಗಾರರು, ಶಿಕ್ಷಣ ಸಂಸ್ಥೆಗಳು, ಕಿರಾಣಿ, ಔಷಧ ಸೇರಿ ಬಟ್ಟೆ ಅಂಗಡಿಗಳು ಕೂಡಾ ವಾಣಿಜ್ಯ ಉದ್ಯಮದಲ್ಲಿ ಬರುತ್ತವೆ. ಹಾಗಾಗಿ ಕೆಲವರನ್ನು ಉಳಿಸಲು, ದೊಡ್ಡ ಪ್ರಮಾಣದಲ್ಲಿ ಬರುವ ಆದಾಯವನ್ನು ಕೆಡಿಸಿಕೊಳ್ಳಬೇಡಿ ಎಂದು ತಹಶೀಲ್ದಾರ್ ಮಜ್ಜಗಿ ಸಲಹೆ ನೀಡಿದರು.

ಬಳಿಕ ವಾಣಿಜ್ಯ ಉದ್ಯಮಕ್ಕೆ ಶೇ 20ರಷ್ಟು, ಕೈಗಾರಿಕೆ ಮತ್ತು ವಸತಿ ಉದ್ಯಮಕ್ಕೆ ಶೇ 15ರಷ್ಟು ತೆರಿಗೆ ಹೆಚ್ಚಿಸಲು ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.

ನೀರಿನ ಶುಲ್ಕ ಪ್ರತಿ ತಿಂಗಳು ಪ್ರಸ್ತುತ ₹ 80 ಇದೆ‌. ನಗರಸಭೆಯಲ್ಲಿ ₹ 120 ಇದೆ. ಹಾಗಾಗಿ ನಮ್ಮಲ್ಲಿ ₹ 100 ನಿಗದಿ ಪಡಿಸಿ ಎಂದು ಮಜ್ಜಿಗಿ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ವಿಜಯ ಪಾಟೀಲ, ಸರಿಯಾಗಿ ನೀರು ಸರಬರಾಜು ಮಾಡಲು ಆಗುತ್ತಿಲ್ಲ. ಈಗ ನೀರು ಶುಲ್ಕ ಹೆಚ್ಚಿಸಿದರೇ ಜನರು ನಮಗೆ ಛೀಮಾರಿ ಹಾಕುತ್ತಾರೆ. 24x7 ನೀರು ಕೊಡಿ, ಆ ಮೇಲೆ ಶುಲ್ಕ ಹೆಚ್ಚಿಸಿ ಎಂದರು.

ಅಲ್ಲದೆ, ಈಗ 6 ಜನ ವಾಟರ್‌ಮನ್‌ಗಳು ಇದ್ದು, ಅವರಿಗೆ ಸಂಬಳ ಆಗಿಲ್ಲ. ಕೆಲಸ ಹೇಳಿದರೆ ವೇತನವಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದನ್ನು ಪರಿಹರಿಸಿ, ಹೊರಗುತ್ತಿಗೆ ಆಧಾರದಲ್ಲಿ ನಾಲ್ವರನ್ನು ತೆಗೆದುಕೊಳ್ಳಿ ಎಂದು ಸದಸ್ಯ ಹೊನ್ನುರಸಾಬ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT