ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಬಿಸ್ ಲಸಿಕೆ ಸಂಗ್ರಹಕ್ಕೆ ಆದ್ಯತೆ ನೀಡಿ

ರೇಬಿಸ್ ನಿಯಂತ್ರಣ : ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Last Updated 28 ಸೆಪ್ಟೆಂಬರ್ 2022, 16:02 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ರೇಬಿಸ್ ಲಸಿಕೆ (ನಾಯಿ ಕಡಿತದ ಔಷಧಗಳ) ಸಂಗ್ರಹಕ್ಕೆ ಆದ್ಯತೆ ಕೊಡಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ರೇಬಿಸ್ ನಿಯಂತ್ರಣ ಘಟಕದ ವತಿಯಿಂದ ಬುಧವಾರ ನಡೆದ ರೇಬಿಸ್ ನಿಯಂತ್ರಣದ ಜಿಲ್ಲಾಮಟ್ಟದ ಸಮನ್ವಯ ಸಮಿತಿಯ ಮೊದಲ ತ್ರೈಮಾಸಿಕ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿ ‘ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾಂಸ ಮಾರಾಟ ಮಾಡುವ ಅಂಗಡಿಗಳ ಘನ ತ್ಯಾಜ್ಯವನ್ನು ನಾಯಿಗಳಿಗೆ ಸಿಗದಂತೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಕಸ ವಿಲೇವಾರಿ ವಾಹನಗಳಲ್ಲಿ ಧ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ರೇಬಿಸ್ ಮತ್ತು ಖಾಯಿಲೆ ಹರಡದಂತೆ ನಿಯಂತ್ರಣಕ್ಕೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

‘ತಾಲ್ಲೂಕು ವೈದ್ಯಾಧಿಕಾರಿಗಳು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಕಂಡುಬರುವ ನಾಯಿ ಕಡಿತದ ಮಾಹಿತಿ ಮತ್ತು ನಾಯಿ ಕಡಿತದ ಪ್ರಕರಣಗಳಿಗೆ ಲಸಿಕೆ ನೀಡಿರುವ ಬಗ್ಗೆ ಮಾಹಿತಿಯನ್ನು ತ್ವರಿತವಾಗಿ ನೀಡಬೇಕು. ಪ್ರತಿ ತಾಲೂಕು ಹಂತದಲ್ಲಿ ಎ.ಆರ್.ಸಿ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಲಕನಂದಾ ಡಿ. ಮಳಗಿ, ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರ ಜಿಲ್ಲಾ ಶಸ್ತ್ರ ಚಿಕಿತ್ಸಕ ಈಶ್ವರ ಸವಡಿ, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ್ ಇದ್ದರು.

ಜಾಗೃತಿ ಮೂಡಿಸಿ: ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರವಾಗಿದ್ದು, ತಂಬಾಕು ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸುಂದರೇಶ ಬಾಬು ಹೇಳಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಅಂಗವಾಗಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ‘ಎಲ್ಲಾ ತಾಲ್ಲೂಕು ಮಟ್ಟದ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ತಂಬಾಕು ವ್ಯಸನ ಮುಕ್ತ ಕೇಂದ್ರಗಳನ್ನು ಸ್ಥಾಪಿಸಬೇಕು. ತಾಲ್ಲೂಕು ಮಟ್ಟದಲ್ಲಿ ತನಿಖಾ ದಳದ ಪ್ರಗತಿ ಪರಿಶೀಲನಾ ಸಭೆ ಮಾಡಬೇಕು.

‘ಎಲ್ಲಾ ಕಾಲೇಜುಗಳಲ್ಲಿ ಆ್ಯಂಟಿ ಡ್ರಗ್ಸ್ ಸಮಿತಿ ರಚನೆಯಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಕುರಿತು ಜನಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು. ಜಿಲ್ಲಾ ಆಹಾರ ಅಂಕಿತ ಅಧಿಕಾರಿ ಡಾ. ಟಿ.ಲಿಂಗರಾಜ್, ಜಿಲ್ಲಾ ಅಬಕಾರಿ ಅಧಿಕಾರಿ ಸಲೀಂ ಇದ್ದರು.

ತಂಬಾಕು ಮಾರಾಟ ಮತ್ತು ಸೇವನೆ ಕುರಿತು ಇರುವ ಕಾನೂನುಗಳು, ದಂಡ ಮತ್ತು ಶಿಕ್ಷೆಗಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿದಾಗ ಮಾತ್ರ ಪರಿಣಾಮಕಾರಿ ಬದಲಾವಣೆ ಸಾಧ್ಯ.
ದೇವೇಂದ್ರ ಪಂಡಿತ್
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT