ಬುಧವಾರ, ಜನವರಿ 22, 2020
17 °C
ಪೊಲೀಸ್ ಮಹಾನಿರೀಕ್ಷಕ ಎಂ.ನಂಜುಂಡಸ್ವಾಮಿ ಹೇಳಿಕೆ

ಜಿಲ್ಲೆಯ ಪೊಲೀಸರ ಕಾರ್ಯವೈಖರಿ ಅಭಿನಂದನಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲೆಯ ಪೊಲೀಸ್ ಕಾರ್ಯ ವೈಖರಿ ಚೆನ್ನಾಗಿದೆ. ಈ ವರ್ಷದ ಎಲ್ಲ ಬಂದೋಬಸ್ತ್ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದ್ದೀರಿ. ನವ ಬೃಂದಾವನ ಧ್ವಂಸ ಪ್ರಕರಣದ ಆರೋಪಿಗಳನ್ನು ತ್ವರಿತಗತಿಯಲ್ಲಿ ಸೆರೆಹಿಡಿದದ್ದು ಅಭಿನಂದನಾರ್ಹ ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಎಂ.ನಂಜುಂಡಸ್ವಾಮಿ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಜಿಲ್ಲಾ ವಾರ್ಷಿಕ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊಪ್ಪಳ ಜಿಲ್ಲೆ ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಏಕೆಂದರೆ ಇಲ್ಲಿ ನಾನು ಪೊಲೀಸ್ ವರಿಷ್ಠಾಧಿಕಾರಿಯಾಗಿ ಒಂದು ವರ್ಷ ಕಾರ್ಯ ನಿರ್ವಹಿಸಿದ್ದೇನೆ. ಇಲ್ಲಿ ಬಹಳಷ್ಟು ಜನ ಸ್ನೇಹಿತರಿದ್ದಾರೆ. ಜಿಲ್ಲೆಗೆ ಭೇಟಿ ನೀಡಲು ನನಗೆ ಯಾವಾಗಲೂ ಖುಷಿಯಾಗುತ್ತದೆ. ಡಿಸೆಂಬರ್ ಪೊಲೀಸರಿಗೆ ಸಂತಸದ ತಿಂಗಳು. ಈ ತಿಂಗಳಿನಲ್ಲಿ ಹಾಡು, ನೃತ್ಯ, ಆಟೋಟ, ಪ್ರವಾಸಗಳ ಮೂಲಕ ಅವರು ಸ್ವಲ್ಪ ನಿರಾಳರಾಗುತ್ತಾರೆ. ಪ್ರಸ್ತುತ ಕ್ರೀಡಾಕೂಟದಲ್ಲಿ ಪೊಲೀಸ್ ಸಿಬ್ಬಂದಿ ಕೂಡ ಭಾಗವಹಿಸಿರುವುದು ಸಂತಸ ತಂದಿದೆ. ಕ್ರೀಡಾಕೂಟಗಳು ದೈಹಿಕ, ಮಾನಸಿಕ ಆರೋಗ್ಯದ ಜತೆಗೆ ನಮ್ಮಲ್ಲಿ ಬಾಂಧವ್ಯವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.

ಇದು ವರ್ಷದ ಕೊನೆಯ ತಿಂಗಳಾಗಿದ್ದು, ಎಲ್ಲ ಪೊಲೀಸರು ಈ ವರ್ಷದ ಪೆಂಡಿಂಗ್ ಕೆಲಸಗಳನ್ನು ಮುಗಿಸಿಬಿಡಿ. ಮುಂದಿನ ವರ್ಷದ ಎಲ್ಲ ದಾಖಲಾತಿಗಳನ್ನು ಅಪ್‍ಡೇಟ್ ಮಾಡಿ. ಸಂವಿಧಾನದ ಆಶಯದಂತೆ ಕಾರ್ಯ ಪ್ರವೃತ್ತರಾಗುವ ಮೂಲಕ ನಮ್ಮ ಮೇಲೆ ಸಮಾಜ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳೋಣ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್‍ಪಿ ವೆಂಕಟಪ್ಪ ನಾಯಕ, ಗಂಗಾವತಿ ಡಿವೈಎಸ್‍ಪಿ ಡಾ.ಬಿ.ಪಿ.ಚಂದ್ರಶೇಖರ, ಡಿ.ಎ.ಆರ್ ಡಿವೈಎಸ್‍ಪಿ ಶಶಿಧರಯ್ಯ, ನಗರಠಾಣೆ ಇನ್ಸ್‌ಪೆಕ್ಟರ್ ಮೌನೇಶ್ವರ ಪಾಟೀಲ, ಆರ್.ಪಿ.ಐ ನಿಂಗಪ್ಪ ಇದ್ದರು. ಕೆ.ಎಚ್.ಕಲಕಬಂಡಿ ನಿರೂಪಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು