ಶನಿವಾರ, ಅಕ್ಟೋಬರ್ 23, 2021
21 °C
8 ಜನರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು

ದೇವಾಲಯ ಪ್ರವೇಶಿಸಿದ ಪರಿಶಿಷ್ಟ ಜಾತಿಯ ಯುವಕನಿಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ (ಕೊಪ್ಪಳ ಜಿಲ್ಲೆ): ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದ ಪರಿಶಿಷ್ಟ ಜಾತಿಗೆ ಸೇರಿದ ಸಿಂಧೋಳ ಸಮುದಾಯದ ಯುವಕ ಮಾರೆಪ್ಪ ಅವರಿಗೆ, ದೇವಸ್ಥಾನದ ಆಡಳಿತ ಮಂಡಳಿ ₹11 ಸಾವಿರ ದಂಡ ವಿಧಿಸಿದ ಪ್ರಕರಣ ತಾಲ್ಲೂಕಿನ ನಾಗನಕಲ್ ಗ್ರಾಮದಲ್ಲಿ ನಡೆದಿದೆ.

‘ಸೆಪ್ಟೆಂಬರ್‌ 11ರಂದು ಈ ಘಟನೆ ನಡೆದಿದ್ದು, ಅರ್ಚಕ ಹಾಗೂ ಆಡಳಿತ ಮಂಡಳಿಯವರು ಸೇರಿ ಎಂಟು ಜನರ ವಿರುದ್ಧ ಜಾತಿ ನಿಂದನೆ ಪ್ರಕರಣವನ್ನು ಶನಿವಾರ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.

‘ಕಾರಟಗಿಯ ಈ ಯುವಕ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಹೊರ ಬಂದಿದ್ದನ್ನು ಅರ್ಚಕ ನೋಡಿದ್ದರು. ಯುವಕನಿಗೆ ನಿಂದಿಸಿದ್ದ ಅವರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಿಗೆ ವಿಷಯ ಮುಟ್ಟಿಸಿದರು. ದೇವಸ್ಥಾನದ ಶುದ್ಧೀಕರಣಕ್ಕಾಗಿ ಯುವಕನಿಗೆ ₹ 11 ಸಾವಿರ ದಂಡ ವಿಧಿಸಲಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ಅರ್ಚಕ ಬಸವರಾಜ ಶಂಕ್ರಪ್ಪ ಬಡಿಗೇರ, ರೇವಣಯ್ಯ ಸ್ವಾಮಿ ಶೇಖರಯ್ಯ, ಶೇಖರಪ್ಪ ಬಸಣ್ಣ ರೇವಣಕಿ, ಶರಣಪ್ಪ ವೀರಭದ್ರಪ್ಪ ಗುಂಜಳ್ಳಿ, ಪ್ರಶಾಂತ ರಾಯಪ್ಪ ತಮ್ಮಣ್ಣನವರ, ಬಸವರಾಜ ಹನುಮಂತಪ್ಪ ತಳವಾರ, ಕಾಡಪ್ಪ ನಾಯಕ ಮತ್ತು ದುರಗೇಶ ಅಂಬಣ್ಣ ಸಂಕನಾಳ ಎಂಬುವರ ವಿರುದ್ಧ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಆಡಳಿತ, ಪೊಲೀಸ್‌ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿದರು. ಆದರೆ, ಯುವಕ ಮತ್ತು ಸಂಬಂಧಿಕರು ದೂರು ನೀಡಲು ನಿರಾಕರಿಸಿದರು. ವಿಷಯದ ಗಾಂಭೀರ್ಯತೆ ಅರಿತು ಸ್ವಯಂ–ಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದೇವೆ. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದೇವೆ’ ಎಂದು ಪ್ರಭಾರಿ ಸಬ್‌ ಇನ್‌ಸ್ಪೆಕ್ಟರ್‌ ಯಲ್ಲಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು