ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಗತ್ಯ ಗಲಭೆ, ಗೊಂದಲಕ್ಕೆ ಆಸ್ಪದ ಕೊಡಬೇಡಿ: ಡಿಸಿ

ಬಕ್ರೀದ್ ಶಾಂತಿ ಸಭೆ: ಜಿಲ್ಲಾಡಳಿತದಿಂದ ಮಾರ್ಗಸೂಚಿ
Last Updated 17 ಜುಲೈ 2021, 14:32 IST
ಅಕ್ಷರ ಗಾತ್ರ

ಕೊಪ್ಪಳ: ಬಕ್ರೀದ್ ಹಬ್ಬವನ್ನು ಮುಸ್ಲಿಂ ಸಮಾಜದ ಜನತೆ ಸರ್ಕಾರದ ಮಾರ್ಗಸೂಚಿಯನ್ವಯ ಶಾಂತಿಯುತವಾಗಿ ಹಾಗೂ ಸೌಹಾರ್ದದಿಂದ ಆಚರಿಸಿ, ಅನಗತ್ಯ ಗಲಭೆ, ಗೊಂದಲಕ್ಕೆ ಆಸ್ಪದ ಮಾಡಿಕೊಡಬೇಡಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರಜು.21 ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಕುರಿತಾಗಿ ಆಯೋಜಿಸಲಾಗಿದ್ದ ಶಾಂತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಹಬ್ಬಕ್ಕೆರಾಜ್ಯ ಸರ್ಕಾರ ಈಗಾಗಲೇ ನಿರ್ದಿಷ್ಟ ಮಾರ್ಗಸೂಚಿ ಹೊರಡಿಸಿದೆ. ಅವುಗಳನ್ನು ಸಮುದಾಯದವರು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಸೀದಿ ಸಾಮರ್ಥ್ಯದಲ್ಲಿ ಶೇ.50 ರಷ್ಟು ಜನರು ಮಾತ್ರ ಸೇರಿ ಪ್ರಾರ್ಥನೆ ಸಲ್ಲಿಸಬೇಕು ಮತ್ತು ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಹೊಂದಿರಬೇಕು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿರುವುದರಿಂದ ರಾಜ್ಯದಲ್ಲಿ ಎಲ್ಲ ದನ, ಕರು, ಒಂಟೆಗಳು, 13 ವರ್ಷದೊಳಗಿನ ಎಮ್ಮೆ, ಕೋಣಗಳನ್ನು ಅಕ್ರಮ ಸಾಗಾಣಿಕೆ ಹಾಗೂ ವಧೆ ಮಾಡುವುದನ್ನು ನಿಷೇಧಿಸಿದೆ ಎಂದರು.

ಅಗತ್ಯವಿದ್ದಲ್ಲಿ ತಾತ್ಕಾಲಿಕ ವಾಧಾಗಾರ ನಿರ್ಮಿಸುವ ಸಂದರ್ಭದಲ್ಲಿ ಸ್ಥಳೀಯ ತಹಶೀಲ್ದಾರರು ಹಾಗೂ ಮುಖ್ಯಾಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಸ್ಥಳದಲ್ಲಿ ವ್ಯವಸ್ಥಿತ ತಾತ್ಕಾಲಿಕ ವಧಾಗಾರವನ್ನು ನಿರ್ಮಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಉಪ ವಿಭಾಗಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ನಿರ್ಮಾಣಗೊಂಡ ತಾತ್ಕಾಲಿಕ ವಧಾಗಾರಗಳಲ್ಲಿ ಪಶು ಪಾಲನಾ ಇಲಾಖೆಯ ವೈದ್ಯರು ಇರುವುದು ಕಡ್ಡಾಯ. ಮಸೀದಿ ಸೇರಿದಂತೆ ಪ್ರಾರ್ಥನಾ ಸ್ಥಳಗಳಲ್ಲಿ ಕೊವಿಡ್-19 ಅಂಗವಾಗಿ ಮುನ್ನೆಚ್ಚರಿಕೆಯಾಗಿ 60 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಹಾಗೂ 10 ವರ್ಷದ ಕೆಳಗಿನ ಮಕ್ಕಳು ಪ್ರವೇಶ ಮಾಡದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೆ ಕೋವಿಡ್ ಲಕ್ಷಣಗಳುಳ್ಳ ವ್ಯಕ್ತಿಗಳನ್ನು ಸೋಂಕು ಹರಡುವಿಕೆ ನಿಯಂತ್ರಣ ಉದ್ದೇಶದಿಂದ ಪ್ರಾರ್ಥನಾ ಸ್ಥಳಗಳಿಗೆ ಅನುಮತಿಸಬಾರದು. ಅಂತವರಿಗೆ ನಿಮ್ಮ ಮಟ್ಟದಲ್ಲಿಯೇ ಸೂಕ್ತ ತಿಳಿವಳಿಕೆ ನೀಡುವುದರ ಮೂಲಕ ಮನೆಯಿಂದ ಹೊರಬಾರದಂತೆ ನೋಡಿಕೊಳ್ಳಬೇಕು. ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಮಾತನಾಡಿ, ಒಂದು ಸಮುದಾಯದ ಭಾವನೆಗಳನ್ನು ಇನ್ನೊಂದು ಸಮುದಾಯದವರು ಕೆರಳಿಸುವ ಪ್ರಯತ್ನ ಮಾಡಬಾರದು. ಈ ಕುರಿತು ಜಿಲ್ಲೆಯಾದ್ಯಂತ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗಿದೆ. ಆದಾಗ್ಯೂ ಗಲಭೆ ಉಂಟು ಮಾಡುವ ಉದ್ದೇಶದಿಂದ ಯಾರಾದರೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಲ್ಲಿ ಈ ಕುರಿತು ಹತ್ತಿರದ ಪೊಲೀಸ್ ಠಾಣೆಗೆ, ಸಹಾಯವಾಣಿ ಸಂಖ್ಯೆ; 112 ಗೆ ಅಥವಾ ಜಿಲ್ಲಾ ಕಂಟ್ರೋಲ್ ರೂಂ ಗೆ ಕರೆ ಮಾಡಿ ಮಾಹಿತಿ ನೀಡಿದಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ನಾಗರಾಜ ಎಚ್. ಮಾತನಾಡಿ, ಗೋ ಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಸಾಗಾಣಿಕೆ, ವಧೆ ಮುಂತಾದವುಗಳ ಕುರಿತು ಇರುವಕಾನೂನುಗಳ ಬಗ್ಗೆ ತಿಳಿವಳಿಕೆ ನೀಡಿದರು. ಗಂಗಾವತಿ, ಕಾರಟಗಿ, ಕುಷ್ಟಗಿ, ಕೊಪ್ಪಳ, ಯಲಬುರ್ಗಾಸಮಾಜದ ಮುಖಂಡರು ಇದ್ದರು.

ಜಿಲ್ಲಾ ಪಂಚಾಯಿತಿ ಸಿಇಒ ಫೌಜೀಯಾ ತರನುಮ್,ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಸಹಾಯಕ ಆಯುಕ್ತ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಂಗಪ್ಪ, ಡಿವೈಎಸ್‌ಪಿಗಳಾದ ರುದ್ರೇಶ ಉಜ್ಜನಕೊಪ್ಪ, ಗೀತಾ ಬೇನಾಳ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT