ಕೊಪ್ಪಳದಲ್ಲಿಯೇ ದೊರೆಯಲಿದೆ ಪಾಸ್‌ಪೋರ್ಟ್

7
ನಗರದ ಬಜಾರ್ ಅಂಚೆ ಕಚೇರಿಯಲ್ಲಿ ಸೇವಾ ಕೇಂದ್ರ ಶೀಘ್ರ

ಕೊಪ್ಪಳದಲ್ಲಿಯೇ ದೊರೆಯಲಿದೆ ಪಾಸ್‌ಪೋರ್ಟ್

Published:
Updated:
Deccan Herald

ಕೊಪ್ಪಳ: ಕೇಂದ್ರ ಸರ್ಕಾರದಿಂದ ರಾಜ್ಯದಲ್ಲಿ ಎರಡು ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಅನುಮತಿ ನೀಡಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ಕೊಪ್ಪಳ ನಗರದಲ್ಲಿ ಜನವರಿಯಲ್ಲಿ ಆರಂಭವಾಗುವ ನಿರೀಕ್ಷೆ ಇದೆ.

ನಗರದ ಬಜಾರ್ ಅಂಚೆ ಕಚೇರಿಯಲ್ಲಿ ಸುಸಜ್ಜಿತ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭಕ್ಕೆ ಅಂಚೆ ಇಲಾಖೆ ಜಿಲ್ಲಾಧಿಕಾರಿ ಮತ್ತು ಸಂಸದರಿಗೆ ಪತ್ರ ಬರೆದಿದ್ದು, ಎಲ್ಲ ಸೌಕರ್ಯವನ್ನು ಒಳಗೊಂಡ ಕೇಂದ್ರವನ್ನು ಶೀಘ್ರ ಆರಂಭಿಸುವುದಾಗಿ ತಿಳಿಸಿದೆ.

ನಗರದ ಬಜಾರ್ ಅಂಚೆ ಕಚೇರಿಯನ್ನು ಹಳೆಯ ಜಿಲ್ಲಾ ಕೇಂದ್ರ ಗ್ರಂಥಾಲಯದ ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದು, ಬಜಾರ್ ಅಂಚೆ ಕಚೇರಿಯಲ್ಲಿ ಸೇವಾ ಕೇಂದ್ರ ಆರಂಭವಾಗಲಿದೆ. ಇದರಿಂದ ಈ ಭಾಗದ ಬಹುದಿನದ ಬೇಡಿಕೆಯಾಗಿದ್ದ ಪಾಸ್‌ಪೋರ್ಟ್ ಸೇವೆ ಸ್ಥಳೀಯವಾಗಿ ಲಭ್ಯವಾಗುವುದರಿಂದ ಜನತೆಗೆ ಹರ್ಷ ಉಂಟು ಮಾಡಿದೆ.

ಈ ಮೊದಲು ಪಾಸ್‌ಪೋರ್ಟ್ ಪಡೆಯಲು ಹುಬ್ಬಳ್ಳಿ, ಬೆಂಗಳೂರಿಗೆ ಇಲ್ಲಿನ ಜನ ಎಡತಾಕುತ್ತಿದ್ದರು. ವಿದೇಶ ಪ್ರಯಾಣ ಮತ್ತು ವೀಸಾ ಪಡೆಯಲು ಈ ಪಾಸ್‌ಪೋರ್ಟ್ ಸೇವಾ ಕೇಂದ್ರ ಅಗತ್ಯವಾಗಿದೆ. ನೂರಾರು ಉದ್ದಿಮೆಗಳು, ವ್ಯಾಪಾರಸ್ಥರು, ನೌಕರರು, ವಿದ್ಯಾರ್ಥಿಗಳು ಸೇರಿದಂತೆ ಅನೇಕ ಜನರಿಗೆ ಈ ಸೇವೆ ಇಲ್ಲಿಯೇ ಲಭ್ಯವಾಗುತ್ತಿರುವುದರಿಂದ ಅನಗತ್ಯ ವಿಳಂಬವಾಗುವುದು ತಪ್ಪಲಿದೆ.

ಸೇವಾಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ದೊರೆತಿದ್ದು, ಅವಶ್ಯಕ ವಿದ್ಯುತ್, ಅಂತರ್ಜಾಲ ಸೇವೆಯ ಸಂಪರ್ಕ, ಒಳಾಂಗಣ ಸೌಂದರ್ಯ ಮತ್ತು ಇತರ ಕೆಲಸಕ್ಕೆ ₹ 3 ಲಕ್ಷ ನೀಡಿದ್ದು, ಜನವರಿ ಮೊದಲನೇ ವಾರದಲ್ಲಿ ಸಂಪೂರ್ಣ ಕಾರ್ಯಾರಂಭ ಮಾಡಲಿದೆ ಎಂದು ಅಂಚೆ ಇಲಾಖೆ ಉಪಅಂಚೆ ಪಾಲಕ ಜಿ.ಎನ್.ಹಳ್ಳಿ ತಿಳಿಸಿದ್ದಾರೆ.

ಸೇವಾ ಕೇಂದ್ರಕ್ಕೆ ಅಂಚೆ ಇಲಾಖೆಯ ಒಬ್ಬ ಸಿಬ್ಬಂದಿ, ಪಾಸ್‌ಪೋರ್ಟ್ ಕಚೇರಿಯ ನುರಿತ ಒಬ್ಬ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಮೂವರಿಗೆ ಎಲ್ಲ ತರಬೇತಿ ನೀಡಿದ್ದು, ಆರಂಭವಾದ ತಕ್ಷಣ ಅವರಿಗೆ ಆದೇಶ ನೀಡಿ ಕಾರ್ಯಾರಂಭ ಮಾಡಲಾಗುತ್ತಿದೆ ಎಂದು ತಿಳಿಸಿದರು.

'ಸಂಸದ ಸಂಗಣ್ಣ ಕರಡಿ ಅವರು ಈ ಕುರಿತು ವಿಶೇಷ ಆಸಕ್ತಿ ವಹಿಸಿ, ಗದಗ ವಿಭಾಗಕ್ಕೆ ಸೇರುವ ಕೊಪ್ಪಳ ಅಂಚೆ ಕಚೇರಿ ಆಧುನೀಕರಣದ ಜೊತೆಗೆ ಸೇವಾ ಕೇಂದ್ರ ಆರಂಭಿಸಿರುವುದರಿಂದ ಮತ್ತೆ ಜನಮಾನಸದಲ್ಲಿ ಅಂಚೆ ಇಲಾಖೆ ಪ್ರಸ್ತುತತೆ ಪಡೆಯುವಂತೆ ಆಗಿದೆ' ಎಂದು ವ್ಯಾಪಾರಸ್ಥ ಬಸವರಾಜ ಪಾಟೀಲ ಹೇಳಿದರು.

ಕೊಪ್ಪಳ ಮತ್ತು ಸುತ್ತಮುತ್ತಲಿನ ಜಿಲ್ಲೆಯ ಜನತೆಗೆ ಪಾಸ್‌ಪೋರ್ಟ್ ಸೇವಾ ಕೇಂದ್ರದಿಂದ ಸೌಲಭ್ಯ ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಆನ್‌ಲೈನ್ ಹಾಗೂ ಸಿಬ್ಬಂದಿ ಸಹಯೋಗದಿಂದ ಸೇವೆ ಪಡೆದುಕೊಳ್ಳಲು ಬರುವ ಜನತೆಗೆ ಎಲ್ಲ ಮೂಲ ಸೌಕರ್ಯ ಒದಗಿಸುವುದರ ಜೊತೆಗೆ ಕೇಂದ್ರದ ಕಾರ್ಯಕ್ಷಮತೆ ಹೆಚ್ಚಳಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಪಾಸ್‌ಪೋರ್ಟ್ ಕಚೇರಿಯ ಸಿಬ್ಬಂದಿ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !