ಶುಕ್ರವಾರ, ಜನವರಿ 17, 2020
24 °C
ಸಿಎಎ ವಿರುದ್ಧ ಸಂಘಟನೆಗಳ ಪ್ರತಿಭಟನೆ

ಕಾಯ್ದೆಯಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ: ಜನಾಬ್ ಅಲ್‌ ಅಕ್ತರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ  ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದವರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಒಕ್ಕೂಟದ ಪ್ರಧಾನ ಸಂಚಾಲಕ ಜನಾಬ್‌ ಅಲ್‌ ಹಜ್‌ ಅಕ್ತರ್‌ ಅನ್ಸಾರಿ ಮಾತನಾಡಿ,‘ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ಸಂವಿಧಾನ ವಿರೋಧಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಈ ಕಾಯ್ದೆಯ ಹಿಂದೆ ಭಾರತೀಯರಲ್ಲಿ ಭೇದ–ಭಾವ ಉಂಟುಮಾಡುವ ದುರುದ್ಧೇಶ ಇದೆ’ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರಾದ್ಯಂತ ಎನ್‌ಆರ್‌ಸಿ ಜಾರಿಗೆ ತರುವ ಮೂಲಕ ಈಗಾಗಲೇ ಪೌರತ್ವ ಹೊಂದಿರುವ ಭಾರತೀಯ ನಾಗರಿಕರಿಗೆ ಅವರ ಪೌರತ್ವ ಸಾಬೀತುಪಡಿಸಲು ಹೇಳುತ್ತಿರುವುದು ಖಂಡನೀಯ ಎಂದರು.

ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಪಥದತ್ತ ಸಾಗಿರುವ ದೇಶ ಹಲವು ಸಾಧನೆ ಮಾಡಿ ಕೀರ್ತಿಪತಾಕೆಯನ್ನು ಹಾರಿಸುತ್ತಿರುವಾಗ, ಸ್ವತಃ ಕೇಂದ್ರ ಸರ್ಕಾರವೇ ಸಂವಿಧಾನ ಬಾಹಿರವಾಗಿರುವ ಸಿಎಎ ಮತ್ತು ಎನ್.ಆರ್.ಸಿ ಕಾಯ್ದೆಗಳನ್ನು ಜಾರಿಗೆ ತಂದು ನಾಗರಿಕರಲ್ಲಿ ಧರ್ಮ ಆಧಾರಿತ, ಜಾತಿಯಾಧರಿತ ಬೇಧ-ಭಾವಗಳನ್ನು ಉಂಟು ಮಾಡುತ್ತಿದೆ. ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ ಸಂವಿಧಾನ ವಿರೋಧಿಯಾದ ಈ ಕಾಯ್ದೆಯನ್ನು ಹಿಂಪಡೆಯಲು ಸೂಚಿಸಬೇಕು ಎಂದು ಮನವಿ ಮಾಡಿದರು.

ಮುಸ್ಲಿಂ ಮುಖಂಡರಾದ ಹಫಿಜ್‌ ಕಮಾಲ್‌ ಮುಸ್ತಫಾ, ಶಾಮೀದ್‌ ಮನಿಯಾರ್‌, ನೂರುಲ್ಲಾ ಖಾದ್ರಿ, ಫಖರುದ್ಧಿನ್‌ ಸಾಬ್‌, ಸೈಯದ್‌ ಅಲಿ, ಮುರ್ತುಜಾ ಸಾಬ್‌, ಸೈಯದ್‌ ಹಾಷುಮುದ್ದೀನ್‌, ಪ್ರಗತಿಪರ ಹೋರಾಟಗಾರರಾದ ಜೆ.ಭಾರದ್ವಾಜ್‌, ಫಿರ್‌ ಭಾಷಾ, ಕರಿಯಪ್ಪ ಗುಡಿಮನಿ, ಮುನಿರ್‌ ಕಾಟಹಳ್ಳಿ, ಮುಕುಂದರಾವ್‌ ಭವಾನಿಮಠ, ಹುಲುಗಪ್ಪ, ಕೆ.ಅಂಬಣ್ಣ, ರಾಮಣ್ಣ ಬಳ್ಳಾರಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು