ಶನಿವಾರ, ಸೆಪ್ಟೆಂಬರ್ 24, 2022
21 °C
ಹೆಸರು ಕಾಳು ಬೆಂಬಲ ಬೆಲೆ ಯೋಜನೆ: ಕಾರ್ಯಪಡೆ ಸಮಿತಿ ಸಭೆ

ಖರೀದಿ ಕೇಂದ್ರ ತೆರೆಯಲು ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಜಿಲ್ಲೆಯಲ್ಲಿ ಹೆಸರು ಕಾಳು ಖರೀದಿ ಕೇಂದ್ರಗಳನ್ನು ತೆರೆಯಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ತೀರ್ಮಾನಿಸಲಾಗಿದೆ’ ಎಂದು ಜಿಲ್ಲಾ ಕಾರ್ಯಪಡೆ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ತಿಳಿಸಿದರು.

ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಕೇಂದ್ರಗಳ ತೆರೆಯುವ ಕುರಿತಂತೆ ಜಿಲ್ಲಾ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ ವತಿಯಿಂದ (ಎಪಿಎಂಸಿ) ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಕಾರ್ಯಪಡೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಹೆಸರು ಕಾಳು ಈಗ ಕಾಟಾವಿನ ಹಂತದಲ್ಲಿದ್ದು, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿಸಬೇಕು. ಬಿತ್ತನೆ ಕ್ಷೇತ್ರವನ್ನು ಆಧಾರವಾಗಿಟ್ಟುಕೊಂಡು ಇಳುವರಿ ಪ್ರಮಾಣ ಅಂದಾಜಿಸಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಪ್ರಸ್ತಾವ ಸಲ್ಲಿಸಬೇಕು.  ಖರೀದಿ ಕೇಂದ್ರಗಳ ಬಗ್ಗೆ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಿ ಬೆಂಬಲಬೆಲೆ ಯೋಜನೆಯ ಲಾಭ ಸಿಗುವ ನಿಟ್ಟಿನಲ್ಲಿ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.

ಎಪಿಎಂಸಿ ಸಮಿತಿಯ ಸಹಾಯಕ ನಿರ್ದೇಶಕ ಎಸ್.ಶ್ಯಾಮ್ ಮಾತನಾಡಿ ‘ಕೃಷಿ ಇಲಾಖೆಯ ಮಾಹಿತಿ ಆಧಾರದ ಮೇಲೆ ಪ್ರಸ್ತುತ ಜಿಲ್ಲೆಯಲ್ಲಿ 21,307 ಹೆಕ್ಟೇರ್ ಪ್ರದೇಶದಲ್ಲಿ ಹೆಸರುಕಾಳು ಬಿತ್ತನೆ ಮಾಡಲಾಗಿದೆ. ಒಂದು ಹೆಕ್ಟೇರ್‌ಗೆ ಅಂದಾಜು 8 ಕ್ವಿಂಟಲ್‌ನಂತೆ ಸುಮಾರು 1 ಲಕ್ಷ 80 ಸಾವಿರ ಕ್ವಿಂಟಲ್‌ ಇಳುವರಿ ಬರುವ ನಿರೀಕ್ಷೆಯಿದೆ. ಪ್ರಸ್ತುತ ಹೆಸರು ಕಾಳಿನ ದರ ₹6,400 ರಿಂದ ₹7,400 ಇದೆ’ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕೊಪ್ಪಳ, ಹಿರೇಸಿಂಧೋಗಿ, ತಾವರಗೇರಾ, ಹನುಮಸಾಗರ, ಕುಕನೂರು ಹಾಗೂ ಯಲಬುರ್ಗಾ ಟಿಎಪಿಎಂಸಿಗಳಲ್ಲಿ ಕೇಂದ್ರಗಳನ್ನು ಪ್ರಾರಂಭಿಸಬೇಕಿದೆ ಎಂದರು.

ಉಪ ವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ, ಆಹಾರ ಮತ್ತು ನಾಗರಿಕ ಸರಬರಾಜು ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮಳೆಯಿಂದ 245 ಮನೆಗಳಿಗೆ ಹಾನಿ

ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರಿನ ಅವಧಿಯಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಜೂನ್ 1ರಿಂದ ಆಗಸ್ಟ್ 5ರ ತನಕ ಒಟ್ಟು ವಾಡಿಕೆ 15.8 ಸೆಂ.ಮೀ. ಇತ್ತು. ಆದರೆ, 21.7 ಸೆಂ.ಮೀ. ಮಳೆಯಾಗಿದೆ. ಜೂನ್‌ನಲ್ಲಿ  ನಾಲ್ಕು ಜನ ಸಿಡಿಲು ಬಡಿದು ಮೃತಪಟ್ಟಿದ್ದು, ಇವರ ನೇರ ವಾರಸುದಾರರಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ. 245 ಮನೆಗಳಿಗೆ ಹಾನಿಯಾಗಿದ್ದು, 124 ಮನೆಗಳಿಗೆ ಪರಿಹಾರ ವಿತರಿಸಲಾಗಿದೆ. 121 ಮನೆಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು