ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಸ್ಥಳಾಂತರಕ್ಕೆ ಪಾಲಕರ ಆಗ್ರಹ

ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೌಲಭ್ಯವಿಲ್ಲ: ದೂರು
Last Updated 24 ಸೆಪ್ಟೆಂಬರ್ 2021, 11:59 IST
ಅಕ್ಷರ ಗಾತ್ರ

ಕನಕಗಿರಿ: ಇಲ್ಲಿನ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ (ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗ) ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ವಿದ್ಯಾರ್ಥಿನಿಯರು ನಿತ್ಯ ತೊಂದರೆ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಒಂದೆಡೆ ಸೇರಿ ನಾಡಗೀತೆ ಹಾಗೂ ರಾಷ್ಟ್ರಗೀತೆ ಹಾಡುವಷ್ಟು ಜಾಗ ಶಾಲೆಯಲ್ಲಿ ಇಲ್ಲ ಎನ್ನುತ್ತಾರೆ ಪಾಲಕ ವಿಶ್ವನಾಥ ಕೋರಿಯವರು.

13 ಕೊಠಡಿಗಳ ಪೈಕಿ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ತಲಾ ಒಂದು ಕೊಠಡಿ ಬಳಕೆ ಮಾಡಿಕೊಂಡಿದ್ದಾರೆ. ಮೂರು ಕೊಠಡಿಗಳು ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ಸೋರುತ್ತಿವೆ. ವಿದ್ಯಾರ್ಥಿಗಳು ಕೊಠಡಿಗಳಲ್ಲಿ ಕುಳಿತುಕೊಂಡು ಆತಂಕದಲ್ಲಿ ಪಾಠ ಕೇಳಬೇಕಾಗಿದೆ. ಶಾಲೆಯ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಎಂಟು ಕೊಠಡಿಗಳ ಕೊರತೆ ಇರುವುದು ಕಂಡು ಬರುತ್ತಿದೆ.

ಎಲ್‌ಕೆಜಿಯಿಂದ ಎಂಟನೇಯ ತರಗತಿ ವರೆಗೆ ಶಾಲೆ ಇದೆ. 15 ಶಿಕ್ಷಕ ಹುದ್ದೆಗಳು ಮಂಜೂರಿಯಾಗಿದ್ದು ಮುಖ್ಯಶಿಕ್ಷಕ ಹುದ್ದೆ ಸೇರಿದಂತೆ 5 ಸ್ಥಾನಗಳು ಖಾಲಿ ಇವೆ. ಮುಖ್ಯವಾಗಿ ಕಳೆದ ಮೂರು ವರ್ಷಗಳಿಂದ ವಿಜ್ಞಾನ, ಗಣಿತ ವಿಷಯದ ಶಿಕ್ಷಕರೆ ಇಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗಣಿತ, ವಿಜ್ಞಾನ ವಿಷಯದಲ್ಲಿ ಈ ಶಾಲೆಯ ವಿದ್ಯಾರ್ಥಿನಿಯರು ಕಡಿಮೆ ಅಂಕ ಪಡೆದಿದ್ದಾರೆ ಎಂದು ಹೆಸರು ಹೇಳಲು ಬಯಸದ ಅಲ್ಲಿನ ಶಿಕ್ಷಕರು ತಿಳಿಸಿದರು.

ಗಣಿತ, ವಿಜ್ಞಾನ ವಿಷಯದ ಶಿಕ್ಷಕರನ್ನು ನಿಯೋಜನೆ ಮಾಡುವಂತೆ ಸ್ಥಳೀಯರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಲೆ ನಮಗೆ ಸಂಬಂಧವಿಲ್ಲದಂತೆ ವರ್ತಿಸಿದ್ದಾರೆ ಎಂದು ಪರಿಶಿಷ್ಟ ಸಮುದಾಯದ ಮುಖಂಡ ಶಾಂತಪ್ಪ ಬಸರಿಗಿಡದ ಆರೋಪಿಸಿದ್ದಾರೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲ್ಲಿನ ಗ್ರಾಮದ ಬಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೆಚ್ಚಾಗಿ ಈ ಶಾಲೆಯಲ್ಲಿ ಕಲಿಯುತ್ತಿದ್ದು ಮಹಿಳಾ ಶಿಕ್ಷಣ ಸಬಲೀಕರಣಕ್ಕೆ ಅಧಿಕಾರಿಗಳೆ ಸ್ಪಂದಿಸುತ್ತಿಲ್ಲ ಎಂಬುದು ಪಾಲಕರ ದೂರು ಆಗಿದೆ.

ಕ್ರೀಡಾಕೂಟದಿಂದ ವಂಚಿತ: ಶಾಲೆ ಆರಂಭಗೊಂಡು 65 ವರ್ಷಗಳೆ ಗತಿಸಿದರೂ ಶಾಲೆಗೆ ಮೈದಾನದ ವ್ಯವಸ್ಥೆ ವಿದ್ಯಾರ್ಥಿನಿಯರು ಪ್ರತಿ ವರ್ಷ ನಡೆಯುವ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟಗಳಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಕಾರಣ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಹಾಗೂ ಮೈದಾನ ಇಲ್ಲದಿರುವುದು.

ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯವಿದೆ. ಮೊದಲ ಮಹಡಿಯಲ್ಲಿ ಶೌಚಾಲಯವಿದ್ದರೂ ದುರಸ್ತಿ ಇರುವ ಕಾರಣ ಬಳಕೆಯಾಗುತ್ತಿಲ್ಲ. ಕೆಲ ಕೊಠಡಿಗಳ ಬಾಗಿಲು, ಕಿಡಿಕಿಗಳು ಕಿತ್ತಿಕೊಂಡು ಹೋಗಿವೆ. ಬಿಸಿಯೂಟ ಮಾಡುವಾಗ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಯದಲ್ಲಿಯೂ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

‘ಶಾಲೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ವ್ಯಾಪ್ತಿಯಲ್ಲಿರುವ ಕೊಠಡಿಗಳಿಗೆ ಸ್ಥಳಾಂತರ ಮಾಡಬೇಕೆಂಬ ಪಾಲಕರ ಬೇಡಿಕೆ ಈಡೇರಿಸಿಲ್ಲ. ಶಾಸಕ ಬಸವರಾಜ ದಢೇಸೂಗೂರು, ಸಂಸದ ಕರಡಿ ಸಂಗಣ್ಣ ಸೇರಿದಂತೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ‘ ಎಂದು ಪರಿಶಿಷ್ಟ ಸಮುದಾಯದ ಮುಖಂಡ ಪಾಮಣ್ಣ ಅರಳಿಗನೂರು ದೂರುತ್ತಾರೆ.

ಜಿಪಿಎಸ್ ಶಾಲೆ ಸ್ಥಳಾಂತರ ಮಾಡುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದು, ಎಲ್ಲಾ ತರಗತಿಗಳು ಆರಂಭಗೊಂಡ ನಂತರ ಡಿಡಿಪಿಐ ಮಾರ್ಗದರ್ಶನದಲ್ಲಿ ಪಾಲಕರ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
- ಸೋಮಶೇಖರಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ, ಗಂಗಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT