ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ತಾಲ್ಲೂಕು ಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಂದ ಮನವಿ
Last Updated 12 ಅಕ್ಟೋಬರ್ 2020, 11:53 IST
ಅಕ್ಷರ ಗಾತ್ರ

ಗಂಗಾವತಿ: ಗಂಗಾವತಿ ತಾಲ್ಲೂಕು ಗೊಲ್ಲ ಕ್ಷೇಮಾಭಿವೃದ್ಧಿ ಸಂಘವು ಅಖಿಲ ಕರ್ನಾಟಕ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿ ನಗರದ ತಾಲ್ಲೂಕು ಆಡಳಿತ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಶಿರಸ್ತೇದಾರ್‌ ಮಂಜುನಾಥ ನಂದನ್‌ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಣವಾನಂದ ಯಾದವ ಮಾತನಾಡಿ,‘ಆರು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಆಲ್ ಇಂಡಿಯಾ ಯಾದವ ಮಹಾಸಭಾದ ಕಾರ್ಯಕ್ರಮದಲ್ಲಿ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಗೊಲ್ಲ ಸಮುದಾಯದಲ್ಲಿ 34 ಒಳಪಂಗಡಗಳು ಇವೆ. ಒಂದೇ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದು ಸೂಕ್ತ ಎಂದು ಸಿಎಂ ಅವರಿಗೆ ತಿಳಿಸಲಾಗಿತ್ತು’ ಎಂದರು.

ಈಗ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಿರುವುದು ಸರಿಯಲ್ಲ. ರಾಜ್ಯದಲ್ಲಿ ಸುಮಾರು 40 ಲಕ್ಷ ಗೊಲ್ಲ ಸಮುದಾಯದವರಿದ್ದಾರೆ. ಈಗ ಉಪಚುನಾವಣೆಗೋಸ್ಕರ 6 ಲಕ್ಷ ಜನಸಂಖ್ಯೆ ಇರುವ 3 ಜಿಲ್ಲೆಗಳನ್ನು ಮಾತ್ರ ಪರಿಗಣಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು. ಗೊಲ್ಲ ಸಮಾಜದ ಕ್ಷೇಮಾಭಿವೃದ್ಧಿಗಾಗಿ ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ದ ಬದಲಾಗಿ ‘ಅಖಿಲ ಕರ್ನಾಟಕ ಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಇಲ್ಲದಿದ್ದರೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಸಂಘದ ಪ್ರಮುಖರಾದ ಕೊಲ್ಲಾರಿ ದುರುಗಪ್ಪ, ಕತ್ತಿ ಹನುಮಂತ, ಕೃಷ್ಣ ವಡ್ಡರಹಟ್ಟಿ, ಮಾಮಳಿ ಹನುಮಂತ, ಬಿ.ಎಂ.ವೆಂಕಟೇಶ, ಹುಲಗಪ್ಪ, ದುರುಗಪ್ಪ, ಹೇಮಣ್ಣ, ಯಮನೂರ ಪಾಟೀಲ್, ಪರಶುರಾಮ ಮಲ್ಲಾಪುರ, ಪಾಮಣ್ಣ, ಯಂಕಪ್ಪ, ಯಡೆಹಳ್ಳಿ ಬಸಣ್ಣ, ಸಣ್ಣ ಕರಡೆಪ್ಪ ಗುರುವಿನ್, ಹನುಮಂತ, ನಾಗರಾಜ ಹಾಗೂ ರಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT