ಎಲ್ಲರೂ ಸೌಹಾರ್ದದಿಂದ ಹಬ್ಬ ಆಚರಿಸುವಂತೆ ಈಗಾಗಲೇ ಮನವಿ ಮಾಡಲಾಗಿದೆ. ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲವೂ ಸುಗಮವಾಗಿ ಸಾಗಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ.
ಡಾ. ರಾಮ್ ಎಲ್. ಅರಸಿದ್ಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪೊಲೀಸ್ ಬಂದೋಬಸ್ತ್; ಹೋಂಗಾರ್ಡ್ ಬಳಕೆ
ಜಿಲ್ಲೆಯಾದ್ಯಂತ ಪ್ರತಿವರ್ಷ ಸಾಮಾನ್ಯವಾಗಿ 1400 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಈ ಬಾರಿ ಇದರ ಸಂಖ್ಯೆ 1500 ದಾಟಲಿದೆ. ಅದಕ್ಕೆ ತಕ್ಕಂತೆ ಜಿಲ್ಲಾ ಪೊಲೀಸ್ ಆಡಳಿತ 500 ಹೋಂ ಗಾರ್ಡ್ ನಾಲ್ಕು ಕೆಎಸ್‌ಆರ್‌ಪಿ 8 ಡಿಎಆರ್ ಗಂಗಾವತಿ ಹಾಗೂ ಕೊಪ್ಪಳದಲ್ಲಿ 20 ಸೆಕ್ಟರ್ ಅಧಿಕಾರಿಗಳು ಸೇರಿದಂತೆ ಹಲವು ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಕಳೆದ ವರ್ಷ ಗಂಗಾವತಿಯಲ್ಲಿ ಹಿಂದೂ ಮಹಾಮಂಡಳಿಯ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಜಾಮೀಯಾ ಮಸೀದಿ ಬಾಗಿಲಿಗೆ ಆರತಿ ಬೆಳಗಿ ಹಿಂದೂ ದೇವರ ಹೆಸರಲ್ಲಿ ಘೋಷಣೆ ಕೂಗಲಾಗಿತ್ತು. ಇದು ಪ್ರಕರಣ ದಾಖಲಾಗಿ ಮೂವರು ಪೊಲೀಸರು ಅಮಾನತಾಗಿದ್ದರು. ಆದ್ದರಿಂದ ಈ ಬಾರಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ತಿಳಿಸಿದ್ದಾರೆ. ‘ಗಂಗಾವತಿಯಲ್ಲಿ ಮೂವರು ಕೊಪ್ಪಳದಲ್ಲಿ ಒಬ್ಬರನ್ನು ಗಡಿಪಾರು ಮಾಡಲಾಗಿದೆ. ಒಟ್ಟು 918 ಜನ ರೌಡಿಶೀಟರ್‌ಗಳಿದ್ದು ಎಲ್ಲರ ಮೇಲೂ ನಿಗಾ ವಹಿಸಲಾಗಿದೆ. ಅವರಿಂದ ₹1 ಲಕ್ಷ ಮೊತ್ತದ ಸುರಕ್ಷತಾ ಬಾಂಡ್ ಬರೆಯಿಸಿಕೊಳ್ಳಲಾಗಿದೆ. ಕೋಮು ಸೌಹಾರ್ದಕ್ಕೆ ಧಕ್ಕೆ ತರುವ 44 ರೌಡಿಗಳಿದ್ದಾರೆ’ ಎಂದು ಅವರು ಹೇಳಿದರು. ಗಂಗಾವತಿಯಲ್ಲಿ ಈಗಾಗಲೇ ನಿತ್ಯ ಕರ್ತವ್ಯದಲ್ಲಿ ಇರುವವರನ್ನು ಹೊರತುಪಡಿಸಿ ಇಬ್ಬರು ಡಿವೈಎಸ್‌ಪಿ ಇಬ್ಬರು ಇನ್‌ಸ್ಟೆಕ್ಟರ್‌ಗಳು ಪಿಎಸ್‌ಐಗಳನ್ನು ನೇಮಿಸಲಾಗಿದೆ. ಹೋಂ ಗಾರ್ಡ್ ಸೇರಿ ಒಟ್ಟು 800 ಭದ್ರತಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.