ಕನಕಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮಸ್ಥರು ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಲಕ್ಷ್ಮೀ ಪೂಜೆ ಮಾಡಲು ಬೇಕಾದ ಹೂವು, ಹಣ್ಣು, ಇತರೆ ಪೂಜಾ ಸಾಮಾಗ್ರಿಗಳನ್ನು ಭಾನುವಾರ ಭರ್ಜರಿಯಾಗಿ ಖರೀದಿಸಿದರು.
ರಾಜಬೀದಿ, ವಾಲ್ಮೀಕಿ ವೃತ್ತ, ಬಸ್ ನಿಲ್ದಾಣ ಪರಿಸರದಲ್ಲಿ ವಿವಿಧ ನಮೂನೆಯ ಹಣ್ಣು, ಹೂವಿನ ಹಾರ, ಅಡಿಕೆ ಹೂವು, ಚೆಂಡು ಹೂವು, ಮಾವಿನಕಾಯಿ ಎಲೆ, ಇತರೆ ಸಾಮಾಗ್ರಿಗಳು ದುಬಾರಿ ಇದ್ದರೂ ವರ್ತಕರೊಂದಿಗೆ ಚೌಕಸಿ ಮಾಡಿ ಖರೀದಿಸಿದರು.
ಲಕ್ಷ್ಮೀ ಪೂಜೆ ನಂತರ ಟ್ಯ್ರಾಕ್ಟರ್, ಲಾರಿ, ಮಿನಿ ಬಸ್, ಕಾರು, ದ್ವಿ ಚಕ್ರವಾಹನ ವಾಹನಗಳ ಮಾಲೀಕರು, ಚಾಲಕರು ತಮ್ಮ ವಾಹನಗಳನ್ನು ತಳಿರು, ತೋರಣ, ಹೂವು, ಬಾಳೆಗೊನೆಗಳಿಂದ ಅಲಂಕಾರಗೊಳಿಸಿ ಕನಕಾಚಲಪತಿ ದೇವಸ್ಥಾನ ಸೇರಿದಂತೆ ಪಟ್ಟಣದ ಇತರೆ ದೇಗುಲಗಳಿಗೆ ತಂದು ಪೂಜೆ ಸಲ್ಲಿಸಿದರು.
ರಾಜಬೀದಿ, ಎಪಿಎಂಸಿ ಗಂಜ್, ಎಪಿಎಂಸಿ ಮಳಿಗೆ, ನವಲಿ, ನೀರ್ಲೂಟಿ ಗ್ರಾಮಗಳ ರಸ್ತೆ, ವಾಲ್ಮೀಕಿ ವೃತ್ತ, ತಾವರಗೇರಾ ರಸ್ತೆ, ರಾಜಬೀದಿಸ ಸೇರಿದಂತೆ ಪಟ್ಟಣದ ಅಂಗಡಿ, ಮುಂಗಟ್ಟುಗಳಲ್ಲಿ ಲಕ್ಷ್ಮೀ ಪೂಜೆಯ ಅಬ್ಬರ ಜೋರಾಗಿತ್ತು.
ಮಕ್ಕಳು, ಯುವತಿಯರು, ಮಹಿಳೆಯರು ಹೊಸ ಬಟ್ಟೆ, ಬೆಲೆ ಬಾಳುವ ಬಂಗಾರದ ಆಭರಣ ಧರಿಸಿ, ತಮ್ಮ ಅಂಗಡಿಗಳಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮನೆ, ಅಂಗಡಿಗಳಲ್ಲಿ ಎಣ್ಣೆ ದೀಪ, ಆಲಂಕಾರಿಕ ಆಕಾಶಪುಟ್ಟಿಗಳು ಗಮನ ಸೆಳೆಯಿತು. ವರ್ತಕರು ತಮ್ಮ ಅಂಗಡಿಗಳಲ್ಲಿ ದುಡಿಯುವ ಶ್ರಮಿಕ ವರ್ಗದವರನ್ನು ಮನೆಗೆ ಕರೆಯಿಸಿ ಸಿಹಿ ಊಟ ಮಾಡಿಸಿ, ಹೊಸ ಬಟ್ಟೆ, ಖುಷಿ ರೂಪದಲ್ಲಿ ಒಂದಿಷ್ಟು ನಗದು ಹಣವನ್ನು ಉಡುಗೊರೆಯಾಗಿ ನೀಡಿದರು. ಲಕ್ಷ್ಮೀ ಪೂಜೆಗೆ ಬಂದ ಅತಿಥಿಗಳಿಗೆ ಅಂಗಡಿಕಾರರು ಕಲ್ಲುಸಕ್ಕರೆ, ಬಾಳೆಹಣ್ಣು ಇತರೆ ಸಿಹಿ ತಿನ್ನಿಸು ನೀಡಿ ಗೌರವಿಸಿದರು.
ಕೆಲ ಕಡೆ ವ್ಯಾಪಾರ ಜೋರಾಗಿ ನಡೆದರೆ, ಅಲ್ಲಲ್ಲಿ ಮಂದಗತಿಯಲ್ಲಿ ಸಾಗಿದ್ದು ಕಂಡು ಬಂತು. ಪಟ್ಟಣದ ಪ್ರಮುಖ ಸ್ಥಳದಲ್ಲಿ ಜನಸಂದಣಿ ತುಂಬ ಇತ್ತು ವಾಹನ ಸವಾರರು ಸಂಚಾರಕ್ಕೆ ಹರಸಾಹಸ ಪಡಬೇಕಾಯಿತು.
ಪಟಾಕಿ ನಿಷೇದ: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಪಟಾಕಿ ಸದ್ದು ಮೆರಗು ನೀಡುತ್ತದೆ, ಇಲ್ಲಿನ ವ್ಯಾಪಾರಿಗಳು ಸ್ಪರ್ಧೆ ಎನ್ನುವಂತೆ ತಮ್ಮ ತಮ್ಮ ಅಂಗಡಿ, ಮುಂಗಟ್ಟುಗಳ ಮುಂದೆ ವಿವಿಧ ನಮೂನೆಯ ಪಟಾಕಿಗಳನ್ನು ಸಿಡಿಸಿ ಗಮನ ಸೆಳೆಯುತ್ತಾರೆ ಆದರೆ ಈ ವರ್ಷ ಪಟಾಕಿ ಮಾರಾಟಕ್ಕೆ ನಿಷೇದ ಹೇರಿದೆ.
ತಾಲ್ಲೂಕು ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪಟಾಕಿ ಮಾರಾಟ ಹಾಗೂ ಸಿಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಜಾಥ ನಡೆಸಿ ಜಾಗೃತಿ ಮೂಡಿಸಿದ್ದಾರೆ. ಹೀಗಾಗಿ ಅಂಗಡಿಕಾರರು ಪಟಾಕಿ ಮಾರಾಟಕ್ಕೆ ಹಿಂದೇಟು ಹಾಕಿರುವುದು ಕಂಡು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.