ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಾಂತಗೊಂಡ ಸಮಾಜಕ್ಕೆ ವಚನ ಅವಶ್ಯ: ಡಾ.ಈಶ್ವರ ಮಂಟೂರು

ವಚನ ದರ್ಶನ ಆಧ್ಯಾತ್ಮಕ ಪ್ರವಚನ ಕಾರ್ಯಕ್ರಮ
Last Updated 20 ಏಪ್ರಿಲ್ 2019, 14:25 IST
ಅಕ್ಷರ ಗಾತ್ರ

ಕೊಪ್ಪಳ: ಮಾನವನ ಗುಣಗಳು ಕಿಲುಬುಗಟ್ಟಿ, ಅಶಾಂತಿ ತಾಂಡವವಾಡುತ್ತಿರುವ ಈ ದಿನಗಳಲ್ಲಿ ವಚನಗಳು ತುಂಬಾ ಅವಶ್ಯಎಂದು ಜಮಖಂಡಿ ತಾಲ್ಲೂಕಿನ ಹೂನ್ನೂರು-ಮಧುರಬಂಡಿ ಬಸವಜ್ಞಾನ ಗುರುಕುಲದ ಡಾ.ಈಶ್ವರ ಮಂಟೂರು ಹೇಳಿದರು.

ನಗರದ ಸಾರ್ವಜನಿಕ ಮೈದಾನದಲ್ಲಿ ಶುಕ್ರವಾರ ಪ್ರವಚನ ಸೇವಾ ಸಮಿತಿಯಿಂದ ಬಸವ ಜಯಂತಿ ಅಂಗವಾಗಿ ನಡೆದ ವಚನ ದರ್ಶನ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.

ಅಂತರಂಗದಲ್ಲಿ ಅರಿವಿನ ಅರಸನಾಗಿ ಬಂದವನು ವಿಶ್ವಗುರು ಬಸವಣ್ಣ. ಬಸವಣ್ಣನನ್ನು ಮರೆತರೆ ನಮಗೆ ಉಳಿಗಾಲವಿಲ್ಲ. ಬಸವಣ್ಣನನ್ನು, ಅಲ್ಲಮಪ್ರಭುವನ್ನು ಒಂದು ಕ್ಷಣ ಅಲುಗಾಡಿಸಿದವರು ಅಕ್ಕಮಹಾದೇವಿ. ಅವರು ಕನ್ನಡ ಇತಿಹಾಸದ ಬೆಳಕಿನ ಸಂಪುಟ. ವಚನ ವನದ ಕೋಗಿಲೆ ಆಗಿದ್ದಾರೆ. ಇಂಗ್ಲಿಷ್ ಭಾಷೆ ಜಗತ್ತನ್ನಾವರಿಸುವ ಮುನ್ನ ಕನ್ನಡದಲ್ಲಿ ಏಕಕಾಲಕ್ಕೆ 34 ಕವಯತ್ರಿಯರಿದ್ದರೂ ಎಂದರೆ ಈ ಭಾಷೆಗೆ ಅದೆಂತಹ ಶಕ್ತಿಇತ್ತು ಎಂಬುವುದನ್ನು ಅವಲೋಕಿಸಬಹುದು ಎಂದರು.

ವಿಶ್ವಗುರು ಬಸವೇಶ್ವರ ಟ್ರಸ್ಟ್‌ನ ಅಧ್ಯಕ್ಷ ಎಂ.ಬಸವರಾಜಪ್ಪ ಮಾತನಾಡಿ, ಮನುಷ್ಯನಿಗೆ ಮಾತ್ರ ಬೇರಾವ ಜೀವಿಗೂ ಇರದ ವಿದ್ಯೆ, ಬುದ್ದಿ, ಜ್ಞಾನ ಇದೆ. ವಚನ ಸಾಹಿತ್ಯ ಕೇವಲ ಕಲ್ಪನೆಯಲ್ಲ. ಅದು ಸಾಕ್ಷಾತ್ಕಾರದಿಂದ ರಚಿತಗೊಂಡಿದೆ. ಇಂತಹ ವಚನಗಳನ್ನು ಬರೆದ ಮಹನೀಯರನ್ನು ನೆನೆಯದೇ ಇರಲು ಸಾಧ್ಯವಿಲ್ಲ ಎಂದರು.

ಅಕ್ಕಮಹಾದೇವಿ ಅವರಿಗೆ ಸಾಟಿಯಾದವರು ಯಾರೂ ಇಲ್ಲ. ಇವರೆಗೂ ಅಂಥವರ ಜನನವೇ ಆಗಿಲ್ಲ. ಇಂದು ನಾವು ಧನದಾಹಿಗಳಾಗಿದ್ದೇವೆ. ಭಗವಂತನನ್ನು ನೆನೆಯಲೂ ಸಹ ನಮಗೆ ಸಮಯವಿಲ್ಲ. 2014 ರಲ್ಲಿ ಎನ್‍ಡಿಎ ಸರ್ಕಾರದ ಅವಧಿಯಲ್ಲಿ 848 ಅಶ್ಲೀಲ ವೆಬ್‍ಸೈಟ್‍ಗಳನ್ನು ರದ್ದುಗೊಳಿಸಲಾಗಿತ್ತು. ಒಂದು ಪಕ್ಷ ಅದಕ್ಕೆ ವಿರೋಧ ವ್ಯಕ್ತಪಡಿಸಿ ಅವುಗಳನ್ನು ಪುನಃ ಚಾಲನೆಗೊಳಿಸುವಲ್ಲಿ ಸಶಕ್ತವಾಯಿತು ಎನ್ನುವುದು ವಿಪರ್ಯಾಸ.

ಇಂದು ಸಮಾಜದಲ್ಲಿ ನೈತಿಕತೆ ಎನ್ನುವುದೇ ಉಳಿದಿಲ್ಲ. ವಚನಗಳನ್ನು ಅಭ್ಯಸಿಸುವ ಮೂಲಕ ನೈತಿಕತೆ ಬೆಳೆಸಬಹುದಾಗಿದೆ. ಆ ಮೂಲಕ ಜನರ ಬದುಕಿನ ಶೈಲಿಯನ್ನು ಉನ್ನತಗೊಳಿಸಬಹುದಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಅಂಗಡಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖಂಡರಾದ ಶಾಂತಣ್ಣ ಮುದಗಲ್, ಚಂದ್ರಶೇಖರ ಕವಲೂರ, ಬಸವರಾಜ ಬಳ್ಳೊಳ್ಳಿ, ನಿರ್ಮಲಾ ಬಳ್ಳೊಳ್ಳಿ, ಡಾ.ಪಂಪಾಪತಿ ಹೊನ್ನಳ್ಳಿ, ಡಾ.ಬಸವಯ್ಯ ಸಸಿಮಠ, ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಮಹಾಂತೇಶ ಮಲ್ಲನಗೌಡರ, ಸಾಹೇಬಗೌಡ ಹಳೇಮನಿ, ಬಾಳಪ್ಪ ಬಾರಕೇರ, ಅರುಣಾ ನರೇಂದ್ರ, ಗೀತಾ ಪಾಟೀಲ, ಕೋಮಲಾ ಕುದರಿಮೋತಿ, ಮಮತಾ ಪಾವಲಿಶೆಟ್ಟರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT