ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪಾಸರೋವರ: ವಿಜಯಲಕ್ಷ್ಮಿ ದೇವಿ ಮೂರ್ತಿ ವಿವಾದ; ರಾಮುಲು ಆಪ್ತ ಕ್ಷಮೆಯಾಚನೆ

Last Updated 4 ಜೂನ್ 2022, 11:40 IST
ಅಕ್ಷರ ಗಾತ್ರ

ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಪಂಪಾಸರೋವರದ ಜೀರ್ಣೋದ್ಧಾರ ಕಾಮಗಾರಿಯಲ್ಲಿ ಲೋಪದೋಷವಾಗಲು ಸಂವಹನದ ಕೊರತೆಯೇ ಕಾರಣ ಎಂದು ಸಾರಿಗೆ ಸಚಿವ ಶ್ರೀರಾಮುಲು ಆಪ್ತ ರಾಜು ಅವರು ರಾಜವಂಶಸ್ಥರಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ.

ತಾಲ್ಲೂಕಿನ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದ ಜೀರ್ಣೊದ್ಧಾರ ಕಾಮಗಾರಿ ಕುರಿತು ಶನಿವಾರ ನಡೆಸಿದ ಸಭೆಯಲ್ಲಿ ಮಾತನಾಡಿ ‘ಪಂಪಾಸರೋವರದ ಜೀರ್ಣೋದ್ಧಾರದ ಮೂಲಕ ಇತಿಹಾಸ ಉಳಿಸುವ ಕೆಲಸವಾಗಿದೆ. ಸ್ಥಳೀಯರ‌ ಹಾಗೂ ರಾಜವಂಶಸ್ಥರ ಗಮನಕ್ಕೂ ತಾರದೆ ಮೂರ್ತಿ ಸ್ಥಳಾಂತರ ಸೇರಿದಂತೆ ಇನ್ನಿತರ ಕೆಲಸಗಳು ಮಾಡಿದ್ದು, ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ಆದ್ದರಿಂದ ಈ ತಪ್ಪನ್ನು ಮನ್ನಿಸಬೇಕು. ಇನ್ನು ಮುಂದೆ ದೇವಸ್ಥಾನಕ್ಕೆ ಸಂಬಂಧಪಟ್ಟ ಯಾವುದೇ ಕೆಲಸವಿದ್ದರೂ ದೇವಸ್ಥಾನ ಅಭಿವೃದ್ಧಿ ಸಮಿತಿಗೆ, ರಾಜವಂಶಸ್ಥರಿಗೆ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು‘ ಎಂದರು.

ಮೂರ್ತಿ ಪ್ರತಿಷ್ಠಾಪನೆ: ಪಂಪಾಸರೋವರ ವಿಜಯಲಕ್ಷ್ಮಿ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜೂ. 7ರಿಂದ 10ರ ತನಕ ನಡೆಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಸ್ಥಳೀಯರ ಸಹಕಾರ ತುಂಬಾ ಅಗತ್ಯವಾಗಿದೆ. 7 ಹಾಗೂ 8 ರಂದು ವಿಜಯಲಕ್ಷ್ಮಿ ದೇವಸ್ಥಾನದಲ್ಲಿ ವಿವಿಧ ಪೂಜೆ ಹಾಗೂ ಹೋಮ ಕಾರ್ಯಕ್ರಮಗಳು ನಡೆಯಲಿವೆ.

9 ರಂದು ಬೆಳಿಗ್ಗೆ 7.38ಕ್ಕೆ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ, 10ರಂದು ಬೆಳಿಗ್ಗೆ ಅಭಿಷೇಕ, ಅಲಂಕಾರ, ಕುಂಕುಮಾರ್ಚನೆ, ಸ್ಥಳೀಯ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಲಿದೆ. ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲು ತಮಿಳುನಾಡು, ಆಂಧ್ರ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳ ಪಂಡಿತರು, ಅರ್ಚಕರು ಆಗಮಿಸಲಿದ್ದಾರೆ. ಮೊದಲು ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಸಚಿವ ಶ್ರಿರಾಮುಲು ಭಾಗವಹಿಸುವರು.

ಆಪ್ತರ ಜೊತೆ ವಾಗ್ವಾದ

ಗಂಗಾವತಿ: ಪಂಪಾಸರೋವರ ಹಾಗೂ ದುರ್ಗಾದೇವಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಕುರಿತು ರಾಜವಂಶ್ಥರಿಗೆ, ದೇವಸ್ಥಾನ ಅಭಿವೃದ್ದಿ ಸಮಿತಿಗೆ ಮಾಹಿತಿ ಏಕೆ ನೀಡುವುದಿಲ್ಲ? ಎಂದು ಆನೆಗೊಂದಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ತಿಮ್ಮಪ್ಪ ಬಾಳೆಕಾಯಿ ಸಚಿವರ ಆಪ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿದ್ದ ಕಂಬಗಳನ್ನು ಮೇಲಕ್ಕೆತ್ತಿ ಸರಿಪಡಿಸಬೇಕು. ಆದರೆ ಹಳೆ ಕಲ್ಲುಗಳು ತೆಗೆದು, ಹೊಸಕಂಬಗಳು ಅವಳಡಿಸಿದರೆ, ಇತಿಹಾಸ ಉಳಿಯುವುದಾದರೂ ಹೇಗೆ? ಎಂದು ಪ್ರಶ್ನಿಸಿದರು. ಹಳೇ ಕಲ್ಲುಗಳಿಂದಲೇ ಕಾಮಗಾರಿ ನಡೆಯಲಿ ಎಂದು ಆಗ್ರಹಿಸಿದರು.

ದೇವಾಲಯಗಳ ಅಭಿವೃದ್ಧಿಗೆ ನಮ್ಮ ಬೆಂಬಲವಿದೆ. ಸಂಬಂಧಪಟ್ಟ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಉತ್ತಮ. ಮುಂದೆಯೂ ಇದೇ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT