ಗುರುವಾರ , ನವೆಂಬರ್ 14, 2019
19 °C
ಸಸ್ಯ ಸಂತೆಗೆ ಸಚಿವರಿಂದ ಚಾಲನೆ

ತರೇವಾರಿ ಸಸ್ಯ ವೀಕ್ಷಿಸಿ ಸಂತಸಪಟ್ಟ ಸಚಿವ

Published:
Updated:
Prajavani

ಕೊಪ್ಪಳ: ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಸ್ಯ ಸಂತೆಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಈ. ತುಕಾರಾಂ ಚಾಲನೆ ನೀಡಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಸಾಹಿತಿ ಗಿರೀಶ ಕಾರ್ನಾಡ್ ನಿಧನದ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಸಸ್ಯ ಸಂತೆಗೆ ಚಾಲನೆ ನೀಡಲಾಯಿತು. ಜೂ.20ರ ವರೆಗೆ ನಡೆಯುವ ಈ ಸಂತೆಯಲ್ಲಿ ಕಡಿಮೆ ಬೆಲೆಗೆ ಸಸ್ಯಗಳನ್ನು ಮಾರಾಟಕ್ಕೆ ಇಡಲಾಗಿದೆ.

ಸಸ್ಯ ಸಂತೆ ವೀಕ್ಷಣೆ ಮಾಡಿ ನಂತರ ಮಾತನಾಡಿದ ಸಚಿವರು, ಅತ್ಯಂತ ಮಿತವಾಗಿ ನೀರು ಬಳಕೆ ಮಾಡಿಕೊಂಡು, ಕಡಿಮೆ ಸ್ಥಳದಲ್ಲಿಯೇ ಯಾವ ರೀತಿ ಕೃಷಿ ಮಾಡಬೇಕು ಎನ್ನುವ ಬಗ್ಗೆ ಇಲಾಖೆ ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಸಸ್ಯ ಸಂತೆಯಲ್ಲಿ ಏನೇನು?: ಮನೆಯಲ್ಲಿ ಬೆಳೆಯುವ ವಿವಿಧ ತರೇವಾರಿ ಅಲಂಕಾರಿಕ ಸಸ್ಯ, ಉದ್ಯಾನದ ಅಂದಕ್ಕೆ ಬೇಕಾಗುವ ವಿವಿಧ ಜಾತಿಯ ಹುಲ್ಲು, ಬೀಜದ ಉಂಡೆ, ಅಣಬೆ ಕೃಷಿ, ಇ-ತ್ಯಾಜ್ಯ, ಟಯರ್ ಬಳಸಿ ಬೆಳೆಯುವ ವಿಧಾನ, ಎರೆಹುಳು ಗೊಬ್ಬರ, ವಿವಿಧ ನಮೂನೆಯ ಹೂವಿನ ತಳಿಯ ಬೀಜ, ಗಡ್ಡೆ, ಹಸಿರು ಸೊಪ್ಪು, ತೋಟಗಾರಿಕೆ ಬೆಳೆಗಳಾದ ಲಿಂಬೆ, ಮಾವು, ಕರಿಬೇವು, ನುಗ್ಗೆ, ತರಕಾರಿ, ವಾಣಿಜ್ಯ ಬೆಳೆಗಳಾದ ಚೆರ್ರಿ, ಡ್ರ್ಯಾಗನ್‌ ಪ್ರೂಟ್ ವಿದೇಶ ತಳಿಯ ಸಸ್ಯಗಳು ಗಮನ ಸೆಳೆದವು.

ಮನೆಯ ಅಂದ ಹೆಚ್ಚಿಸುವ ಬೊನ್ಸಾಯ್ ತನ್ನ ಕುಬ್ಜತೆಯಿಂದ ಎಲ್ಲರನ್ನು ಆಕರ್ಷಿಸಿದವು. ಹಾಳಾದ ಕಂಪೂಟರ್, ಮೊಬೈಲ್, ಅಕ್ವೇರಿಯಂಗಳಲ್ಲಿ ಅಲಂಕಾರಿಕ ಜಲಸಸ್ಯಗಳನ್ನು ಬೆಳೆಯುವ ವಿಧಾನ. ಅಟ್ಟಣಿಗೆಯಾಕಾರದಲ್ಲಿ ವಿವಿಧ ಗಿಡಗಳನ್ನು ಹಾಕಿ, ಅವುಗಳಿಗೆ ಹನಿ ನೀರಿನ ಸ್ವಯಂ ಚಾಲಿತ ವ್ಯವಸ್ಥೆ ಗಮನ ಸೆಳೆದವು.

ತೋಟಗಾರಿಕೆ ಇಲಾಖೆ ಉಪನಿರ್ದೇಶ ಕೃಷ್ಣ ಉಕ್ಕುಂದ ಮಾಹಿತಿ ನೀಡಿ, ನಮ್ಮ ಜಿಲ್ಲೆಯಲ್ಲಿಯೇ ಇಲಾಖೆಯ ಸಸ್ಯ ಕ್ಷೇತ್ರದಲ್ಲಿ ಕೆಲವು ದಿನದಿಂದ ಹೊಸ, ಹೊಸ ಪ್ರಯೋಗ ನಡೆಸಿ ಹೆಚ್ಚು ಇಳುವರಿ ನೀಡುವ, ರೈತರಿಗೆ ಆದಾಯ ತರುವ ಸಸ್ಯಗಳನ್ನು ಬೆಳೆದು ಮಾರಾಟಕ್ಕೆ ಇಟ್ಟಿದ್ದೇವೆ. ಅತ್ಯಂತ ಕಡಿಮೆ ಮತ್ತು ಕೈಗೆಟುಕುವ ದರದಲ್ಲಿ ದೊರೆಯುತ್ತದೆ. ಆಸಕ್ತರು, ರೈತರು ಖರೀದಿಸಬೇಕು ಎಂದು ಮನವಿ ಮಾಡಿದರು.

ಸಚಿವರಿಗೆ ಇಲಾಖೆ ಅಧಿಕಾರಿಗಳು ವಿವಿಧ ಸಸಿಗಳ ಕುರಿತು ಮಾಹಿತಿ ನೀಡಿದರು. ಸಂಸದ ಸಂಗಣ್ಣ ಕರಡಿ, ಶಾಸಕ, ಸಂಸದೀಯ ಕಾರ್ಯದರ್ಶಿ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೃಷ್ಣ ಉಕ್ಕುಂದ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್‌.ಎಸ್.ಪೆದ್ದಪ್ಪಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ರಾಜಶೇಖರ ಹಿಟ್ನಾಳ, ಗೂಳಪ್ಪ ಹಲಗೇರಿ, ವಾಮನಾಚಾರ್ಯ ಮುಂತಾದವರು ಇದ್ದರು.

ಪ್ರತಿಕ್ರಿಯಿಸಿ (+)