ಕೊಪ್ಪಳ: ‘ಸಾಣಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ವಿರೂಪಾಪುರಗಡ್ಡಿಯ ಟ್ರೀ ಪಾರ್ಕ್ ವ್ಯಾಪ್ತಿಗೆ ಸೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಾ ಚತುರ್ವೇದಿ ಹೇಳಿದರು.
ವಿರೂಪಾಪುರಗಡ್ಡಿಯ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ ಸಮಿತಿ ರಚನೆ ಹಾಗೂ ಲೋಕಾರ್ಪಣೆ ಮಾಡುವ ಕುರಿತು ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ‘ವಿರೂಪಾಪುರಗಡ್ಡಿ ತುಂಗಭದ್ರಾ ನದಿಯಿಂದ ಸುತ್ತುವರಿಯಲ್ಲಿ ನಡುಗಡ್ಡೆ ಪ್ರದೇಶವಾಗಿದ್ದು, ಸುತ್ತಲೂ ಅನೇಕ ಐತಿಹಾಸಿಕ, ಪೌರಾಣಿಕ ಸ್ಮಾರಕಗಳು ಇರುವುದರಿಂದ ಇಲ್ಲಿಗೆ ಹಲವಾರು ಸ್ಥಳೀಯ ಮತ್ತು ವಿದೇಶಿ ಪ್ರವಾಸಿಗರು ಬರುತ್ತಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲಾಗಿದೆ‘ ಎಂದು ತಿಳಿಸಿದರು.
‘ಈಗಾಗಲೇ ಟ್ರೀ ಪಾರ್ಕ್ ಸುತ್ತಲೂ ಚೈನ್‌ಲಿಂಕ್, ಮೆಸ್ ಫೆನ್ಸಿಂಗ್, ಸ್ವಾಗತ ಗೋಪುರ, ಟಿಕೆಟ್ ಕೌಂಟರ್, ಅರಣ್ಯ ಮಾಹಿತಿ ಕೇಂದ್ರ, ಪಾರಾಮೋಲಾ, ಶೌಚಾಲಯ, ವಾಕಿಂಗ್ ಟ್ರ್ಯಾಕ್ ಮತ್ತಿತರ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು, ಟ್ರೀ ಪಾರ್ಕ್ ಶೀಘ್ರದಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು’ ಎಂದರು.
‘ವಿರೂಪಾಪುರಗಡ್ಡಿಗೆ ಹೊಂದಿಕೊಂಡಿರುವ ಸಾಣಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶದವನ್ನು ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನದ ವ್ಯಾಪ್ತಿಗೆ ಸೇರಿಸಿ, ಅಲ್ಲಿ ಕೊರೆಕಲ್ ರೈಡ್ ಪ್ರಾರಂಭಿಸುವ ಮೂಲಕ ಪ್ರವಾಸಿಗರ ಗಮನ ಸೆಳೆಯಲಾಗುವುದು. ಇದರ ಜೊತೆಗೆ ಈ ಪ್ರದೇಶದಲ್ಲಿ ಅಗತ್ಯ ಪಾರ್ಕಿಂಗ್, ಕ್ಯಾಂಟೀನ್ ಸೌಲಭ್ಯ ಕಲ್ಪಿಸಲಾಗುವುದು. ಕೆರೆ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಮಗ್ರ ಕ್ರಿಯಾ ಯೋಜನೆ ತಯಾರಿಸಲು ಗಂಗಾವತಿ ವಲಯ ಅರಣ್ಯ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಸೂಚನೆ ನೀಡಿದರು.
ಗಂಗಾವತಿ ವಲಯ ಅರಣ್ಯಾಧಿಕಾರಿ ಸುಭಾಸಚಂದ್ರ ನಾಯಕ ಮಾತನಾಡಿ ‘ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಹೊಂದಿಕೊಂಡಿರುವ ಸಾಣಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶದ ಸರ್ವೆ ನಂ.1 ಮತ್ತು 13ರಲ್ಲಿ ಕೆರೆಯು ಭಾಗಶಃ ಪ್ರದೇಶವು ಸಾಣಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶ ಬ್ಲಾಕ್-2ಗೆ ಸೇರಿದೆ. ಸಾಣಾಪುರ ಗ್ರಾಮದಲ್ಲಿನ ಮೀನುಗಾರಿಕೆ ಕುಟುಂಬಗಳು ಕೆರೆಯಲ್ಲಿ ಸಾಂಪ್ರದಾಯಿಕವಾಗಿ ಹರಿಗೋಲು, ನಾವಿಕರು ಪ್ರವಾಸಿಗರನ್ನು ಕರೆದುಕೊಂಡು ಹರಿಗೋಲಿನಲ್ಲಿ ಸುತ್ತಾಡಿಸಿ ಕೆರೆಯ ಪರಿವೀಕ್ಷಣೆ ಮಾಡಿಸುತ್ತಿದ್ದರು. ಈ ಕುರಿತಾಗಿ ಹರಿಗೋಲು ನಾವಿಕರು ಮುಂದೆಯೂ ಈ ಚಟುವಟಿಕೆಯನ್ನು ತಮ್ಮ ಉಪ ಜೀವನಕ್ಕಾಗಿ ಮುಂದುವರೆಸಿಕೊಂಡು ಹೋಗಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ’ ಎಂದು ಗಮನಕ್ಕೆ ತಂದರು.
ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುಸೇನ್ ಬಸಿಯಾ, ಕೊಪ್ಪಳ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ತಮ್ಮಯ್ಯ ಎನ್., ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಜಿ.ಕಲಾ, ಶಾಲಾ ಶಿಕ್ಷಣ ಇಲಾಖೆಯ ಅಂಜನಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆಯ ತುಳಸಿ ಬೆಲ್ಲದ್, ಅರಣ್ಯ ಇಲಾಖೆಯ ಶಮಶುನ್ನಿಸ್ಸಾ, ನಿಸ್ಸಾರ ಅಹ್ಮದ್, ಚಂದ್ರಶೇಖರ ರಾಥೋಡ್, ಮುತ್ತಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.