ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ ಚುನಾವಣೆ: ಪಂಚಾಯಿತಿಗಳಿಗೆ ಎಡತಾಕುವ ಮುಖಂಡರು

ಶಾಸಕರಿಗೆ ಕ್ಷೇತ್ರದ ಹೊಣೆ, ಸೋತವರು ಪ್ರಚಾರಕ್ಕೆ ಶ್ರಮ
Last Updated 30 ನವೆಂಬರ್ 2021, 5:47 IST
ಅಕ್ಷರ ಗಾತ್ರ

ಕೊಪ್ಪಳ: ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರ ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದು, ಚುನಾಯಿತ ಪ್ರತಿನಿಧಿಗಳನ್ನು ಎಡೆಬಿಡದೆ ಸಂಪರ್ಕಿಸುತ್ತಿರುವುದು ಕಂಡು ಬಂದಿದೆ.

ಜಿಲ್ಲೆಯ 153 ಗ್ರಾಮ ಪಂಚಾಯಿತಿ, ಕೊಪ್ಪಳ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ, ಯಲಬುರ್ಗಾ, ತಾವರಗೇರಾ, ಕುಕನೂರ ಪಟ್ಣಣ ಪಂಚಾಯಿತಿ ಸದಸ್ಯರು ಅರ್ಹರಾಗಿದ್ದಾರೆ.ಕಾರಟಗಿ ಪುರಸಭೆಗೆ ಚುನಾವಣೆ ನಡೆಯಬೇಕಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅವಧಿ ಮುಗಿದಿರುವುದರಿಂದ 200ಕ್ಕೂ ಹೆಚ್ಚು ಸದಸ್ಯರು ಮತದಾನದ ‘ಭಾಗ್ಯ’ದಿಂದ ವಂಚಿತರಾಗಿದ್ದಾರೆ.

ಅಖಾಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದೆ. ಅಭ್ಯರ್ಥಿಗಳು ಇಬ್ಬರು ರಾಯಚೂರು ಜಿಲ್ಲೆಯವರಾಗಿರುವುದು ವಿಶೇಷ. ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರಿಗೆ ಬೇಡಿಕೆ ಹೆಚ್ಚಾಗಿದೆ.

ಎರಡು ಪಕ್ಷಗಳ ಮುಖಂಡರು ಎಲ್ಲ ಪಂಚಾಯಿತಿಗಳಿಗೆ ಎಡತಾಕುತ್ತಿದ್ದು, ಸದಸ್ಯರ ಮನವೊಲಿಕೆಗೆ ಸತತ ಪ್ರಯತ್ನ ನಡೆಸಿದ್ದಾರೆ. ಕೆಲವು ಸದಸ್ಯರು ಪಕ್ಷಗಳ ಕಟ್ಟಾ ಬೆಂಬಗಲಿಗರಿದ್ದು, ಅವರನ್ನು ಒಲಿಸಿಕೊಳ್ಳಲು ಸತತ ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯಿಂದ ಸಿಂಧನೂರಿನ ಉದ್ಯಮಿ ವಿಶ್ವನಾಥ ಬನ್ನಟ್ಟಿ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಸಹೋದರನ ಸುಪುತ್ರ ಲಿಂಗಸಗೂರಿನ ಶರಣೇಗೌಡ ಬಯ್ಯಾಪುರ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ.

ಜಿಲ್ಲೆಯಲ್ಲಿ 6 ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ. ಹಾಲಿ ಶಾಸಕರಿಗೆ ಸದಸ್ಯರ ಜವಾಬ್ದಾರಿಯನ್ನು ವಹಿಸಲಾಗಿದ್ದು, ಸದಸ್ಯರ ನಿರಂತರ ಸಂಪರ್ಕ ಸಾಧಿಸಲು ಪ್ರಯತ್ನ ನಡೆಸಿದ್ದಾರೆ. ಬಿಜೆಪಿ ಮೂವರು ಶಾಸಕರು, ಕಾಂಗ್ರೆಸ್‌ನ ಇಬ್ಬರು ಶಾಸಕರು ಇದ್ದಾರೆ. ತಮ್ಮ ಶಾಸಕರು ಇಲ್ಲದ ಕಡೆ ಪರಾಜಿತ ಶಾಸಕ ಸ್ಥಾನದ ಆಕಾಂಕ್ಷಿಗಳು ತಮ್ಮ ಅಸ್ತಿತ್ವ ಸಾಬೀತುಪಡಿಸಲು ತೀವ್ರ ಜಿದ್ದಾಜಿದ್ದಿಯಿಂದ ಪ್ರಚಾರ ಕಣಕ್ಕೆ ಇಳಿದಿದ್ದು, ಅಭ್ಯರ್ಥಿಗಳಿಗಿಂತ ಹೆಚ್ಚಿನ ಶ್ರಮವನ್ನು ಹಾಕುತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾದಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ಶಿವರಾಜ ತಂಗಡಗಿ, ದೊಡ್ಡನಗೌಡ ಪಾಟೀಲ, ಅಮರೇಶ ಕರಡಿ ಪ್ರಚಾರದ ಮುಂಚೂಣಿಯಲ್ಲಿದ್ದಾರೆ. ಕೊಪ್ಪಳ-ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅವರಿಗೆ ಬಿಜೆಪಿ ಚುನಾವಣೆ ಉಸ್ತುವಾರಿ ನೀಡಿದೆ. ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಸಹೋದರನ ಪುತ್ರನೇ ಆಗಿರುವ ಶರಣೇಗೌಡರನ್ನು ಗೆಲ್ಲಿಸುವ ಜವಾಬ್ದಾರಿ ಕೂಡಾ ಇದೆ. ಎರಡು ಜಿಲ್ಲೆಗೆ ಹೆಚ್ಚು ಪರಿಚಯವಿರುವ ಬಸವರಾಜ ದಡೇಸಗೂರ, ಗಂಗಾವತಿಯ ಪರಣ್ಣ ಮುನವಳ್ಳಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ.

ಕೆಲವು ಕಡೆ ವಿಶಿಷ್ಟ ಸಮೀಕರಣ ಕೂಡಾ ನಡೆಯುತ್ತಿದ್ದು, ಎಂದಿನಂತೆ ಕ್ಷೇತ್ರದಲ್ಲಿ ಸಂಸದ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಹಿಂದುಳಿದ, ಮುಂದುವರಿದ ಎಂಬ ಸಿದ್ಧಸೂತ್ರದ ಚರ್ಚೆ ಕೂಡಾ ಜೋರಾಗಿ ನಡೆದಿದೆ. ಆದರೆ ಚುನಾವಣೆ ಸೀಮಿತ ಮತದಾರರನ್ನು ಹೊಂದಿರುವುದರಿಂದ ಪಂಚಾಯಿತಿ ಸದಸ್ಯರನ್ನು ಸರಳವಾಗಿ ಸಂಪರ್ಕಿಸಿ ಮತ ಪಡೆಯಬಹುದು ಎಂಬ ಲೆಕ್ಕಾಚಾರ ಎರಡು ಪಕ್ಷಗಳ ಮುಖಂಡರಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT