ಮಂಗಳವಾರ, ಜೂನ್ 28, 2022
26 °C
ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಆರು ಕಡೆ ಆಮ್ಲಜನಕ ಘಟಕಗಳ ಸ್ಥಾಪನೆ: ಕೊರತೆ ನೀಗುವ ಭರವಸೆ

ಕೊಪ್ಪಳ: ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಉತ್ಪಾದನೆ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಆಮ್ಲಜನಕ ಕೊರತೆಯಿಂದ ಕೊರೊನಾ ಸೋಂಕಿತರು ಪರದಾಡುತ್ತಿರುವ ಕಾರಣ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 6 ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಜಿಲ್ಲೆಯಲ್ಲಿ ಆಮ್ಲಜನಕ ಉತ್ಪಾದನೆ ತೃಪ್ತಿಕರವಾಗಿತ್ತು. ಇಲ್ಲಿರುವ 3 ಬೃಹತ್ ಕಾರ್ಖಾನೆಗಳು ಮೊದಲಿನಿಂದಲೂ 10 ಸಾವಿರ ಲೀಟರ್‌ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿ ಜಿಲ್ಲೆ, ರಾಜ್ಯ ಸೇರಿ ಹೊರ ರಾಜ್ಯಕ್ಕೆ ಸಾಗಾಟ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿತ್ತು.

ಇಲ್ಲಿ ಆಮ್ಲಜನಕ ಉತ್ಪಾದನೆ ಮಾಡುವ ಕಾರ್ಖಾನೆಗಳು ಇದ್ದರೂ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಆಸ್ಪತ್ರೆಗಳಲ್ಲಿ ಇರಲಿಲ್ಲ. ಚಿಕ್ಕ ಸಿಲಿಂಡರ್‌, ಜಂಬೋ ಸಿಲಿಂಡರ್‌ಗಳ ಮೂಲಕ ರೋಗಿಗಳಿಗೆ ಒದಗಿಸಲಾಗುತ್ತಿತ್ತು. ಕಳೆದ ಒಂದು ತಿಂಗಳ ಹಿಂದೆಯೇ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ 6 ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಸಂಗ್ರಹ ಟ್ಯಾಂಕ್‌ ನಿರ್ಮಿಸಲಾಗಿತ್ತು.

ಮೂರನೇ ಅಲೆ ಮತ್ತು ವೈದ್ಯಕೀಯ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಧಿಯಿಂದ ಕೊಪ್ಪಳ ಮತ್ತು ಗಂಗಾವತಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಪ್ಲ್ಯಾಂಟ್‌ಗಳ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿದೆ. ಮುನಿರಾಬಾದ್‌ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಾಗ ಗುರುತಿಸಲಾಗಿದೆ. ಯಲಬುರ್ಗಾ, ಕುಷ್ಟಗಿ, ಕಾರಟಗಿ ಭಾಗದಲ್ಲಿ ಘಟಕ ಸ್ಥಾಪನೆಗೆ ನಿರ್ಧರಿಸಲಾಗಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕೋವಿಡ್‌ ನಿರ್ವಹಣೆ ಉದ್ದೇಶಕ್ಕೆ ₹22 ಕೋಟಿ ಹಣವನ್ನು ಮೀಸಲಿಡಲಾಗಿದ್ದು, ಈ ಘಟಕಗಳ ನಿರ್ಮಾಣಕ್ಕೆ ಸಹ ಅನುದಾನ ನೀಡಲಾಗುವುದು ಎಂದು ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದ್ದಾರೆ. ಇದರಿಂದ ಕಾಮಗಾರಿಗಳಿಗೆ ವೇಗ ದೊರೆತಿದ್ದು, ಎರಡೂ, ಮೂರು ತಿಂಗಳಲ್ಲಿ ಬಹುತೇಕ ಪೂರ್ಣಗೊಂಡು ಉತ್ಪಾದನೆ ಆಗುವ ಭರವಸೆಯನ್ನು ಜಿಲ್ಲಾಡಳಿತ ವ್ಯಕ್ತಪಡಿಸಿದೆ. ಆಮ್ಲಜನಕ ಘಟಕಗಳ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿಯೇ ಪೂರ್ಣಗೊಳಿಸಿ ಅದರ ಶ್ರೇಯಸ್ಸು ಪಡೆಯುವ ಉತ್ಸಾಹದಲ್ಲಿರುವ ಆಡಳಿತ ವರ್ಗ ಹೆಚ್ಚಿನ ಮುತುವರ್ಜಿ ವಹಿಸಿ ನಿರ್ಮಾಣಕ್ಕೆ ಚಾಲನೆ ನೀಡಿದೆ. ಕೋವಿಡ್‌ ನಿರ್ವಹಣೆಯಲ್ಲಿ ಪ್ರಮುಖ ಸಮಸ್ಯೆಯಾಗಿರುವ ಪ್ರಾಣವಾಯುವಿಗೆ ಈಗ ಆದ್ಯತೆ ನೀಡಿದ್ದು, ಮುಂದಿನ ದಿನಗಳಲ್ಲಿ ಅದಕ್ಕೆ ಉದ್ಯಮದ ಸ್ವರೂಪ ಬಂದರೂ ಆಶ್ಚರ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಈ ಕುರಿತು ಮುನಿರಾಬಾದ್‌ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಕೆ.ಎಚ್‌.ತೊಗರಿ ಮಾತನಾಡಿ,‘ಆಮ್ಲಜನಕ ಸಿಲಿಂಡರ್‌ಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ನಮ್ಮ ಆಸ್ಪತ್ರೆಗೆ ನಿರಂತರ ಪೂರೈಕೆ ಇದ್ದುದರಿಂದ ಆ ತೊಂದರೆಯಾಗಿಲ್ಲ. ಈಗ ಆಸ್ಪತ್ರೆ ಆವರಣದಲ್ಲಿಯೇ ಘಟಕ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಇದರಿಂದ ಹೆಚ್ಚಿನ ಅನುಕೂಲವಾಗಲಿದೆ’ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು