ಕುಷ್ಟಗಿ: ‘ಪಟ್ಟಣದ ನೈರ್ಮಲ್ಯ ವ್ಯವಸ್ಥೆಗೆ ಬದುಕನ್ನು ಮುಡುಪಾಗಿಡುವ ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸಬೇಕಿದೆ’ ಎಂದು ಪುರಸಭೆ ಸದಸ್ಯ ವಸಂತ ಮೇಲಿನಮನಿ ಹೇಳಿದರು.
ಇಲ್ಲಿ ಗುರುವಾರ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಟ್ಟಣದ ನಾಗರಿಕರು ಆರೋಗ್ಯದಿಂದ ಇರುವುದಕ್ಕೆ ಪೌರಕಾರ್ಮಿಕರ ತ್ಯಾಗವೇ ಕಾರಣ. ಮಾಲಿನ್ಯ ಉಂಟಾದರೆ ಅದನ್ನು ಪೌರಕಾರ್ಮಿಕರು ಸರಿಪಡಿಸಬೇಕು. ಸಾರ್ವಜನಿಕರ ಗಲೀಜನ್ನು ಪೌರಕಾರ್ಮಿಕರು ಸ್ವಚ್ಛಗೊಳಿಸುತ್ತಾರೆ. ಹೀಗಿರುವಾಗ ಅವರೂ ನಮ್ಮಂತೆ ಮನುಷ್ಯರು ಎಂದು ಪರಿಗಣಿಸಿ, ಅವರ ಕರ್ತವ್ಯ ಪ್ರಜ್ಞೆಯನ್ನು ಸ್ಮರಿಸಿದರೆ ದಿನಾಚರಣೆ ಅರ್ಥಪೂರ್ಣವಾಗುತ್ತದೆ’ ಎಂದರು.
‘ಪೌರಕಾರ್ಮಿಕರು ಸ್ವಂತ ಮನೆ ಇಲ್ಲದೆ ಬದುಕು ಸವೆಸುತ್ತಿದ್ದಾರೆ. ಅವರ ಕುಟುಂಬದವರಿಗೆ ವಸತಿ ನಿವೇಶನ, ಸೂರು ಸೇರಿದಂತೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸುತ್ತೇವೆ ಎಂಬುದನ್ನು ಪ್ರತಿವರ್ಷದ ಪೌರಕಾರ್ಮಿಕ ದಿನಾಚರಣೆಯಲ್ಲಿ ಹೇಳಲಾಗುತ್ತಿದೆ. ಆದರೆ ಭರವಸೆ ಭಾಷಣಕ್ಕೆ ಸೀಮಿತವಾಗಿದೆ. ಈ ವಿಷಯದಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮಕ್ಕೆ ಮುಂದಾಗಬೇಕು’ ಎಂದರು.
ಸದಸ್ಯ ಮೈನುದ್ದೀನ್ ಮುಲ್ಲಾ ಮಾತನಾಡಿ, ‘ಇಲ್ಲಿಯ ಪುರಸಭೆಯ ಪೌರಕಾರ್ಮಿಕರಿಗೆ ನಿವೇಶನ ಒದಗಿಸಿಕೊಡಲು ಈಗಾಗಲೇ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಬಳಿ ನಿಯೋಗ ಕೊಂಡೊಯ್ದು ಪ್ರಸ್ತಾವನೆಗೆ ಅನುಮೋದನೆ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು’ ಎಂದು ಹೇಳಿದರು.
ಮುಖ್ಯಾಧಿಕಾರಿ ಡಿ.ಎನ್.ಧರಣೇಂದ್ರಕುಮಾರ ಮಾತನಾಡಿ, ‘ಪೌರಕಾರ್ಮಿಕರು ಪುರಸಭೆಯ ಜೀವಾಳವಾಗಿದ್ದು, ಅವರಿಗೆ ಸರ್ಕಾರದ ಎಲ್ಲ ರೀತಿಯ ಸೌಲಭ್ಯಗಳು ದೊರೆಯಬೇಕು. ನಿವೇಶನ, ಮನೆ ಒದಗಿಸಲು ಜಿಲ್ಲಾ ಅಭಿವೃದ್ಧಿ ಕೋಶದ ಮೂಲಕ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು’ ಎಂದು ಭರವಸೆ ನೀಡಿದರು.
ಪೌರಸೇವಾ ನೌಕರರ ಶಾಖಾ ಸಂಘದ ಅಧ್ಯಕ್ಷ ಚಂದ್ರಶೇಖರ ಮ್ಯಾಗಳಮನಿ, ಶಾಂತಪ್ಪ ಸೇರಿದಂತೆ ಇತರೆ ಸಿಬ್ಬಂದಿ, ಸದಸ್ಯರು ಹಾಜರಿದ್ದರು. ಪುರಸಭೆ ವತಿಯಿಂದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಶರಣಪ್ಪ ವಡಗೇರಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.