ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಿ

ಗಂಗಾವತಿ ಆಸ್ಪತ್ರೆ ಆವರಣದಲ್ಲಿ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ
Last Updated 1 ಫೆಬ್ರುವರಿ 2021, 5:25 IST
ಅಕ್ಷರ ಗಾತ್ರ

ಗಂಗಾವತಿ: ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆ ಆವರಣದಲ್ಲಿ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ಪರಣ್ಣ ಮುನವಳ್ಳಿ ಭಾನುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು,‘ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಬೇಕು. ಹಾಗೇ ಮಾಡುವುದರಿಂದ ಅಂಗವಿಕಲತೆ ಕಾಣಿಸಿಕೊಳ್ಳುವುದಿಲ್ಲ’ ಎಂದರು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಮಾತನಾಡಿ,‘ತಾಲ್ಲೂಕಿನ 283 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. 56,844 ಮಕ್ಕಳು ಲಸಿಕೆ ಪಡೆಯಲಿದ್ದಾರೆ. ಇದು ನಾಲ್ಕು ದಿನಗಳ ಕಾಲ ನಿರಂತರವಾಗಿ ನಡೆಯಲಿದೆ’ ಎಂದು ಹೇಳಿದರು.

ತುಂಗಭದ್ರಾ ಕಾಡಾದ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ತಹಶೀಲ್ದಾರ್ ವರ್ಣಿತ್ ನೆಗೀ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ರಫಿ, ಜಿಲ್ಲಾ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಬೋಲಾ, ವೈದ್ಯ ಡಾ.ಶರಣಪ್ಪ, ಬಿಜೆಪಿ ಮುಖಂಡರಾದ ಟಿ.ಆರ್.ರಾಯಬಾಗಿ ಹಾಗೂ ಶಿವು ಅರಿಕೇರಿ ಅವರು ಈ ವೇಳೆ
ಇದ್ದರು.

‘ಲಸಿಕೆಯಿಂದ ಆರೋಗ್ಯ ರಕ್ಷಣೆ’

ತಾವರಗೇರಾ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿಕ್ರಮ್ ರಾಯ್ಕರ್ ಭಾನುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು,‘ದೇಶದಲ್ಲಿ ಇಂದಿನಿಂದ ಫೆ.3 ರವರೆಗೆ ಕಾರ್ಯಕ್ರಮ ನಡೆಯಲಿದೆ. 5 ವರ್ಷದೊಳಗಿನ ಪ್ರತಿ ಮಗುವಿಗೂ ಲಸಿಕೆ ಹಾಕಿಸಬೇಕು. ಇದರಿಂದ ಆರೋಗ್ಯ ರಕ್ಷಣೆ ಆಗಲಿದೆ’ ಎಂದರು.

ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಒಟ್ಟು ಐದು ಉಪ ಕೇಂದ್ರಗಳಲ್ಲಿ, ಒಂದು ಸಂಚಾರಿ ತಂಡ, ಒಂದು ಮೊಬೈಲ್‌ ತಂಡ ರಚಿಸಲಾಗಿದೆ. ಒಟ್ಟು 4189 ಮಕ್ಕಳಿಗೆ 19 ಬೂತ್‍ಗಳಲ್ಲಿ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ’ ಎಂದು ಡಾ.ಕಾವೇರಿ ಶ್ಯಾವಿ ತಿಳಿಸಿದರು.

ಡಾ.ಕೃತಿ, ಡಾ. ಶ್ರೀಧರ ಡಾ.ಪ್ರಶಾಂತ ತಾಳಿಕೋಟಿ ಮತ್ತು ಪ.ಪಂ. ಸದಸ್ಯ ಚಂದ್ರಶೇಖರ ನಾಲವತ್ತವಾಡ, ಹಿರಿಯ ಆರೋಗ್ಯ ಸಹಾಯಕಿ ಶಂಕ್ರಮ್ಮ ಮತ್ತು ಸಿಬ್ಬಂದಿ, ಮಕ್ಕಳು ಹಾಗೂ ತಾಯಂದಿರು ಇದ್ದರು.

‘ಕಡ್ಡಾಯವಾಗಿ ಲಸಿಕೆ ಹಾಕಿಸಿ’

ಯಲಬುರ್ಗಾ: ಇಲ್ಲಿನ 14ನೇ ವಾರ್ಡ್‌ನ ಮೀನಾಕ್ಷಿ ಕಾಲೊನಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ನಡೆಯಿತು.

ಕಟ್ಟಡ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ಪೂಜಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು,‘ಚಿಕ್ಕ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿ ಸದಸ್ಯ ವಸಂತ ಭಾವಿಮನಿ ಮಾತನಾಡಿ,‘ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ಮಾಡಬೇಕು’ ಎಂದು ತಿಳಿಸಿದರು.

ಮುಖಂಡರಾದ ಕೋಟೇಶ ಭೂತೆ, ಶಿವು ಬಳಿಗಾರ, ಘನವಂತಪ್ಪ, ಶ್ರೀಕಾಂತ ಛಲವಾದಿ, ಪ್ರತಾಪ ಕಲಾಲ ಹಾಗೂ ಪಂಚಾಕ್ಷರಿ ಕಾಟ್ರಳ್ಳಿಮಠ ಇದ್ದರು.

‘ಅಭಿಯಾನ ಯಶಸ್ವಿಗೊಳಿಸಿ’

ಯಲಬುರ್ಗಾ: ‘ಪೋಲಿಯೊ ಲಸಿಕಾ ಕಾರ್ಯಕ್ರಮದ ಯಶಸ್ಸಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಹಿರಿದು. ಮಕ್ಕಳನ್ನು ಗುರುತಿಸಿ ಅವರಿಗೆ ತಪ್ಪದೆ ಲಸಿಕೆ ಹಾಕಬೇಕು’ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದೇವಪ್ಪ ವಾಲ್ಮೀಕಿ ಹೇಳಿದರು.

ತಾಲ್ಲೂಕಿನ ತುಮ್ಮರಗುದ್ದಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೊ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಜ.31 ರಿಂದ ಫೆ.3 ರವರೆಗೆ ನಡೆಯುವ ಈ ಕಾರ್ಯಕ್ರಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಆದರೂ ಹೆಚ್ಚಿನ ಪ್ರಚಾರ ಮಾಡಿ ಯಾವೊಂದು ಮಗುವೂ ಉಳಿಯದಂತೆ ನೋಡಿಕೊಳ್ಳಬೇಕು’ ಎಂದರು.

‘ಐದು ವರ್ಷದೊಳಗಿನ ಮಕ್ಕಳನ್ನು ಪಾಲಕರು ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪೋಲಿಯೊ ಹನಿ ಹಾಕಿಸಬೇಕು’ ಎಂದರು.

ಕಾರ್ಯಕರ್ತೆಯರಾದ ವಿಜಯಲಕ್ಷ್ಮಿ ಹಿರೇಮಠ, ಬಸಮ್ಮ ಛಾವಣಿ, ಸರಸ್ವತಿ ಈಳಿಗೇರ, ಶಾಂತಾದೇವಿ ಹಿರೇಮನಿ, ಸಾವಿತ್ರಿ ದೇವರ, ಮಂಜುಳಾ ಈಳಿಗೇರ, ಜಯಶ್ರೀ ಮುಸಗೇರಿ ಹಾಗೂ ಬಸಮ್ಮ ರೇವಡಿ ಇದ್ದರು.

‘ತಪ್ಪದೇ ಲಸಿಕೆ ಹಾಕಿಸಿ’

ಕುಕನೂರು: ‘ಪ್ರತಿಯೊಬ್ಬರೂ ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಬೇಕು’ ಎಂದು ಶಾಸಕ ಹಾಲಪ್ಪ ಆಚಾರ್ ಸಲಹೆ
ನೀಡಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದಲ್ಲಿ ಯಾವ ಮಗುವಿಗೂ ರೋಗ ಬರಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಿದೆ. ಲಾಭ ಪಡೆಯಬೇಕು’ ಎಂದರು.

ತಾಲ್ಲೂಕು ಆರೋಗ್ಯಧಿಕಾರಿ ಮಂಜುನಾಥ ಬ್ಯಾಳಣುಸಿ ಮಾತನಾಡಿದರು.

ಡಾ.ಸಿಮಾ ಮಾಬಳೆ, ಆರೋಗ್ಯಧಿಕಾರಿ ಜಂಭಯ್ಯ, ಗೀತಾ ಜಂಗ್ಲಿ, ಶಿವುಕುಮಾರ ನಾಗಲಾಪುರಮಠ, ಮಾರುತಿ ಗಾವರಾಳ ಹಾಗೂ ಚನ್ನಬಸಯ್ಯ ಸಗಣಾಚಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT